ಪುಟ:ಕ್ರಾಂತಿ ಕಲ್ಯಾಣ.pdf/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೩೮

ಕ್ರಾಂತಿ ಕಲ್ಯಾಣ


ಕೆಟ್ಟ ಕನಸು ಕಂಡು ಬೆಚ್ಚಿ ಎಚ್ಚೆತ್ತವನಂತೆ ಶೀಲವಂತ ಕಣ್ಣೊರೆಸಿಕೊಂಡು ಕೆಕ್ಕರಿಸಿ ನೋಡುತ್ತ, ಉದ್ವೇಗದ ಕೀರಲು ಕೊರಳಿಂದ,

“ಸ್ವರ್ಗಸ್ಥರಾಗಿ, ಈಗ ನಿಮಗೆ ಉತ್ತರ ಕೊಡಲಾರದ ಇಬ್ಬರು ಸಭ್ಯ ಮಹಿಳೆಯರ ವಿಚಾರದಲ್ಲಿ ನೀವು ಈ ಅಸಭ್ಯ ಅಶ್ಲೀಲ ಅನುಚಿತ ಆಪಾದನೆಗಳನ್ನು ಮಾಡುತ್ತಿದ್ದೀರಿ. ಕುಸುಮಾವಳಿ ದೇವಗಿರಿಯಲ್ಲಿ ಬಲಿದಾನ ಮಾಡಿಕೊಂಡಳು. ಚಾಲುಕ್ಯ ರಾಣಿ ಕಾಮೇಶ್ವರಿ ಮಂಗಳವೇಡೆಯ ಅಗ್ನಿ ಅಪಘಾತಕ್ಕೆ ಅಹುತಿಯಾದಳು. ಅವರ ವಿಚಾರದಲ್ಲಿ ನಾನು ಯಾವಾಗಲೂ ಹೆಚ್ಚಿನ ಗೌರವ ಸಭ್ಯತೆಗಳಿಂದ ನಡೆದುಕೊಂಡಿದ್ದೇನೆ. ಚಾಲುಕ್ಯ ರಾಣಿಯನ್ನು ಒಡತಿಯೆಂದು, ಕುಸುಮಾವಳಿಯನ್ನು ಸಹೋದರಿಯೆಂದು ತಿಳಿದಿದ್ದೆ. ಅವರ ವಿಚಾರದಲ್ಲಿ ಕೆಟ್ಟ ಭಾವನೆಗೆ ಎಂದಿಗೂ ಎಡೆಗೊಡಲಿಲ್ಲ. ನೀವು ತೋರಿಸಿದ ನಗ್ನಚಿತ್ರ ವಾಸ್ತವದಲ್ಲಿ ಕಾಮೇಶ್ವರಿಯ ಚಿತ್ರವಲ್ಲ. ಅದನ್ನು ನಾನು ಬರೆದಾಗ ಕಾಮೇಶ್ವರೀದೇವಿ ನನ್ನೆದುರಿಗೆ ನಗ್ನೆಯಾಗಿ ನಿಂತಿದ್ದಳೆಂದು ನೀವು ಭಾವಿಸಿದ್ದರೆ ಅದು ತಪ್ಪು. ತಾರುಣ್ಯದ ಉನ್ಮತ್ತ ಉತ್ಸಾಹದಿಂದ, ಕಲೆಯ ಪಾರದರ್ಶಕ ಪ್ರತಿಭೆಯನ್ನು ಮೆರೆಸಲು ಆ ಕಲ್ಪನಾ ಚಿತ್ರವನ್ನು ನಾನು ಬರೆದೆ. ನನ್ನ ಆ ಕಾರ್ಯ ಎಷ್ಟೊಂದು ಅನುಚಿತವೆಂಬುದು ಈಗ ಅರ್ಥವಾಗುತ್ತಿದೆ. ನನ್ನ ಅವಿವೇಕದ ಫಲವಾದ ಈ ಕಲ್ಪನಾಚಿತ್ರವನ್ನು ಆಧರಿಸಿ ನೀವು ಈ ಅಪವಾದದ ನಿಂದಾಸೌಧವನ್ನು ರಚಿಸಬಾರದೆಂದೂ, ಮೃತರಾದ ಆ ಇಬ್ಬರು ಮಹಿಳೆಯರ ಬಗೆಗೆ ಪರೋಕ್ಷ ವಿನಯದ ಗುರುತಾಗಿ ಚಿತ್ರಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ವಿಚಾರಣೆಯ ಕಡತದಿಂದ ತೆಗೆದುಹಾಕಬೇಕೆಂದೂ ನಾನು ನ್ಯಾಯಪೀಠಕ್ಕೆ ಮನವಿಮಾಡಿಕೊಳ್ಳುತ್ತೇನೆ,” ಎಂದು ಬಿನ್ನವಿಸಿಕೊಂಡನು.

ವಿನಯ ಔಚಿತ್ಯಗಳಿಂದ ಕೂಡಿದ ಶೀಲವಂತನ ನುಡಿಗಳಿಂದ ಪ್ರಭಾವಿತರಾಗಿ, ಮಂಚಣ ರುದ್ರಭಟ್ಟರು, “ಶೀಲವಂತಯ್ಯನ ಸಲಹೆ ಉಚಿತವಾಗಿದೆ. ನ್ಯಾಯಪೀಠ ಅದರಂತೆ ನಡೆದು ಈ ಅಪ್ರೀತಿಕರ ಪ್ರಸಂಗವನ್ನು ಕೊನೆಗಾಣಿಸಿದರೆ ಒಳ್ಳೆಯದು,” ಎಂದು ಸೂಚಿಸಿದರು.

ಕ್ರಮಿತನು ತಿರಸ್ಕಾರದ ನಗೆ ಬೀರಿ, “ಚಿತ್ರಕಾರ ಶೀಲವಂತಯ್ಯನ ರೂಪ ಯೌವನ ಸವಿನುಡಿಗಳಿಗೆ ಹೆಂಗಸರು ಮರುಳಾಗುವರೆಂದು ಜನ ಹೇಳುತ್ತಾರೆ. ಈಗ ಅವನು ನಿಮ್ಮನ್ನೂ ಮರುಳುಮಾಡಿದಂತಿದೆ. ಈ ಮುಖ್ಯ ಪ್ರಸಂಗವನ್ನು ನಾವು ವಿಚಾರಣೆಯ ಕಡತದಿಂದ ತೆಗೆದುಹಾಕಿದ ಧರ್ಮಾಧಿಕರಣಕ್ಕೆ ಅಪಚಾರಮಾಡಿ ದಂತಾಗುತ್ತದೆ. ಅದಕ್ಕೆ ನಾನು ಒಪ್ಪುವುದಿಲ್ಲ. ಅಲ್ಲದೆ ಸಾಕ್ಷಿ ಹೇಳುವಂತೆ ಈ ಅಪವಾದ ಕಲ್ಪಿತವಲ್ಲ. ದಾಖಲೆಗಳ ಆಧಾರದಿಂದ ನಾನು ಈ ಮಾತು ಹೇಳುತ್ತಿದ್ದೇನೆ.”