ಪುಟ:ಕ್ರಾಂತಿ ಕಲ್ಯಾಣ.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ಕ್ರಾಂತಿ ಕಲ್ಯಾಣ

ಅವಿವೇಕಿಯೇ ನಾನು ?” ಎಂದು ನುಡಿದನು. ಅಂಗಿ ಉತ್ತರೀಯಗಳನ್ನು ಧರಿಸಿ ಕ್ರಮಿತನ ಸಂಗಡ ಹೊರಡಲು ಸಿದ್ಧನಾದನು.

***

ರಥ ಕಲಚೂರ್ಯ ಅರಮನೆಯನ್ನು ತಲುಪಿದಾಗ ಸಂಜೆ ಮುಗಿಯುತ್ತ ಬಂದಿತ್ತು. ಊಳಿಗದವರು ಪಂಜುಗಳನ್ನು ಹೊತ್ತಿಸಿಡುತ್ತಿದ್ದರು. ಮಹಾದ್ವಾರದ ಒಂದು ಪಾರ್ಶ್ವದಲ್ಲಿದ್ದ ನಾಟಕಶಾಲೆ ದೀಪಮಾಲಿಕೆಗಳಿಂದ ಬೆಳಗುತ್ತಿತ್ತು. ವಾತಾಯನ ಜಾಲಂದರಗಳಿಂದ ಸುಗಂಧ ರೂಪಗಳ ಹೊಗೆ ಕತ್ತಲೆಯ ಕಿರು ಮೋಡಗಳಂತೆ ಹೊರಗೆ ಬರುತ್ತಿತ್ತು. ಗಾಯಕಿಯರ ಗೀತ ಧ್ವನಿಯೊಡನೆ ನರ್ತಕಿಯರ ಕಾಲ್ಗೆಜ್ಜೆಗಳ ನುಣ್ಣನಿ ಅಪೂರ್ವ ಸಂಗೀತವೊಂದನ್ನು ಸೃಷ್ಟಿಸಿತ್ತು.

ಕ್ರಮಿತನು ಪಸಾಯಿತನೊಬ್ಬನನ್ನು ಹತ್ತಿರ ಕರೆದು, "ಪ್ರಭುಗಳೆಲ್ಲಿದ್ದಾರೆ?” ಎಂದು ಕೇಳಿದನು.

“ಪಟ್ಟಾಭಿಷೇಕಕ್ಕೆ ಆಹ್ವಾನಿತರಾಗಿ ಭುವನೇಶ್ವರದಿಂದ ಬಂದಿರುವ ನಾಟ್ಯ ತಂಡದ ಪ್ರದರ್ಶನ, ನಾಟಕಶಾಲೆಯಲ್ಲಿ ಪ್ರಭುಗಳ ಸಮಕ್ಷಮ ನಡೆಯುತ್ತಿದೆ.”

“ನಾಟ್ಯಾರಂಭವಾಗಿ ಎಷ್ಟು ಹೊತ್ತಾಯಿತು?” “ಪ್ರಹರಕ್ಕೆ ಮೇಲಾಯಿತು. ಇನ್ನೇನು ಮುಗಿಯುತ್ತದೆ.”

“ಮುಗಿದ ಕೂಡಲೇ ಪ್ರಭುಗಳಿಗೆ ಅರಿಕೆ ಮಾಡಬೇಕು. ನಾನು ಮಂತ್ರಶಾಲೆಯಲ್ಲಿ ಪ್ರಭುಗಳ ಆಜ್ಞೆಗಾಗಿ ಕಾದಿರುತ್ತೇನೆ.”

ಪಸಾಯಿತನು ಕುತೂಹಲದಿಂದ ತಲೆಯೆತ್ತಿ ಕ್ರಮಿತನ ಕಡೆ ನೋಡುತ್ತ “ಏನೆಂದು ಅರಿಕೆ ಮಾಡಬೇಕು, ಒಡೆಯರೆ?” ಎಂದನು.

“ಪ್ರಭುಗಳ ಆಜ್ಞೆಯಂತೆ ಕವೀಂದ್ರರು ಸಂದರ್ಶನಕ್ಕಾಗಿ ಬಂದಿದ್ದಾರೆ ಎಂದು ತಿಳಿಸಿದರೆ ಸಾಕು."

“ಆಜ್ಞೆ", ಎಂದು ಹೇಳಿ ಪಸಾಯಿತನು ನಾಟಕಶಾಲೆಯ ಕಡೆ ಹೋಗುತ್ತಿದ್ದಂತೆ ನಾರಣಕ್ರಮಿತನು ಅಗ್ಗಳನನ್ನು ಅರಮನೆಯ ಇನ್ನೊಂದು ಭಾಗಕ್ಕೆ ಕರೆದುಕೊಂಡು ಹೋಗಿ, ಕಲಶ ಕನ್ನಡಿ ಭದ್ರಾಸನಗಳಿಂದ ಅಲಂಕೃತವಾಗಿದ್ದ ಮಂತ್ರಶಾಲೆಯಲ್ಲಿ ಕುಳ್ಳಿರಿಸಿದನು.

ಕೂಡಲೆ ಬಿಳಿಯ ಸೀರೆಗಳನ್ನುಟ್ಟ ತರುಣ ದಾಸಿಯರಿಬ್ಬರು ತಣ್ಣನೆಯ ಪನ್ನೀರನ್ನು ಅಭ್ಯಾಗತರ ಮೇಲೆ ಸಿಂಪಡಿಸಿ ಸುಖೋಷ್ಣವಾದ ಪಾನೀಯದ ಬಟ್ಟಲುಗಳನ್ನು ತಂದು ಮುಂದಿಟ್ಟರು. ಕ್ರಮಿತನೂ ಅಗ್ಗಳನೂ ಅವುಗಳನ್ನು ಹನಿಹನಿಯಾಗಿ ಹೀರುತ್ತಿದ್ದಂತೆ ಇನ್ನೊಬ್ಬ ದಾಸಿ ಹೂವು ತಾಂಬೂಲ ಪಟ್ಟಿಗಳ