ಪುಟ:ಕ್ರಾಂತಿ ಕಲ್ಯಾಣ.pdf/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೦

ಕ್ರಾಂತಿ ಕಲ್ಯಾಣ

ಪರುಷ ಮುಟ್ಟಿ ಕಬ್ಬಿಣ ಚಿನ್ನವಾದ ಮೇಲೆ ಕ್ರಿಯೆಯಳಿದು ಮರಳಿ ಕಬ್ಬಿಣವಾಗುವುದೇ? ಶ್ರದ್ದಾಭಕ್ತಿಗಳಿಂದ ನಾನು ಸಂಗ್ರಹಿಸಿದ ಶರಣ ಧರ್ಮವನ್ನು ಸ್ವಾರ್ಥ ಸಾಧನೆಗಾಗಿ ವಿಕ್ರಯಿಸಲೆ? ಚಾಲುಕ್ಯ ಧರ್ಮಾಧಿಕರಣವನ್ನು ಅಲಂಕರಿಸಿದ ನ್ಯಾಯಮೂರ್ತಿಯೊಬ್ಬರು ಆತ್ಮನಾಶಕವಾದ ಈ ಅನೀತಿ ಅಧರ್ಮದ ಸಲಹೆಯನ್ನು ಭಯ ಸಂಕೋಚಗಳಿಲ್ಲದೆ ದಿಟ್ಟತನದಿಂದ ಸೂಚಿಸುವಷ್ಟು ಹಗುರವಾಯಿತೆ ಈ ಪ್ರಭುತ್ವ?"

ಕ್ರಮಿತನು ಚಡಪಡಿಸಿ ಎದ್ದು, "ಮುಗಿಯಲಿ! ಮುಗಿಯಲಿ ನಿಮ್ಮ ಅನರ್ಥ ಪ್ರತಿವಾದ! ನೀವು ನ್ಯಾಯಪೀಠಕ್ಕೆ ಅಪಮಾನ ಮಾಡುತ್ತಿದ್ದೀರಿ!" ಎಂದು ಗಜರಿ ನುಡಿದು ಬೊಬ್ಬಿಟ್ಟನು.

ಮಧುವರಸನು ತನ್ನ ಪ್ರತಿವಾದ ಮುಗಿದಿಲ್ಲವೆಂದು ಸೂಚಿಸಲು ಕೈಯೆತ್ತಿದಾಗ ಶೃಂಖಲೆ ಘಣ! ಘಣ! ಶಬ್ದ ಮಾಡಿತು.

ಮಂಚಣನು ಗಂಭೀರ ಕಂಠದಿಂದ, "ದಯಮಾಡಿ ರಾಜಪುರೋಹಿತರು ಸುಮ್ಮನಿದ್ದರೆ ಒಳಿತು. ಆಪಾದಿತನ ಪ್ರತಿವಾದವನ್ನು ಪೂರ್ಣವಾಗಿ ಕೇಳುವುದು ನ್ಯಾಯಪೀಠದ ಹೊಣೆ," ಎಂದನು.

ಶಾಂತಿ ನೆಲೆಸಿದ ಮೇಲೆ ಮಧುವರಸನು ಮುಂದುವರಿದು ಹೇಳಿದನು:

"ಶರಣರ ಅಗ್ನಿಪರೀಕ್ಷೆ ಸಮೀಪಿಸುತ್ತಿದೆಯೆಂದು ನನಗೆ ತಿಳಿದಿದೆ. ಅದಕ್ಕಾಗಿ ಯಜ್ಞಶಾಲೆ ಸಿದ್ಧವಾಗುತ್ತಿದೆ. ಸಮಿಧೆಗಳನ್ನು ಸಂಗ್ರಹಿಸುತ್ತಿದ್ದಾರೆ. ಬಲಿಪೀಠ ರಚಿತವಾಗಿದೆ. ಅಭಿಚಾರದ ಮಂತ್ರಘೋಷ ಆರಂಭವಾಗಿ ಯಜ್ಞಕುಂಡದಲ್ಲಿ ಅಗ್ನಿ ಪ್ರಜ್ವಲಿಸುತ್ತಿದೆ. ಬಸವಣ್ಣನವರ ನಿರ್ವಾಸನ ಅದಕ್ಕೆ ಕೊಟ್ಟ ಆಜ್ಯಾಹುತಿ. ಈ ನರಮೇಧ ಮಹಾಯಜ್ಞದ ಮೊದಲ ಬಲಿಪಶು ನಾನೆಂಬುದು ಈಶ್ವರೇಚ್ಛೆಯಾದರೆ ಸಿದ್ಧನಾಗಿದ್ದೇನೆ.

"ನಚ್ಚಿದೆನೆಂದರೆ, ಮೆಚ್ಚಿದೆನೆಂದರೆ, ಸಲೆ ಮಾರುವೋದೆನೆಂದರೆ,
ತನುವನಲ್ಲಾಡಿಸಿ ನೋಡುವೆ ನೀನು,
ಮನವನಲ್ಲಾಡಿಸಿ ನೋಡುವೆ ನೀನು,
ಧನವನಲ್ಲಾಡಿಸಿ ನೋಡುವೆ ನೀನು,
ಇದಕೆಲ್ಲ ಅಂಜದಿದ್ದರೆ ಭಕ್ತಿ ಕಂಪಿತ ನಮ್ಮ ಕೂಡಲ ಸಂಗಮದೇವ!"

-ಎಂದು ಹೇಳಿದ್ದಾರೆ ಬಸವಣ್ಣನವರು. ನಿಮ್ಮ ದಯಾಶೂನ್ಯವಾದ ದಬ್ಬಾಳಿಕೆಯಿಂದ ಭಕ್ತಿ ಪ್ರಧಾನವಾದ ಶೈವಧರ್ಮದಲ್ಲಿ ವೀರತ್ವವನ್ನು ಮೂಡಿಸಲು ಶರಣರು ಪಣ ತೊಡಬೇಕಾಗುವುದು. ನನ್ನ ಬಲಿದಾನ ಅದಕ್ಕೆ ಮಾರ್ಗ ದರ್ಶಕವಾಗಲಿ."