ಪುಟ:ಕ್ರಾಂತಿ ಕಲ್ಯಾಣ.pdf/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೩೪

ಕ್ರಾಂತಿ ಕಲ್ಯಾಣ


“ನನ್ನದೇನೂ ಕ್ರಾಂತಿಕಾರಿ ಸಲಹೆಯಲ್ಲ. ಘಟಸ್ಫೋಟದ ವಿಚಾರ ನೀವು ಪ್ರಶ್ನಿಸಬೇಡಿರಿ. ಶೀಲವಂತಯ್ಯ ತನ್ನ ಆಕ್ಷೇಪವನ್ನು ಹಿಂದಕ್ಕೆ ತೆಗೆದುಕೊಳ್ಳಲಿ.”

-ಮಂಚಣನ ಸಲಹೆಗೆ ಕ್ರಮಿತನು ಒಪ್ಪಿದನು. ಶೀಲವಂತ ಆಕ್ಷೇಪಿಸಲಿಲ್ಲ. ವಿಚಾರಣೆ ಪುನರಾರಂಭವಾಯಿತು.

“ಮಧುವರಸರ ಮಗಳು ಲಾವಣ್ಯವತಿ ನಿಮಗೆ ಯಾವಾಗ ಪರಿಚಯವಾದದ್ದು?”

“ಮಹಮನೆಯ ಆರೋಗ್ಯಧಾಮದಲ್ಲಿ ಹಾವು ಕಚ್ಚಿದ್ದಕ್ಕಾಗಿ ನಾನು ಚಿಕಿತ್ಸೆ ಪಡೆಯುತ್ತಿದ್ದಾಗ.” ಶೀಲವಂತ ಉತ್ತರ ಕೊಟ್ಟನು.

“ಹಾವು ಕಚ್ಚಿದಾಗ ನೀವು ಎಲ್ಲಿದ್ದೀರಿ?”

“ದೇವಗಿರಿಯ ಒಂದು ಗುಹೆಯಲ್ಲಿ. ಶರಣರ ಯಾತ್ರಾತಂಡದೊಡನೆ ನಾನು ಅಲ್ಲಿಗೆ ಹೋಗಿದ್ದೆ.”

- “ಗುಹೆಯಲ್ಲಿ ನಿಮ್ಮ ಸಂಗಡಿದ್ದ ಕದಂಬ ರಾಜಕನ್ಯೆ ಕುಸುಮಾವಳಿ ಘಾಯದಿಂದ ವಿಷಹೀರಿ ನಿಮ್ಮ ಪ್ರಾಣ ಉಳಿಸಿದ್ದು ನಿಜವೆ?”

“ನಿಜ. ಕುಸುಮಾವಳಿಯ ಬಲಿದಾನದಿಂದ ನಾನು ಉಳಿದೆ. ಆಗ ನಾನು ಪ್ರಜ್ಞಾಹೀನನಾಗಿದ್ದರೂ ಸಂಗಡಿದ್ದವರಿಂದ ಈ ವಿಚಾರ ತಿಳಿದುಕೊಂಡಿದ್ದೇನೆ,"

-ನುಡಿಯುತ್ತಿದ್ದಂತೆ ದೇವಗಿರಿಯ ಆ ಗುಹೆಯಲ್ಲಿ ಆದ ಚಮತ್ಕಾರದ ಘಟನೆಯ ನೆನಪಿಂದ ಶೀಲವಂತ ವಿಚಲಿತನಾದನು. ಕಂಠ ಗದ್ಗದಿತವಾಯಿತು.

“ಕುಸುಮಾವಳಿಯ ಬಲಿದಾನದ ಕಾರಣವೇನು?”
“ತಿಳಿಯದು. ಅದರಿಂದ ನನಗೇ ಆಶ್ಚರ್ಯವಾಗಿದೆ."
“ನಿಮಗೆ ಕುಸುಮಾವಳಿಯ ಪರಿಚಯವಾದದ್ದು ಯಾವಾಗ?”
“ಏಳು ವರ್ಷಗಳ ಹಿಂದೆ, ಕಲ್ಯಾಣದ ಚಾಲುಕ್ಯ ಅರಮನೆಯಲ್ಲಿ ನಾನು ಚಿತ್ರಕಾರನಾಗಿದ್ದಾಗ."

“ನೀವು ಚಾಲುಕ್ಯ ಅರಮನೆಯ ಚಿತ್ರಕಾರರಾದದ್ದು ಹೇಗೆ?"

ಒಂದು ದಿನ ನಾನು ಚಾಲುಕ್ಯ ರಾಣಿ ಕಾಮೇಶ್ವರೀದೇವಿಯವರಿಗೆ ಪಾದರಕ್ಷೆಗಳನ್ನು ಕೊಡಲು ಅರಮನೆಗೆ ಹೋಗಿದ್ದಾಗ ರಾಣಿಯವರು ನನ್ನ ಚಿತ್ರಗಳನ್ನು ನೋಡಿ ಮೆಚ್ಚಿ ಚಿತ್ರಕಾರನನ್ನಾಗಿ ನಿಯಮಿಸಿಕೊಂಡರು. ರಾಣಿಯವರ ಸಂಗಡಿದ್ದ ಕುಸುಮಾವಳಿಯ ಪರಿಚಯವಾಯಿತು.”

ಆಗ ನಿಮ್ಮ ವಯಸ್ಸೆಷ್ಟು?”
“ಸುಮಾರು ಇಪ್ಪತ್ತು.”