ಪುಟ:ಕ್ರಾಂತಿ ಕಲ್ಯಾಣ.pdf/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೨೩

ಮಧುವರಸ ಹರಳಯ್ಯಗಳ ಬಂಧನದ ಸುದ್ದಿ ಏಕಕಾಲದಲ್ಲಿ ಮಹಮನೆಗೆ ತಲುಪಿತು. ಚೆನ್ನಬಸವಣ್ಣನವರು ಸುದ್ದಿ ಕೊಡಲು ಬಂದ ಶೀಲವಂತ ಲಾವಣ್ಯ ವತಿಯರಿಗೆ ಸಮಾಧಾನ ಹೇಳಿ, "ಬಿಜ್ಜಳರಾಯರು ಇನ್ನೆರಡು ದಿನಗಳಲ್ಲಿ ಕಲ್ಯಾಣಕ್ಕೆ ಹಿಂದಿರುಗುತ್ತಾರೆ. ನೀವು ಅಪೇಕ್ಷಿಸಿದರೆ ಅವರಿಗೆ ಕ್ಷಮಾಯಾಚನೆಯ ಮನವಿ ಸಲ್ಲಿಸಬಹುದು. ಆದರೆ ಅದಕ್ಕಿಂತ ಧರ್ಮಾಧಿಕರಣದ ವಿಚಾರಣೆ ಯಾವ ಮಾರ್ಗ ಹಿಡಿಯುವುದೆಂಬುದನ್ನು ಕಾದು ನೋಡಿದರೆ ಒಳ್ಳೆಯದು," ಎಂದು ಹೇಳಿದರು.

ಸಂಗಡಿದ್ದ ಮಾಚಿದೇವರು, "ಚೆನ್ನಬಸವಣ್ಣನವರು ಸೂಚಿಸಿದ ಎರಡನೆಯ ಮಾರ್ಗ ಶರಣರಿಗೆ ಉಚಿತವಾದದ್ದು. ಜಿಜ್ಜಳರಾಯರಿಗೆ ಮನವಿ ಸಲ್ಲಿಸುವುದರಿಂದ ನಮ್ಮ ದೌರ್ಬಲ್ಯವನ್ನು ತೋರಿಸಿಕೊಂಡಂತಾಗುವುದು," ಎಂದರು.

ಈ ವಿಚಾರದ ಪರ್ಯಾಲೋಚನೆಗಾಗಿ ಮರುದಿನ ಶರಣರ ಸಭೆ ಕರೆಯ ತಕ್ಕದ್ದೆಂದೂ, ಅಷ್ಟರಲ್ಲಿ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳನ್ನೂ ತಿಳಿಯಲು ಚೆನ್ನಬಸವಣ್ಣನವರು ಪ್ರಯತ್ನಿಸಬೇಕೆಂದೂ ಗೊತ್ತಾಯಿತು.

ಚೆನ್ನಬಸವಣ್ಣನವರು ಪಡಿಹಾರಿ ಉತ್ತಣ್ಣನನ್ನು ಕರೆದು, ಮಧುವರಸ ಹರಳಯ್ಯಗಳಿಗಾಗಿ ಪ್ರತಿದಿನ ಮಹಮನೆಯಿಂದ ಎಡೆಮಾಡಿ ಕಳುಹಿಸುವಂತೆ ಹೇಳಿದರು. ಅದರಂತೆ ತಮ್ಮಡಿಯೊಬ್ಬನು ಒಬ್ಬನಿಗೆ ಒಂದು ಹೊತ್ತಿಗೆ ಬೇಕಾಗುವಷ್ಟು ತಿಂಡಿಯ ಪೊಟ್ಟಣಗಳನ್ನು ತೆಗೆದುಕೊಂಡು ಹೋದಾಗ ಸೆರೆಮನೆಯ ಕಾವಲು ಭಟರು ತಡೆಯಲಿಲ್ಲ. ಸೆರೆಯಾಳುಗಳಿಗಾಗಿ ಊಟದ ಪೊಟ್ಟಣಗಳನ್ನು ಕಳುಹಿಸುವ ಮಹಮನೆಯ ಪರಿಪಾಟಿ ಅವರಿಗೆ ತಿಳಿದಿತ್ತು.

ಇಂತಹ ಪೊಟ್ಟಣವೊಂದನ್ನು ತಿಂದು ಹರಳಯ್ಯ ವಿಶ್ರಮಿಸಿಕೊಳ್ಳುತ್ತಿದ್ದಂತೆ ಭಟರು ಅವನನ್ನು ನ್ಯಾಯಾಲಯಕ್ಕೆ ಕರೆತಂದರು. ಹರಳಯ್ಯ ನ್ಯಾಯಪೀಠಕ್ಕೆ ವಂದಿಸಿ ತಲೆಬಾಗಿ ನಿಂತನು. ಮಧುವರಸನಿಗಾಗಿ ತಂದಿದ್ದ ಅಸನವನ್ನು ತೋರಿಸಿ ಮಂಚಣ ಕುಳಿತುಕೊಳ್ಳುವಂತೆ ಹೇಳಿದಾಗಲೂ ಹರಳಯ್ಯ ಕುಳಿತುಕೊಳ್ಳಲಿಲ್ಲ . ಪುನಃ ನ್ಯಾಯಪೀಠಕ್ಕೆ ವಂದಿಸಿ, "ಒಡೆಯರ ಮುಂದೆ ನಾನು ಕುಳಿತುಕೊಳ್ಳುವುದು ಸಲ್ಲ. ನಿಂತಿರಲು ಅನುಮತಿ ಬೇಡುತ್ತೇನೆ," ಎಂದು ಬಿನ್ನವಿಸಿಕೊಂಡನು.

ನ್ಯಾಯಪೀಠದ ಕರಣಿಕ ಆಪಾದನೆಯ ಆಜ್ಞೆಯನ್ನು ಪಠಿಸಿದ ಮೇಲೆ ಕ್ರಮಿತನು ಬಿರುಗಣ್ಣುಗಳಿಂದ ಹರಳಯ್ಯನನ್ನು ನೋಡುತ್ತ, "ಇದಕ್ಕೆ ನಿನ್ನ ಉತ್ತರವೇನು?" ಎಂದು ಗದರಿಸಿ ಕೇಳಿದನು.

ಹರಳಯ್ಯ ಕೆಲವು ಕ್ಷಣಗಳು ಬೆಚ್ಚಿದವನಂತೆ ಸುಮ್ಮನಿದ್ದು ಬಳಿಕ