ಪುಟ:ಕ್ರಾಂತಿ ಕಲ್ಯಾಣ.pdf/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೨

ಕ್ರಾಂತಿ ಕಲ್ಯಾಣ

"ಸದ್ಯಕ್ಕೆ ತಿಳಿಯುವ ಅಗತ್ಯವೂ ಇಲ್ಲ. ಆ ರಹಸ್ಯ ಪ್ರಶ್ನೆ ನಮ್ಮಿಬ್ಬರಿಗೆ ತಿಳಿದಿದೆ. ಅದರಿಂದ ಸಾಕ್ಷಿಯಲ್ಲಾದ ಪ್ರತಿಕ್ರಿಯೆಯನ್ನು ರುದ್ರಭಟ್ಟರು ನೋಡಿದ್ದಾರೆ, ಈಗ ಅಷ್ಟು ಸಾಕು,"-ಎಂದು ಹೇಳಿ ಕ್ರಮಿತನು ಶೀಲವಂತನನ್ನು ಕರೆತರುವಂತೆ ಭಟರಿಗೆ ಆಜ್ಞೆ ಮಾಡಿದನು.

ಶೀಲವಂತ ಲಾವಣ್ಯವತಿಯರು ಒಟ್ಟಿಗೆ ನ್ಯಾಯಾಲಯಕ್ಕೆ ಬಂದಿದ್ದರು. ಸಾಕ್ಷ್ಯ ಮುಗಿದ ಮೇಲೆ ಮೇನೆಯಲ್ಲಿ ಲಾವಣ್ಯವತಿ ಮನೆಗೆ ಹಿಂದಿರುಗಬೇಕೆಂದೂ ವಿಚಾರಣೆ ಮುಗಿದ ಮೇಲೆ ತಾನು ನಡೆದು ಬರುವುದಾಗಿಯೂ ಶೀಲವಂತ ಮೊದಲೇ ಹೇಳಿದ್ದನು. ಅದರಂತೆ ಲಾವಣ್ಯವತಿ ಮನೆಗೆ ಹಿಂದಿರುಗಿದಳು. ಸಾಕ್ಷ್ಯ ಮುಗಿಯದಿದ್ದ ಶೀಲವಂತನನ್ನು ಧರ್ಮಾಧಿಕರಣದ ಭಟರು ಪ್ರತ್ಯೇಕ ಕೋಣೆಯಲ್ಲಿ ಕುಳ್ಳಿರಿಸಿ ಕಾವಲಿದ್ದದ್ದರಿಂದ ಹಿಂದಿರುಗುವ ಮುನ್ನ ಶೀಲವಂತನನ್ನು ನೋಡುವ ಅವಕಾಶ ಅವಳಿಗೆ ದೊರಕಲಿಲ್ಲ.

ಶೀಲವಂತನ ಸಾಕ್ಷ್ಯ ಆವೇಶ ಉದ್ರೇಕಗಳಿಲ್ಲದೆ ಶಾಂತರೀತಿಯಿಂದ ಪ್ರಾರಂಭವಾಯಿತು. ನ್ಯಾಯಪೀಠದ ಮುಂದೆ ಯಾವರೀತಿ ನಡೆದುಕೊಳ್ಳಬೇಕು, ಏನು ಹೇಳಬೇಕು, ಎಂಬುದನ್ನು ಅವನು ಮೊದಲೇ ಯೋಚಿಸಿ ಸಿದ್ಧನಾಗಿ ಬಂದಿದ್ದನು.

ಕ್ರಮಿತನ ಪ್ರಶ್ನೆಗಳಿಗೆ ಉತ್ತರವಾಗಿ ಅವನು ತನ್ನ ಮದುವೆಯ ಸಾಮಾನ್ಯ ಘಟನೆಗಳನ್ನು ಯಥಾವತ್ತಾಗಿ ವಿವರಿಸಿದನು. ಮದುವೆಯ ಮರುದಿನ ಸತ್ಕಾರ ಸಭೆಯಲ್ಲಿ ನಡೆದ ಘಟಸ್ಫೋಟದ ವಿಚಾರ ಬಂದಾಗ ಅವನು,

"ಆ ಘಟನೆಯಲ್ಲಿ ನ್ಯಾಯಪೀಠದ ಪ್ರಮುಖ ನ್ಯಾಯಾಧೀಶರು ಮುಖ್ಯ ಪಾತ್ರ ವಹಿಸಿದ್ದರು. ಆ ಬಗೆಗೆ ಅವರಿಗೆ ಸಹಜವಾಗಿ ಆಸಕ್ತಿ ಇರುವುದರಿಂದ ಆ ಸಂಬಂಧವಾಗಿ ಉತ್ತರ ಕೊಡಲು ನಿರಾಕರಿಸುತ್ತೇನೆ,” ಎಂದನು.

"ಘಟನೆಯಲ್ಲಿ ನಾನು ಪಾತ್ರವಹಿಸಿದ್ದದ್ದು ನಿಜ. ಆದರೆ ಆ ವಿಷಯದಲ್ಲಿ ನನ್ನ ಆಸಕ್ತಿ ಅಂದೇ ಮುಗಿಯಿತು. ಈಗ ನಾನು ನಿರ್ಲಿಪ್ತ ಮನಸ್ಸಿನಿಂದ ನ್ಯಾಯ ಪೀಠದಲ್ಲಿ ಕುಳಿತಿದ್ದೇನೆ. ಸಂಕೋಚವಿಲ್ಲದೆ ಉತ್ತರ ಕೊಡಬಹುದು,” -ಎಂದು ಕ್ರಮಿತನು ಸಮಾಧಾನ ಹೇಳಿದನು.

"ಘಟನೆಯಲ್ಲಿ ಭಾಗವಹಿಸಿ ಈಗ ಆಸಕ್ತಿ ಇಲ್ಲವೆಂದು ಹೇಳುವುದು ಮಾನವ ಸ್ವಭಾವಕ್ಕೆ ವಿರೋಧವಾದ ಮಾತು. ವ್ಯವಹಾರ ಅದನ್ನೊಪ್ಪುವುದಿಲ್ಲ. ಸಂಬಂಧ ಪಟ್ಟ ನ್ಯಾಯಾಧೀಶರು ನ್ಯಾಯಪೀಠದಿಂದ ವಿರಮಿಸಿದರೆ ಮಾತ್ರವೇ ನಾನು ಸಾಕ್ಷ್ಯಕೊಡುತ್ತೇನೆ.” -ಎಂದು ಶೀಲವಂತ ಪುನಃ ಉತ್ತರ ಕೊಟ್ಟನು.