ಪುಟ:ಕ್ರಾಂತಿ ಕಲ್ಯಾಣ.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೧೧

ಚಿನ್ನದ ಹರಿವಾಣಗಳನ್ನು ಎದುರಿಗಿಟ್ಟಳು.

“ಚಾಲುಕ್ಯ ಮಹಾರಾಣಿಯವರ ಆದರಾತಿಥ್ಯದಲ್ಲಿ ಬೆಳೆದ ರಾಜಹಂಸಕ್ಕೆ ಈ ಪಾನಕ ಸಿಹಿನೀರಿನಂತೆ ಕಂಡಿರಬೇಕಲ್ಲವೇ?” ಎಂದು ಕ್ರಮಿತನು ನಗೆಯಾಡಿದನು.

ತನ್ನ ಮತ್ತು ರಾಣಿ ಕಾಮೇಶ್ವರಿಯ ಬಗೆಗೆ ಜನರಲ್ಲಿ ಹರಡಿದ್ದ ಅಪವಾದ ಅಗ್ಗಳನಿಗೆ ತಿಳಿದಿತ್ತು. ಆದರೆ ಅದನ್ನು ಪರಮಾರ್ಥವೆಂದು ಗ್ರಹಿಸುವುದರಿಂದ ಸುಳಿಗಾಳಿಗೆ ರೂಪು ಕೊಟ್ಟಂತಾಗುವುದೆಂದು ಭಾವಿಸಿ ಅವನು, ಉಪೇಕ್ಷೆಯಿಂದ ಕ್ರಮಿತನ ವ್ಯಂಗ್ಯವನ್ನು ಗಮನಿಸದೆ,

“ಮಹಾರಾಣಿ ಕಾಮೇಶ್ವರೀದೇವಿಯವರ ಬಗೆಗೆ ಸಲ್ಲದ ಅಪವಾದಗಳನ್ನಾಡುವ ಜನ ತೈಲಪದೇವರ ಗಣಿಕಾ ಪರಿವಾರದ ವಿಚಾರದಲ್ಲಿ ತುಟಿಪಿಟಕ್ಕೆನ್ನದೆ ಸುಮ್ಮನಿದ್ದದ್ದು ನನಗೆ ಆಶ್ಚರ್ಯವೆನಿಸುತ್ತದೆ. ಕ್ರಮಿತರೆ. ಕವಿಗಳು ಶಾಸಕರಾಗಿದ್ದರೆ ಪ್ರೇಮಜೀವನದಲ್ಲಿ ಸ್ತ್ರೀ ಪುರುಷರಿಬ್ಬರಿಗೂ ಸಮಾನ ಸ್ವಾತಂತ್ರ್ಯ ಕೊಡುತ್ತಿದ್ದರು,” ಎಂದನು.

ಕ್ರಮಿತನ ಮುಖ ಗಂಭೀರವಾಯಿತು. “ಹಾಗಾದರೆ ರಾಜನ ಗಣಿಕಾ ಪರಿವಾರದಂತೆ ರಾಣಿಯೂ ತನಗೊಪ್ಪಿದ ರಸಿಕ ಪರಿವಾರವನ್ನು ರಚಿಸಿಕೊಳ್ಳಬಹುದೆಂದೇ ನಿಮ್ಮ ಅಭಿಪ್ರಾಯ. ನಮ್ಮ ಧರ್ಮಶಾಸ್ತ್ರಗಳು ಅಂತಹ ಸ್ಟೇಚ್ಚಾಚಾರವನ್ನು ಒಪ್ಪುವುದಿಲ್ಲ,” ಎಂದನು.

"ಧರ್ಮಶಾಸ್ತ್ರಗಳು ಏನೇ ಹೇಳಲಿ, ಈಗಿನ ಎಲ್ಲ ರಾಜಮನೆತನಗಳ ಸ್ಟೇಚ್ಚಾಚಾರ ವಿಲಾಸ ಜೀವನಗಳು ಕವಿಯ ಕಾವ್ಯವಸ್ತುಗಳಾಗಿ ಮಾತ್ರವೇ ಉಳಿಯದೆ ವಾಸ್ತವ ವಿಷಯಗಳಾಗಿವೆ. ದಿವಂಗತ ತೈಲಪಮಹಾರಾಜರ ಅಂತಃಪುರ ಪರಿವಾರಗಳು, ವಿಕ್ರಮಾದಿತ್ಯ ಮಹಾರಾಜರ ಕಾಲದಿಂದ ನಡೆದುಬಂದ ಚಾಲುಕ್ಯ ಮಾದರಿಯಂತೆ ರಚಿತವಾಗಿತ್ತು. ಗಣಿಕೆಯರಂತೆ ಕವಿ ಗಾಯಕ ನಟ ನರ್ತಕರೂ ಅರಮನೆಯಲ್ಲಿದ್ದರು. ಮಹಾರಾಣಿ ಕಾಮೇಶ್ವರಿದೇವಿಯವರು ತಮ್ಮ ಅಂತಸ್ತಿನ ಗೌರವರಕ್ಷಣೆಗಾಗಿ ಹಿಂದಿನ ಆ ಪರಿವಾರದಲ್ಲಿ ಕೆಲವು ಜನರನ್ನು ಮಾತ್ರ ಈಗ ಉಳಿಸಿಕೊಂಡಿದ್ದಾರೆ,” ಎಂದು ಅಗ್ಗಳನು ಉತ್ತರಕೊಟ್ಟನು.

ಕ್ರಮಿತನು ತಾಂಬೂಲದ ಪಟ್ಟಿಯೊಂದನ್ನು ತೆಗೆದುಕೊಂಡು ಮೆಲ್ಲುತ್ತ,

“ರಾಜಮಹಾರಾಜರ ಗೌರವ ಪ್ರತಿಷ್ಟೆಗಳಿಗೆ ಗಣಿಕೆಯರಂತೆ ಕವಿಗಾಯಕರ ದೊಡ್ಡ ಪರಿವಾರವೂ ಅಗತ್ಯ. ಆದರೆ ಒಂದು ಗೊತ್ತಾದ ರೀತಿಯಲ್ಲಿ ವ್ಯವಸ್ಥಿತವಾದ ಪರಿಮಿತಿಯಲ್ಲಿ ಅದು ನಡೆಯಬೇಕು. ಧರ್ಮಶಾಸ್ತ್ರದ ನಿಬಂಧನೆಗಳು ಪುಸ್ತಕದ ಬದನೆಕಾಯಿಗಳಾಗಬಾರದು,” ಎಂದು ಕಟುವಾಗಿಯೇ ನುಡಿದನು.