ಪುಟ:ಕ್ರಾಂತಿ ಕಲ್ಯಾಣ.pdf/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೩೧

ಲಾವಣ್ಯವತಿಯ ಕುತೂಹಲ ಕೆರಳಿತು. ನ್ಯಾಯಪೀಠದ ಮುಂದಿದ್ದ ಹಲಿಗೆಯನ್ನು ಅವಳು ತಾನಾಗಿ ತೆಗೆದುಕೊಂಡು ಓದಿದಳು. ನಿರ್ಮಲ ಗಗನದಲ್ಲಿ ಇದ್ದಕ್ಕಿದ್ದಂತೆ ಮಿಂಚು ತಲೆದೋರಿತು. ಲಾವಣ್ಯವತಿಯ ಕಣ್ಣುಗಳಿಂದ ಕಿಡಿಗಳು ಉದುರಿದವು.

ಬರೆದಿದ್ದುದನ್ನು ಅಳಿಸಿ ಅವಳು ಕರ್ಕಶಕಂಠದಿಂದ, "ಘೋರನಾರಕಿಗಳು ನೀವು. ನಿಮ್ಮ ಮನಸ್ಸಿನಲ್ಲಿ ಇಂತಹ ಕಲುಷಿತ ಭಾವನೆ ನೆಲೆಸಿದೆಯೆಂದು ನಾನು ಕನಸಿನಲ್ಲಿಯೂ ಭಾವಿಸಿರಲಿಲ್ಲ, ನಿಮ್ಮ ಮುಂದೆ ನಿಲ್ಲುವುದೂ ಅಪರಾಧ!"

-ಎಂದು ಹೇಳಿ ಹಲಿಗೆಯನ್ನು ಕ್ರಮಿತನ ಮುಂದೆಸೆದು ನ್ಯಾಯಪೀಠದಿಂದ ಹೊರಟುಹೋದಳು.

****

"ಸಾಮಾನ್ಯವಾಗಿ ಹೆಂಗಸರು ಬಹುಬೇಗ ಉದ್ರೇಕಗೊಳ್ಳುತ್ತಾರೆ. ಮದುವೆಯಾದ ಮೇಲಿನ ಘಟನೆಗಳಿಂದ ಲಾವಣ್ಯವತಿ ಹೆಚ್ಚು ನೊಂದಿದ್ದಾಳೆ. ದುರ್ಬಲೆ ಯಾಗಿದ್ದಾಳೆ. ಈ ಪರಿಸ್ಥಿತಿಯಲ್ಲಿ ನೀವು ಅವಳ ವಿಚಾರಣೆಯನ್ನು ದೀರ್ಘಕಾಲ ಎಳೆಯಬಾರದಾಗಿತ್ತು"-ಮಂಚಣನೆಂದನು, ಲಾವಣ್ಯವತಿ ಹೋದಮೇಲೆ.

"ಹೆಂಗಸೆಂಬ ಕಾರಣದಿಂದ ಅಗತ್ಯವೆನಿಸುವ ಎಲ್ಲ ಪ್ರಶ್ನೆಗಳನ್ನೂ ಕೇಳದೆ ಹೋದರೆ ಧರ್ಮಾಧಿಕರಣಕ್ಕೆ ದ್ರೋಹ ಮಾಡಿದಂತೆ." –ಕರ್ತವ್ಯ ನಿಷ್ಠೆಯ ಸೋಗಿನಲ್ಲಿ ಕ್ರಮಿತನು ಹೇಳಿದನು.

"ಆದರೂ ನೀವು ಬರೆದುಕೊಟ್ಟ ಪ್ರಶ್ನೆ ಯಾವ ದೃಷ್ಟಿಯಿಂದಲೂ ಉಚಿತವೆನಿಸದು. ನಿಮ್ಮ ಪರಿಶ್ರಮ ವಿಫಲವಾಯಿತು.

"ವಿಫಲವಾಗಲಿಲ್ಲ, ಮಂಚಣನಾಯಕರೆ. ನಾನು ನಿರೀಕ್ಷಿಸಿದ್ದ ಉತ್ತರ ದೊರಕಿತು."

"ಯಾವುದು ಆ ಉತ್ತರ?"
"ಪ್ರಶ್ನೆ ಓದಿದಾಗ ಲಾವಣ್ಯವತಿಯಲ್ಲಾದ ಪ್ರತಿಕ್ರಿಯೆ."
"ಅದರಿಂದ ನಮ್ಮ ಮುಂದಿರುವ ವರ್ಣಸಂಕರ ವ್ಯವಹಾರಕ್ಕೆ ಆದ ಪ್ರಯೋಜನವೇನು?"

"ಮುಂದೆ ನೀವೇ ಅದನ್ನು ತಿಳಿಯುವಿರಿ," –ಕ್ರಮಿತನ ಉತ್ತರ ಅರ್ಥಗರ್ಭಿತವಾಗಿತ್ತು.

"ಆದರೆ ಪ್ರಶ್ನೆಯೇನೆಂಬುದು ನ್ಯಾಯಪೀಠದ ಮೂರನೆಯ ಸದಸ್ಯ ರುದ್ರಭಟ್ಟರಿಗೆ ತಿಳಿಯದು," -ಎಂದು ಮಂಚಣನು ಆಕ್ಷೇಪಿಸಿದನು.