ಪುಟ:ಕ್ರಾಂತಿ ಕಲ್ಯಾಣ.pdf/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೩೩

ಕ್ರಮಿತನು ಕೋಪಾವೇಶದಿಂದ, "ನೀವು ನ್ಯಾಯಪೀಠವನ್ನು ಅಪಮಾನಗೊಳಿಸುತ್ತಿದ್ದೀರಿ. ನಿಮ್ಮನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸುವ ಅಧಿಕಾರ ನನಗಿದೆ," ಎಂದು ಹೇಳಿದನು.

"ನ್ಯಾಯಪೀಠವನ್ನು ಅವಮಾನಗೊಳಿಸುವ ಇಚ್ಛೆ ನನಗಿಲ್ಲ. ಒಂದು ಕೃತ್ಯದಲ್ಲಿ ಆಸಕ್ತಿಯಿಂದ ಭಾಗವಹಿಸಿದವರು ನ್ಯಾಯಾಧೀಶರಾಗಿ ಆ ಕೃತ್ಯದ ವಿಚಾರಣೆ ನಡೆಸಬಾರದೆಂಬುದು ಎಲ್ಲ ಧರ್ಮಶಾಸ್ತ್ರಗಳೂ ಒಪ್ಪುವ ಸಾಮಾನ್ಯ ನಿಯಮ. ಅದನ್ನು ಉಲ್ಲಂಘಿಸಿ ಧರ್ಮಾಧಿಕರಣವನ್ನು ಪ್ರತಿಶೋಧದ ಹಿಂಸಾಪೀಠವಾಗಿ ಮಾಡುವುದು ನಿಮ್ಮ ಅಭಿಮತವೆ?" -ಎಂದು ಶೀಲವಂತ ವಿನಯದಿಂದ ಬಿನ್ನವಿಸಿಕೊಂಡನು. ನ್ಯಾಯಪೀಠದೊಡನೆ ವಿರಸಕ್ಕೆ ಎಡೆ ಕೊಡುವುದು ಅನರ್ಥಕಾರಿಯೆಂದು ತಿಳಿದಿತ್ತಾದರೂ ಧೈರ್ಯ ಸಾಹಸಗಳು ಅವನನ್ನು ನುಡಿಸಿದವು.

ಕ್ರಮಿತನ ಕೋಪ ಇಮ್ಮಡಿಸಿತು. "ಅಂತ್ಯಜನಾದ ನಿನಗೆ ಧರ್ಮಶಾಸ್ತ್ರಗಳ ವಿಚಾರ ಏನು ತಿಳಿಯುತ್ತದೆ!" ಎಂದು ಆವೇಶದಿಂದ ಹೇಳಿದನು.

ಶೀಲವಂತನ ರಕ್ತ ಕುದಿಯಿತು. ದನಿಯನ್ನು ತುಸು ಗಡುಸಾಗಿಸಿ ಅವನು, "ನಾನು ಅಂತ್ಯಜನಲ್ಲ. ಶರಣಧರ್ಮದಲ್ಲಿ ದೀಕ್ಷಿತನು. ನ್ಯಾಯಪೀಠ ನನ್ನನ್ನು ಕರೆಸಿದ್ದು ಸಾಕ್ಷ್ಯ ತೆಗೆದುಕೊಳ್ಳುವುದಕ್ಕೋ ಅಪಮಾನಪಡಿಸುವುದಕ್ಕೊ?" ಎಂದು ಪ್ರಶ್ನಿಸಿದನು.

"ಬಂಧಿಸಿರಿ ಈ ಧರ್ಮದ್ರೋಹಿ ಮುಚ್ಚಿಗನನ್ನು!" ಕ್ರಮಿತನು ಆವೇಶದಿಂದ ಚಡಪಡಿಸಿ ಭಟರಿಗೆ ಆಜ್ಞೆ ಮಾಡಿದನು.

ಪ್ರಸಂಗ ಅನ್ಯಾಯದ ಹಿಂಸಾರೂಪ ತಾಳುವಷ್ಟರಲ್ಲಿ ಮಂಚಣನು ಮಧ್ಯೆ ಬಂದು, ಭಟರಿಗೆ ಸರಿದು ನಿಲ್ಲುವಂತೆ ಹೇಳಿ, ಕ್ರಮಿತನ ಕಡೆ ತಿರುಗಿ,

"ಧರ್ಮಾಧಿಕರಣದ ಮೂಲ ಸೂತ್ರಗಳಂತೆ ನಾವು ನಡೆಯಬೇಕಾಗುತ್ತದೆ. ನಾರಣಕ್ರಮಿತರೆ. ಘಟಸ್ಫೋಟದಲ್ಲಿ ಮುಖ್ಯ ಪಾತ್ರವಹಿಸಿದ್ದ ನೀವು ನ್ಯಾಯ ಪೀಠದ ಅಧ್ಯಕತೆಗೆ ಒಪ್ಪಿದುದು ಈ ತೊಂದರೆಯ ಕಾರಣ. ಈ ವಿಚಾರದಲ್ಲಿ ನಾವು ಎಚ್ಚರಿಕೆಯಿಂದ ನಡೆಯಬೇಕು. ಮಧ್ಯಸ್ಥವಾದ ಮಾರ್ಗಹಿಡಿದರೆ ಒಳ್ಳೆಯದು," ಎಂದು ಹೇಳಿದನು.

ರುದ್ರಭಟ್ಟನು ಮೌನ! ಕ್ರಮಿತನ ವರ್ತನೆ ನ್ಯಾಯವಿರುದ್ಧವೆಂದು ಅವನಿಗೆ ತಿಳಿದಿತ್ತು.

ಕೊನೆಗೆ ಕ್ರಮಿತನು ಶಾಂತನಾಗಿ, "ನೀವು ಹೇಳುವ ಮಧ್ಯಸ್ಥಿಕೆಯ ಮಾರ್ಗವೇನು?" ಎಂದು ಮಂಚಣನನ್ನು ಪ್ರಶ್ನಿಸಿದನು.