ಪುಟ:ಕ್ರಾಂತಿ ಕಲ್ಯಾಣ.pdf/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೨೫


ವರ್ಣಸಂಕರದ ಅಪರಾಧವನ್ನು ಸ್ಪಷ್ಟವಾಗಿ ನಿರಾಕರಿಸುವ ಹರಳಯ್ಯನ ಹೇಳಿಕೆಯಿಂದ ಮಂಚಣನಿಗೆ ಸಮಾಧಾನವಾಯಿತು. ವಿಚಾರಣೆಯನ್ನು ಮಂಚಣನಿಗೆ ಬಿಡುವುದರಿಂದ ತನ್ನ ಉದ್ದೇಶ ಭಂಗವಾಗುವುದೆಂದು ತಿಳಿದು ಕ್ರಮಿತನು ಪುನಃ ಮಧ್ಯೆ ಬಂದು,

“ನನ್ನ ಪ್ರಶ್ನೆಯೊಂದಕ್ಕೆ ನೀವು 'ವಧೂವರರ ಇಚ್ಛೆಯಂತೆ ಮದುವೆ ನಡೆಯಿತು,' ಎಂದು ಹೇಳಿದಿರಿ. ಅದರ ಅರ್ಥವೇನು?” -ಎಂದು ಪ್ರಶ್ನಿಸಿದನು. ಈ ಸಾರಿ ಅವನ ಕಂಠ ಹೆಚ್ಚು ಮೃದುವೂ ಸಹಜವೂ ಆಗಿತ್ತು.

“ಹೆಣ್ಣು ಗಂಡು ಒಪ್ಪಿದ್ದರಿಂದ ಮದುವೆ ನಡೆಯಿತು. ಈ ವಿಚಾರದಲ್ಲಿ ನಾನಾಗಲಿ ಮಧುವರಸರಾಗಲಿ ಏನೂ ಮಾಡುವಂತಿರಲಿಲ್ಲ.” -ಎಂದು ಹರಳಯ್ಯ ಉತ್ತರ ಕೊಟ್ಟಾಗ, ವಿಚಾರಣೆ ಹೊಸ ಜಾಡು ಹಿಡಿಯುತ್ತಿದೆಯೆಂದು ತಿಳಿದು ಕ್ರಮಿತನು ಉತ್ತೇಜಿತನಾದನು. ಚತುರತೆಯಿಂದ ಪ್ರಶ್ನೆಗಳನ್ನು ಕೇಳಿ, ಶೀಲವಂತ ಆರೋಗ್ಯಧಾಮದಲ್ಲಿ ಹಾವು ಕಚ್ಚಿ ಚಿಕಿತ್ಸೆ ಪಡೆಯುತ್ತಿದ್ದಾಗ ಲಾವಣ್ಯವತಿ ಹಣ್ಣು ಉಪಾಹಾರಗಳನ್ನು ತಂದುಕೊಡುತ್ತಿದ್ದದ್ದು, ಕೆಲವು ದಿನಗಳ ಮೇಲೆ ಮಧುವರಸನು ತಾನಾಗಿ ಮದುವೆಯ ಪ್ರಸ್ತಾಪ ಮಾಡಿದ್ದು, ಮೊದಲು ಹರಳಯ್ಯ ಸಲಹೆಯನ್ನು ನಿರಾಕರಿಸಿದ್ದು, ಶೀಲವಂತ ಲಾವಣ್ಯವತಿಯರು ಪರಸ್ಪರ ಪ್ರೀತಿಸುವರೆಂದು ತಿಳಿದ ಮೇಲೆ ಶರಣರ ಒತ್ತಾಯದಿಂದ ಮದುವೆಗೆ ಒಪ್ಪಿಗೆ ಕೊಟ್ಟಿದ್ದು, ಇತ್ಯಾದಿ ವಿಚಾರಗಳನ್ನು ಹರಳಯ್ಯನಿಂದಲೇ ಹೇಳಿಸಿದನು.

ಅನಂತರ ಹರಳಯ್ಯನ ನೈಷ್ಠಿಕ ಜೀವನದ ಬಗೆಗೆ ಪ್ರಶೋತ್ತರಗಳು ನಡೆದವು. ಪ್ರತಿದಿನ ಪ್ರಾತಃಕಾಲ ಅವನು ಸ್ನಾನ ಪೂಜೆಗಳನ್ನು ಮುಗಿಸಿಕೊಂಡು ಕರ್ಮಗಾರಕ್ಕೆ ಬರುತ್ತಿದ್ದದ್ದು, ಕೆಲಸಗಾರರ ವೇತನ ಮತ್ತು ಲಾಭಾಂಶವನ್ನು ಹಂಚುವುದರಲ್ಲಿ ಅನುಸರಿಸುತ್ತಿದ್ದ ನೀತಿ, ಸಂಜೆ ಮನೆಗೆ ಹಿಂದಿರುಗಿದ ಮೇಲೆ ಪುನಃ ಸ್ನಾನ, ಪೂಜೆ, ಮಧ್ಯರಾತ್ರಿಯವರೆಗೆ ಷಡಕ್ಷರ ಮಂತ್ರ ಜಪ ಮಾಡುತ್ತ ಧ್ಯಾನದಲ್ಲಿ ಕುಳಿತುಕೊಳ್ಳುತ್ತಿದ್ದದ್ದು ಮುಂತಾದ ವಿಚಾರಗಳನ್ನು ಹರಳಯ್ಯನೇ ವಿವರಿಸಿದನು.

“ಈ ನೈಷ್ಠಿಕ ಅಭ್ಯಾಸಗಳನ್ನು ನಿಮಗೆ ಹೇಳಿಕೊಟ್ಟವರಾರು ?” - ಕೊನೆಯಲ್ಲಿ ಕ್ರಮಿತನು ಪ್ರಶ್ನಿಸಿದನು.

“ನನಗೆ ಶರಣ ದೀಕ್ಷೆ ಕೊಟ್ಟ ಜಂಗಮ ಗುರು,” -ಎಂದನು ಹರಳಯ್ಯ. :“ಅವರ ಹೆಸರೇನು?”
“ತಿಳಿಯದು. ಆರೇಳು ವರ್ಷಗಳ ಹಿಂದೆ ಅವರು ಕಲ್ಯಾಣಕ್ಕೆ ಬಂದು