ಪುಟ:ಕ್ರಾಂತಿ ಕಲ್ಯಾಣ.pdf/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೮

ಕ್ರಾಂತಿ ಕಲ್ಯಾಣ

ನೀವು ನಿಶ್ಚಿಂತರಾಗಿ ನಿಮ್ಮ ಪ್ರತಿವಾದವನ್ನು ಪ್ರಾರಂಭಿಸಬಹುದು," –ಕ್ರಮಿತನು ಅಧಿಕಾರವಾಣಿಯಿಂದ ನುಡಿದನು.

ಈ ವಿಚಾರವಾಗಿ ಹೆಚ್ಚಿನ ಚರ್ಚೆ ವಿಫಲವೆಂದು ತಿಳಿದು ಮಧುವರಸನು "ನ್ಯಾಯಪೀಠ ಈ ವಿಚಿತ್ರ ನಿಲುವನ್ನು ತಳೆಯುವುದಾದರೆ ನನ್ನ ಪ್ರತಿವಾದವನ್ನು ಕೆಲವೇ ಮಾತುಗಳಲ್ಲಿ ಮುಗಿಸುತ್ತೇನೆ." ಎಂದು ಪ್ರಾರಂಭಿಸಿ ಮುಂದುವರೆದು ಹೇಳಿದನು:

"ಆಜ್ಞಾಪತ್ರದಲ್ಲಿ ಸೂಚಿಸಿರುವಂತೆ ನನ್ನಿಂದ ವರ್ಣಸಂಕರದ ಅಪರಾಧ ನಡೆದಿರುವುದಿಲ್ಲ. ನಾನೂ ಹರಳಯ್ಯನವರೂ ಶರಣಧರ್ಮದ ಅನುಯಾಯಿಗಳು. ಸಮುದ್ರವನ್ನು ಸೇರಿದ ನದಿ ತನ್ನ ನಾಮರೂಪವನ್ನು ಕಳೆದುಕೊಂಡು ಸಮುದ್ರವೇ ಆಗುವಂತೆ ಈಗ ನಾನೂ ಹರಳಯ್ಯನವರೂ ನಮ್ಮ ಹಿಂದಿನ ಜಾತಿ ಸೂತಕಗಳನ್ನು ಕಳೆದುಕೊಂಡು ಸಮಾನ ಧರ್ಮಿಗಳಾಗಿದ್ದೇವೆ. ಜಾತಿಪಂಥ ವರ್ಣಾಶ್ರಮಗಳಿಂದ ಸಮಾಜದಲ್ಲಿ ಉದ್ಭವಿಸುವ ಮೇಲು ಕೀಳು ಸ್ಪೃಶ್ಯ ಅಸ್ಪೃಶ್ಯಭಾವನೆಗಳನ್ನು ತೊಡೆದು ಹಾಕಿ ಸ್ತ್ರೀ ಪುರುಷರಾದಿಯಾಗಿ ಎಲ್ಲರಿಗೂ ಸಮಾನ ಹಕ್ಕುಬಾಧ್ಯತೆಗಳನ್ನು ಕೊಡುವುದು ಶರಣಧರ್ಮದ ಮೂಲೋದ್ದೇಶ. ಶೈವಧರ್ಮ ಆಗಮಗಳು ಹಿಂದಿನಿಂದ ತಾತ್ವಿಕವಾಗಿ ಪ್ರತಿಪಾದಿಸಿರುವ ಈ ಸರ್ವ ಸಮಾನತೆಯ ತತ್ವವನ್ನು ಕಾರ್ಯಗತ ಮಾಡಲು ಶರಣಧರ್ಮ ಪ್ರಯತ್ನಿಸುತ್ತಿದೆ. ಶರಣಧರ್ಮದ ಪದ್ಧತಿ ಸಂಪ್ರದಾಯಗಳಿಗೆ ಅನುಗುಣವಾಗಿ ಲಾವಣ್ಯವತಿ ಶೀಲವಂತರ ವಿವಾಹ ನಡೆದಿರುತ್ತದೆ. ಶರಣರೆಲ್ಲ ಅದನ್ನು ಅನುಮೋದಿಸಿರುತ್ತಾರೆ. ಎಲ್ಲ ಮತಧರ್ಮಗಳ ಸಂಪ್ರದಾಯ ಪದ್ಧತಿಗಳನ್ನು ರಕ್ಷಿಸುವುದು ರಾಜನ ಕರ್ತವ್ಯ. ಅದರಂತೆ ಶರಣಧರ್ಮವನ್ನು ರಾಜನು ರಕ್ಷಿಸುವುದು ನಿಜವಾದ ರಾಜಧರ್ಮ. ಬೇರೆ ಧರ್ಮಗಳ ಪದ್ಧತಿ ಸಂಪ್ರದಾಯಗಳಿಂದ ಶರಣಧರ್ಮವನ್ನು ಅಳೆದು ನೋಡಿ ತಪ್ಪುಗಳನ್ನು ಹುಡುಕುವುದು ರಾಜಧರ್ಮಕ್ಕೆ ಉಚಿತವೆನಿಸದು. ಈ ಕಾರಣಗಳಿಂದ ನನ್ನ ಮೇಲಿನ ಆಪಾದನೆಗಳನ್ನು ತೊಡೆದು ಹಾಕಿ ಈ ಅನ್ಯಾಯದ ವ್ಯವಹಾರವನ್ನು ಮುಗಿಸಬೇಕಾಗಿ ಧರ್ಮಾಧಿಕರಣವನ್ನು ಪ್ರಾರ್ಥಿಸುತ್ತೇನೆ."

ಮಧುವರಸನ ಪ್ರತಿವಾದ ಮೂವರು ನ್ಯಾಯಮೂರ್ತಿಗಳಲ್ಲಿಯೂ ವಿಭಿನ್ನ ಪ್ರತಿಕ್ರಿಯೆಗಳನ್ನು ಉಂಟುಮಾಡಿತು. ಪ್ರತಿವಾದ ಸಂಕ್ಷಿಪ್ತವೂ ಸಮಗ್ರವೂ ಆಗಿದೆಯೆಂದೂ, ಅದನ್ನು ಮುಂದಿಟ್ಟುಕೊಂಡು ಬಿಜ್ಜಳನಲ್ಲಿ ಕ್ಷಮಾಯಾಚನೆಯ ಮನವಿ ಮಾಡಿಕೊಳ್ಳಬಹುದೆಂದೂ ಮಂಚಣನು ಯೋಚಿಸಿದನು. ನ್ಯಾಯಪೀಠದ ನಿಲವನ್ನು ಗೌರವಿಸಿ, ನಾಗರಿಕರ ಮನವಿಪತ್ರವನ್ನು ಉಲ್ಲೇಖಿಸದಿದ್ದುದು ರುದ್ರಭಟ್ಟನಿಗೆ