ಪುಟ:ಕ್ರಾಂತಿ ಕಲ್ಯಾಣ.pdf/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೧೭

ಮಧುವರಸನ ಮೇಲೆ ಅವಜ್ಞೆಯ ದೃಷ್ಟಿ ಬೀರಿ ಕ್ರಮಿತನು ಹೇಳಿದನು: "ನಿಮ್ಮ ಪ್ರಶ್ನೆಗಳು ಸರ್ವಾಧಿಕಾರಿ ಬಿಜ್ಜಳರಾಯರ ಆಜ್ಞೆಯನ್ನು ಸಂದೇಹಕ್ಕೀಡು ಮಾಡುತ್ತವೆ. ನ್ಯಾಯಪೀಠ ಅವುಗಳಿಗೆ ಉತ್ತರ ಕೊಡುವುದಿಲ್ಲ. ನಿಮ್ಮ ಮೇಲಿನ ಆಪಾದನೆಯನ್ನು ಕೇಳಿದ್ದೀರಿ. ಅದಕ್ಕೆ ನಿಮ್ಮ ಸಮಾಧಾನವೇನು?

ಕ್ರಮಿತನ ಅಂತರಂಗವನ್ನು ತಿಳಿದ ಮಧುವರಸನು, "ಸರ್ವಾಧಿಕಾರಿಗಳ ಆಜ್ಞೆಯನ್ನು ಪ್ರಶ್ನಿಸುವ ಉದ್ದೇಶ ನನಗಿರುವುದಿಲ್ಲ. ನನ್ನ ವಿರುದ್ಧವಾಗಿ ನಾಗರಿಕರ ಮನವಿ, ಅದರ ವಿಚಾರಣೆಗಾಗಿ ಸರ್ವಾಧಿಕಾರಿಗಳು ಏರ್ಪಡಿಸಿದ್ದ ರಾಜಸಭೆಯಲ್ಲಿ ನಡೆದ ವಾದವಿವಾದಗಳು, ನನಗೆ ಸಹಾಯಕವಾಗಿವೆ. ವಿಚಾರಣೆಯ ಕಡತದಿಂದ ಅವುಗಳನ್ನು ತೆಗೆದುಹಾಕಿದರೆ ನನ್ನ ಪ್ರತಿವಾದದ ಮೂಲವನ್ನೇ ಛೇದಿಸಿದಂತಾಗುವುದು," ಎಂದನು.

"ಪ್ರಭುತ್ವ ಈಗ ನಿಮ್ಮನ್ನು ವಿಚಾರಣೆಗೆ ಗುರಿಪಡಿಸಿದೆ. ನಾಗರಿಕರ ಮನವಿ, ಆ ಸಂಬಂಧವಾಗಿ ರಾಜಸಭೆಯಲ್ಲಿ ನಡೆದ ವಾದವಿವಾದಗಳು, ಈಗ ನಮ್ಮ ಮುಂದಿರುವ ಆಪಾದನೆಯ ವಿಚಾರಣೆಗೆ ಅಗತ್ಯವಿಲ್ಲವೆಂದು ಸರ್ವಾಧಿಕಾರಿಗಳು ನಿರ್ಧರಿಸಿರುವುದರಿಂದ ಅವುಗಳ ಉಲ್ಲೇಖನಕ್ಕೆ ನ್ಯಾಯಪೀಠ ಅವಕಾಶ ಕೊಡುವುದಿಲ್ಲ." –ಕ್ರಮಿತನು ನಿರ್ಧಾರಕ ಕಂಠದಿಂದ ಹೇಳಿದನು.

ಮಂಚಣ ರುದ್ರಭಟ್ಟರು ಕ್ರಮಿತನ ನಿಲವನ್ನು ಸಮರ್ಥಿಸಿದರು.

ತನ್ನ ರಕ್ಷಣೆಯ ಬಗೆಗೆ ನಿರಾಶನಾದ ಮಧುವರಸನು, "ಈ ವ್ಯವಹಾರದಲ್ಲಿ ನನ್ನ ಸಹ ಆಪಾದಿತರಾರೆಂಬುದನ್ನು ತಿಳಿಯುವ ಅವಕಾಶವೂ ನನಗಿಲ್ಲವೆ?" ಎಂದು ಪುನಃ ಹೇಳಿದನು.

ಕ್ರಮಿತನು ಉತ್ತರಕೊಡದಿರುವುದನ್ನು ಕಂಡು ಮಂಚಣನು, "ಇದೇ ಆಪಾದನೆಯ ಮೇಲೆ ಹರಳಯ್ಯನ ವಿಚಾರಣೆ ಪ್ರತ್ಯೇಕವಾಗಿ ನಡೆಯುವುದು. ಈ ಎರಡು ವ್ಯವಹಾರಗಳನ್ನು ಒಂದುಗೂಡಿಸಲಾಗದೆಂದು ಸರ್ವಾಧಿಕಾರಿಗಳ ಆಜ್ಞೆ." ಎಂದು ಹೇಳಿದನು.

ಶೀಲವಂತ ಲಾವಣ್ಯವತಿಯರನ್ನು ಆಪಾದಿತರ ಪಟ್ಟಿಯಲ್ಲಿ ಸೇರಿಸಿಲ್ಲವೆಂದು ತಿಳಿದು ಮಧುವರಸನಿಗೆ ಸಮಾಧಾನವಾಯಿತು. "ಹರಳಯ್ಯನವರು ವ್ಯವಹಾರ ಕುಶಲರಲ್ಲ. ನನ್ನ ಪ್ರತಿವಾದದಿಂದ ಅವರಿಗೆ ಆಗಬಹುದಾದ ಸಹಾಯವನ್ನು ನಿರಾಕರಿಸುವುದು ನ್ಯಾಯಪೀಠದ ಉದ್ದೇಶವೆ?" ಎಂದು ಅವನು ಪ್ರಶ್ನಿಸಿದನು.

"ಆಪಾದಿತರಿಗೆ ನ್ಯಾಯಸಮ್ಮತವಾದ ರಕ್ಷಣೆ ಸಹಾಯಗಳನ್ನು ಕೊಡಲು ನ್ಯಾಯಪೀಠ ಯಾವಾಗಲೂ ಸಿದ್ಧವಾಗಿರುತ್ತದೆ. ಹರಳಯ್ಯನವರ ವಿಚಾರವಾಗಿ