ಪುಟ:ಕ್ರಾಂತಿ ಕಲ್ಯಾಣ.pdf/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೩೭

ರುದ್ರಭಟ್ಟ "ತಿಳಿಯದು," ಎಂದನು. ವಾಸ್ತವದಲ್ಲಿ ಅವನು ಚಿತ್ರಸ್ಥೆಯಾದ ಹೆಣ್ಣನ್ನು ನೋಡಿರಲಿಲ್ಲ.

"ಹೆಣ್ಣು ಯಾರಾದರೂ ಆಗಲಿ, ನಮ್ಮ ಮುಂದಿರುವ ವರ್ಣಸಂಕರದ ವ್ಯವಹಾರಕ್ಕೆ ಸಂಬಂಧಿಸದ ಆ ವಿಚಾರ ಈಗ ನಮಗೇಕೆ?" ಎಂದು ಮಂಚಣ ಅರ್ಥಗರ್ಭಿತವಾಗಿ ಹೇಳಿದನು.

"ಹೆಣ್ಣು ಯಾರೆಂಬುದು ತಿಳಿದಿದ್ದರೂ ಹೆಸರು ಹೇಳುವ ಧೈರ್ಯ ಸಾಹಸ ನಿಮಗಿಲ್ಲ, ಅಲ್ಲವೆ ಮಂಚಣನಾಯಕರೆ?" ಎಂದು ಕ್ರಮಿತನು ಉತ್ತರಕ್ಕಾಗಿ ನಿರೀಕ್ಷಿಸುವ ಸೋಗಿನಿಂದ ಕೆಲವು ಕ್ಷಣಗಳು ಸುಮ್ಮನಿದ್ದು ಬಳಿಕ ಮುಂದುವರಿದು, "ನಾನು ಧೈರ್ಯವಾಗಿ ಹೆಸರು ಹೇಳುತ್ತೇನೆ. ಎರಡನೆಯ ಚಿತ್ರದಲ್ಲಿ ವಸ್ತ್ರಾಲಂಕಾರಭೂಷಿತೆಯಾಗಿ ಕುಳಿತಿರುವ ಹೆಣ್ಣು ಚಾಲುಕ್ಯ ರಾಣಿ ಕಾಮೇಶ್ವರೀ ದೇವಿ. ದಿವಂಗತ ತೈಲಪ ದೇವರ ಸಂಗ್ರಹದಲ್ಲಿದ್ದ ಈ ಚಿತ್ರ ಕಲ್ಯಾಣದ ಚಿತ್ರಕಾರನೊಬ್ಬನ ಕಲಾಕೃತಿ. ರಾಣಿ ಕಾಮೇಶ್ವರೀ ದೇವಿಯನ್ನು ನಗ್ನಾವಸ್ಥೆಯಲ್ಲಿ ತೋರಿಸುವ ಈ ಮೊದಲ ಚಿತ್ರ, ನಮ್ಮ ಮುಂದೆ ಸಾಕ್ಷ್ಯ ಕೊಡುತ್ತಿರುವ ಶೀಲವಂತ ಕಲ್ಯಾಣದ ಚಾಲುಕ್ಯ ಅರಮನೆಯಲ್ಲಿ ಚಿತ್ರಕಾರನಾಗಿದ್ದಾಗ ಬರೆದದ್ದು. ರಾಣಿ ಕಾಮೇಶ್ವರಿ ಮತ್ತು ಶೀಲವಂತರ ಪ್ರಣಯ ಸಂಬಂಧವನ್ನು ಈ ಚಿತ್ರದ ಸಹಾಯದಿಂದ ನಾವು ಊಹಿಸಿ ತಿಳಿಯಬಹುದು. ರಾಣಿ ಕಾಮೇಶ್ವರಿ ತಾನಾಗಿ ಪ್ರೀತಿಸಿ ಶೀಲವಂತನ ಪ್ರಣಯಿಯಾದಳು. ಆಮೇಲೆ ಲೋಕದ ಕಣ್ಣಿನಿಂದ ತನ್ನ ಪ್ರೇಮವನ್ನು ಮುಚ್ಚಿಡಲು ಶೀಲವಂತನಿಗೆ ತನ್ನ ಗೆಳತಿ, ಕದಂಬ ರಾಜ ಕನ್ಯ ಕುಸುಮಾವಳಿಯ ಪರಿಚಯ ಮಾಡಿಸಿದಳು. ವಿಲಾಸವೈಭವಗಳ ನಡುವೆ ಬೆಳೆದ ಇಬ್ಬರು ರಾಜರಮಣಿಯರು ಏಕಕಾಲದಲ್ಲಿ ಶೀಲವಂತನಂತಹ ಸುಂದರ ತರುಣಕಲಾವಿದನನ್ನು ಮೋಹಿಸಿದ್ದು ನಮ್ಮ ರಾಜಾಂತಃಪುರಗಳಲ್ಲಿ ಅಪರೂಪವೇನೂ ಅಲ್ಲ. ಇಬ್ಬರು ವಿಲಾಸೀ ಗೆಳೆಯರು ಭೋಗಾಪೇಕ್ಷೆಯಿಂದ ಒಬ್ಬ ಗಣಿಕೆಯಲ್ಲಿ ಅನುರಕ್ತರಾಗುವಂತೆ ಕಾಮೇಶ್ವರಿ ಕುಸುಮಾವಳಿಯರು ಶೀಲವಂತನನ್ನು ತಮ್ಮ ಭೋಗ ಸಾಧನವಾಗಿ ಮಾಡಿಕೊಂಡರು," ಎಂದು ಮುಗಿಸಿದನು.

ಕ್ರಮಿತನ ನುಡಿಗಳನ್ನು ಕೇಳಿ ನ್ಯಾಯಾಲಯದಲ್ಲಿದ್ದ ಕರ್ಮಚಾರಿಗಳು, ಕರಣಿಕರು, ಭಟರು ಸ್ತಂಭಿತರಾದರು. ಮಂಚಣ ರುದ್ರಭಟ್ಟರು ದಿಗ್ಭ್ರಾಂತರಂತೆ ತಲೆ ತಗ್ಗಿಸಿ ಕುಳಿತರು. ಕ್ರಮಿತನು ವಿಜಯೋತ್ಸಾಹದಿಂದ ಸುತ್ತ ನೋಡಿ ಶೀಲವಂತನ ಕಡೆ ತಿರುಗಿ, "ರಾಣಿಯೊಡನೆ ನಿನ್ನ ಪ್ರಣಯ ಸಂಬಂಧವನ್ನು ಈಗ ಒಪ್ಪುವೆಯ?" ಎಂದು ಕೇಳಿದನು.