ಪುಟ:ಕ್ರಾಂತಿ ಕಲ್ಯಾಣ.pdf/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೨೯


ಲಾವಣ್ಯವತಿ ಬೆದರಿದಳು. ಏನೋ ಹೇಳತೊಡಗಿ, ತುಟಿ ಕಚ್ಚಿಕೊಂಡು ಆಕ್ರೋಶದ ಬಿರುದನಿಯಿಂದ, “ಇಂತಹ ಅಸಭ್ಯ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವುದಿಲ್ಲ,” ಎಂದಳು.

ಕ್ರಮಿತನು ಅಸಮಾಧಾನದಿಂದ ಚಡಪಡಿಸುತ್ತಿರುವುದನ್ನು ಕಂಡು ಮಂಚಣನು

“ಅವರು ಬಾಂಧವರ ಓಣಿಗೆ ಹೋಗಿದ್ದರೇ ಇಲ್ಲವೇ ಎಂಬುದನ್ನು ನಾವು ಮಾರಯ್ಯನವರಿಂದ ತಿಳಿಯಬಹುದು. ಅಧ್ಯಕ್ಷರು ದಯಮಾಡಿ ಮುಂದಿನ ಪ್ರಶ್ನೆಗೆ ಹೋದರೆ ಒಳ್ಳೆಯದು,” ಎಂದು ಸೂಚನೆಯಿತ್ತನು.

ಕ್ರಮಿತನು ಮಂಚಣನನ್ನು ದುರು ದುರು ನೋಡುತ್ತ ಲಾವಣ್ಯವತಿಯ ಕಡೆ ತಿರುಗಿ, “ಕ್ಷಮಿಸಿರಿ. ಮುಂದೆ ಸಭ್ಯತೆಗೆ ಕುಂದು ಬಾರದಂತೆ ನೋಡಿಕೊಳ್ಳುತ್ತೇನೆ. ಶೀಲವಂತ ಆಕರ್ಷಕ ವ್ಯಕ್ತಿಯಲ್ಲವೆ?” ಎಂದು ಕೇಳಿದನು.

“ನಿಮ್ಮ ಪ್ರಶ್ನೆ ನನಗೆ ಅರ್ಥವಾಗಲಿಲ್ಲ,” ಲಾವಣ್ಯವತಿ ಬೇಸರದಿಂದ ಉತ್ತರ ಕೊಟ್ಟಳು.

“ಅರ್ಥವಾಗುವ ಹಾಗೆ ಕೇಳುತ್ತೇನೆ,” ಎಂದು ಕ್ರಮಿತನು ಕ್ಷಣಕಾಲ ಯೋಚಿಸಿ “ಶೀಲವಂತನಂತಹ ಕಲಾವಿದ ಸುಂದರ ತರುಣನನ್ನು ಕಂಡಾಗ ಸಾಮಾನ್ಯವಾಗಿ ಹೆಂಗಸರು ಮೋಹಿಸುವರಲ್ಲವೆ ?” ಎಂದು ಕೇಳಿದನು.

ಪ್ರಶ್ನೆ ತಾನು ಅಪೇಕ್ಷಿಸಿದಷ್ಟು ಸಭ್ಯತೆಯಿಂದ ಕೂಡಿರಲಿಲ್ಲವೆಂಬುದನ್ನು ಅರಿತು ಕ್ರಮಿತನಿಗೆ ಸಂಕೋಚವಾಯಿತು. ಅದನ್ನು ಗಮನಿಸಿದ ಲಾವಣ್ಯವತಿ ಚತುರತೆಯಿಂದ, “ಸಾಮಾನ್ಯ ಹೆಂಗಸರ ಮನಸ್ಸು ನನಗೆ ಹೇಗೆ ತಿಳಿಯಬೇಕು? ನನ್ನ ವಿಚಾರ ಕೇಳಿದರೆ ಹೇಳುತ್ತೇನೆ,” ಎಂದು ಉತ್ತರಿಸಿದಳು.

“ನೀವು ಶೀಲವಂತನನ್ನು ಆರೋಗ್ಯಧಾಮದಲ್ಲಿ ನೋಡಿದಾಗಲೆ ಮೋಹಿಸಿದಿರಲ್ಲವೆ?” ಕ್ರಮಿತನು ಪುನಃ ಪ್ರಶ್ನಿಸಿದನು.

ಲಾವಣ್ಯವತಿ ಮೌನ.

“ಮೋಹಿಸಿ ಎಂದರೆ ಮೆಚ್ಚಿ ಎಂದು ಅರ್ಥ. ಅದರಲ್ಲಿ ಅಸಭ್ಯತೆಯೇನೂ ಇರುವುದಿಲ್ಲ. ಸಾಕ್ಷಿ ಸಂಕೋಚವಿಲ್ಲದೆ ಉತ್ತರ ಕೊಡಬಹುದು,” ಎಂದು ರುದ್ರಭಟ್ಟನು ವಿವರಣೆ ಕೊಟ್ಟನು.

“ಪ್ರಾಪ್ತ ವಯಸ್ಕರಾದ ವಧೂವರರು ಪರಸ್ಪರ ಮೆಚ್ಚಿದ ಮೇಲೆ ಮದುವೆ ಮಾಡುವುದು ಶರಣರ ಸಂಪ್ರದಾಯ,” -ಎಂದು ಲಾವಣ್ಯವತಿ ದಿಟ್ಟತನದಿಂದ ಉತ್ತರಕೊಟ್ಟಳು.

“ಮೊದಲು ನೀವು ಮೆಚ್ಚಿದಿರಿ. ಆಮೇಲೆ ತಂದೆಗೆ ನಿಮ್ಮ ಮೆಚ್ಚುಗೆಯನ್ನು