ಪುಟ:ಕ್ರಾಂತಿ ಕಲ್ಯಾಣ.pdf/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೬

ಕ್ರಾಂತಿ ಕಲ್ಯಾಣ

ಪದ್ಧತಿಯಂತೆ ಆಪಾದಿತನ ಪರಿಚಯ ನಿರೂಪಣೆ ಪ್ರಮಾಣವಚನಗಳು ಮುಗಿದು, ಕ್ರಮಿತನ ಆದೇಶದಂತೆ ಕರಣಿಕನು ಬಿಜ್ಜಳನ ಆಜ್ಞಾಪತ್ರವನ್ನು ಪಠಿಸಿದನು.

"ಚಾಲುಕ್ಯ ರಾಜ್ಯದಲ್ಲಿ ಹಿಂದಿನಿಂದ ಪ್ರಚಾರದಲ್ಲಿರುವ ವರ್ಣಧರ್ಮಾನುಸಾರವಾದ ಜಾತಿ ಪದ್ಧತಿ ಸಂಪ್ರದಾಯಗಳನ್ನು ಅತಿಕ್ರಮಿಸಿ, ಉತ್ತಮ ವರ್ಣದ ಮಧುವರಸನು ತನ್ನ ಮಗಳಾದ ಲಾವಣ್ಯವತಿ ಎಂಬ ಪ್ರೌಢ ಕನ್ಯೆಯನ್ನು ಮುಚ್ಚಿಗಹರಳಯ್ಯನ ಮಗ ಶೀಲವಂತನೆಂಬ ತರುಣನಿಗೆ ಮದುವೆ ಮಾಡಿಕೊಟ್ಟು ವರ್ಣಸಂಕರ ಮಾಡಿದ್ದಾನೆ. ಪ್ರಭುತ್ವದ ದೃಷ್ಟಿಯಲ್ಲಿ ಇದು ದಂಡಾರ್ಹವಾದ ದೊಡ್ಡ ಅಪರಾಧವಾಗಿರುತ್ತದೆ. ಆಪಾದಿತನನ್ನು ಬಂಧನದಲ್ಲಿಟ್ಟು ಅಪರಾಧದ ಬಗೆಗೆ ವಿಚಾರಣೆ ನಡೆಸಲು ರಾಜಪುರೋಹಿತ ನಾರಣಕ್ರಮಿತರ ಅಧ್ಯಕ್ಷತೆಯಲ್ಲಿ, ಮಂತ್ರಿ ಮಂಚಣನಾಯಕ, ನ್ಯಾಯಶಾಸ್ತಿ ರುದ್ರಭಟ್ಟ, ಇವರನ್ನೊಳಗೊಂಡ ವಿಶೇಷ ನ್ಯಾಯಪೀಠ ರಚಿಸಲ್ಪಟ್ಟಿದೆ. ಆಪಾದಿತನು ಈ ನ್ಯಾಯಪೀಠ ವಿಚಾರಣೆ ನಡೆಸಿ ವಿಧಿಸುವ ದಂಡಾಜ್ಞೆಗೆ ಬದ್ದನಾಗಿರುತ್ತಾನೆ."

ಆಪಾದನೆಯ ಅಂಶವನ್ನು ಕರಣಿಕನು ಓದಿ ಮುಗಿಸಿದ ಮೇಲೆ ಕ್ರಮಿತನು ಮಧುವರಸನ ಕಡೆ ತಿರುಗಿ,

"ಇದಕ್ಕೆ ನಿಮ್ಮ ಸಮಾಧಾನವೇನು?" ಎಂದು ಕೇಳಿದನು.

ವಿಚಾರಣೆ ತಾಳಿದ ಈ ಹೊಸ ರೂಪದಿಂದ ಮಧುವರಸನಿಗೆ ಆಶ್ಚರ್ಯವಾಯಿತು. ನ್ಯಾಯಪೀಠಕ್ಕೆ ವಂದಿಸಿ ಅವನು,

"ಈ ಆಜ್ಞಾಪತ್ರದ ವಿಚಾರದಲ್ಲಿ ಕೆಲವು ವಿವರಗಳನ್ನು ತಿಳಿದುಕೊಳ್ಳಬೇಕಾಗಿದೆ. ನ್ಯಾಯಪೀಠ ಅನುಮತಿ ಕೊಟ್ಟರೆ ಕೇಳುತ್ತೇನೆ," ಎಂದು ಮನವಿ ಮಾಡಿಕೊಂಡನು.

ಕ್ರಮಿತ- "ಕೇಳಬಹುದು."

ಮಧುವರಸ- "ನಾನು ವರ್ಣಸಂಕರ ಮಾಡಿದೆನೆಂದು ಆಪಾದಿಸಿ ಕಲ್ಯಾಣದ ನಾಗರಿಕರು ಸಲ್ಲಿಸಿದ್ದ ಮನವಿ ಪತ್ರ ಏನಾಯಿತು? ಆಪಾದಿತರ ಪಟ್ಟಿಯಲ್ಲಿ ಬೇರೆ ಯಾರಿದ್ದಾರೆ? ಮನವಿಯ ಬಗೆಗೆ ಸರ್ವಾಧಿಕಾರಿ ಬಿಜ್ಜಳರಾಯರು ರಾಜಸಭೆಯಲ್ಲಿ ನಡೆಸಿದ ವಿಚರಣೆಯ ವರದಿ ನ್ಯಾಯಪೀಠದ ಮುಂದಿದೆಯೆ? ಈ ಪ್ರಶ್ನೆಗಳಿಗೆ ಉತ್ತರ ದೊರಕಿದ ಮೇಲೆ ನನ್ನ ಮೇಲಿನ ಆಪಾದನೆಗೆ ಸಮಾಧಾನ ಹೇಳುತ್ತೇನೆ."

ಮಧುವರಸನ ಪ್ರಶ್ನೆ ನ್ಯಾಯಪೀಠವನ್ನು ಗೊಂದಲದಲ್ಲಿ ಕೆಡವಿತು. ಚರ್ಚೆ ನಡೆಸಿ ತಮ್ಮ ನಿಲವನ್ನು ನಿರ್ಧರಿಸಿಕೊಳ್ಳಲು, ಮೂವರು ನ್ಯಾಯಮೂರ್ತಿಗಳು ವಿಶ್ರಾಂತಿಗಾಗಿ ಪ್ರತ್ಯೇಕಿಸಲ್ಪಟ್ಟಿದ್ದ ಪಾರ್ಶ್ವದ ಕೊಠಡಿಗೆ ಹೋದರು. ಅವರು ಅಧಿಕರಣದ ಚಾವಡಿಗೆ ಹಿಂದಿರುಗಲು ಕೊಂಚಕಾಲ ಹಿಡಿಯಿತು.