ಪುಟ:ಕ್ರಾಂತಿ ಕಲ್ಯಾಣ.pdf/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೩೯


ಎಂದು ನುಡಿದು ಪಾರ್ಶ್ವದ ಪೀಠದಿಂದ ಕಡತದ ಕಟ್ಟೊಂದನ್ನು ತೆಗೆದು ಮುಂದಿಟ್ಟನು.

ಮಂಚಣ ರುದ್ರಭಟ್ಟರು ಕಡತವನ್ನು ಬಿಚ್ಚಿ ನೋಡುತ್ತಿದ್ದಂತೆ ಕ್ರಮಿತನು ಹೇಳಿದನು : "ಏಳು ವರ್ಷಗಳ ಹಿಂದೆ ಜಗದೇಕಮಲ್ಲರಸರು ಪಟ್ಟಕ್ಕೆ ಬಂದು, ಶರನ್ನವರಾತ್ರಿಯಲ್ಲಿ ಮೊದಲ ಸಾರಿ ಪ್ರಜೆಗಳಿಗೆ ದರ್ಶನಕೊಟ್ಟ ಕೆಲವು ವಾರಗಳ ಮೇಲೆ ಶೀಲವಂತಯ್ಯನ ಅಪಹಾರಕ್ಕೆ ಸಂಬಂಧಿಸಿದ ಅನಾಮಿಕ ಮನವಿಯೊಂದು ಬಿಜ್ಜಳರಾಯರಿಗೆ ಕಳುಹಿಸಲ್ಪಟ್ಟಿತು. ಅದರ ಮೇಲೆ ಪ್ರಭುಗಳ ಆಜ್ಞೆಯಂತೆ ಧರ್ಮಾಧಿಕರಣ ರಹಸ್ಯ ವಿಚಾರಣೆ ನಡೆಸಿ ರಚಿಸಿದ ವರದಿ ಇದು. ಆಗ ಚಾಲುಕ್ಯ ಅರಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಯಕರ್ತ ಕರಣಿಕ ದಾಸದಾಸಿಯರು ಅಪಹಾರದ ಸಂಬಂಧದಲ್ಲಿ ಕೊಟ್ಟ ಹೇಳಿಕೆಗಳು ಇದರಲ್ಲಿರುತ್ತವೆ. ರಾಣಿ ಕಾಮೇಶ್ವರೀ ದೇವಿ ಮತ್ತು ಕುಸುಮಾವಳಿ, ಇವರಿಬ್ಬರೂ ಚಿತ್ರಕಾರ ಶೀಲವಂತನ ಪ್ರೇಯಸಿಯರಾಗಿದ್ದರೆಂದು ಅವರು ಹೇಳಿದ್ದಾರೆ. ಶೀಲವಂತ ಆ ಇಬ್ಬರೊಡನೆ ಏಕಾಂತದಲ್ಲಿದ್ದುದನ್ನು ಕಣ್ಣಾರೆ ಕಂಡವರ ಸಾಕ್ಷ್ಯಗಳೂ ಇದರಲ್ಲಿವೆ. ರಾಣಿ ಕಾಮೇಶ್ವರಿಯ ಗೌರವ ರಕ್ಷಣೆಗಾಗಿ ಇದುವರೆಗೆ ವರದಿಯನ್ನು ರಹಸ್ಯವಾಗಿಡಲಾಗಿತ್ತು. ಈಗ ಅದನ್ನು ಬಹಿರಂಗ ಪಡಿಸುವ ಸಮಯ ಒದಗಿದೆ.”

ಕ್ರಮಿತನ ಆಪಾದನೆಗಳಿಗೆ ಆಧಾರವಾದ ಎಲ್ಲ ದಾಖಲೆಗಳೂ ಅದರಲ್ಲಿದ್ದವು. ಆಗ ಧರ್ಮಾಧಿಕರಣದ ಮುಖ್ಯಾಧಿಕಾರಿಯಾಗಿದ್ದ ನ್ಯಾಯಶಾಸ್ತ್ರಿ ಕೇಶವ ಫೈಸರು ಸಾಕ್ಷ್ಯಗಳನ್ನು ಅಧಿಕೃತವಾಗಿ ಸಂಗ್ರಹಿಸಿ ವರದಿಯನ್ನು ರಚಿಸಿದ್ದರು.

ದಾಖಲೆಗಳನ್ನು ಪರಿಶೀಲಿಸುವ ಅವಕಾಶ ಶೀಲವಂತನಿಗೂ ಕೊಡಲ್ಪಟ್ಟಿತು. ಅವನು ಎಲ್ಲವನ್ನೂ ನೋಡಿ ಕೊನೆಗೆ, “ಈ ವರದಿಯಲ್ಲಿರುವ ವಿಚಾರಣೆಗಳೆಲ್ಲವೂ ಅಸತ್ಯ ಕಲ್ಪಿತ. ರಾಜಭಟರ ಒತ್ತಾಯದಿಂದ ಹಿಂಸೆಗೆ ಹೆದರಿ ದಾಸದಾಸಿಯರು ಸುಳ್ಳು ಹೇಳಿಕೆಗಳನ್ನು ಕೊಟ್ಟಿದ್ದಾರೆ. ರಾಣಿ ಕಾಮೇಶ್ವರಿಯ ಮೇಲೆ ಅಪವಾದ ಹೊರೆಸಿ, ಚಾಲುಕ್ಯ ರಾಜವಂಶವನ್ನು ಜನರಿಗೆ ಅಪ್ರಿಯವನ್ನಾಗಿ ಮಾಡುವ ದುರುದ್ದೇಶದಿಂದ ವರದಿ ರಚಿತವಾಗಿದೆ,” ಎಂದು ಹೇಳಿದನು.

"ನಿಮ್ಮ ಅಭಿಪ್ರಾಯದ ಕಾರಣ?” -ಕ್ರಮಿತನು ಅಸಮಾಧಾನದಿಂದ ಪ್ರಶ್ನಿಸಿದನು.

“ವರದಿ ನನ್ನ ಅಪಹಾರಕ್ಕೆ ಸಂಬಂಧಿಸಿದ್ದರೂ ಆ ಕೃತ್ಯ ಯಾರಿಂದ ನಡೆಯಿತು ಎಂಬುದನ್ನು ಎಲ್ಲಿಯೂ ಸ್ಪಷ್ಟಪಡಿಸಿಲ್ಲ. ರಾಣಿ ಕಾಮೇಶ್ವರೀದೇವಿಯನ್ನು ಸ್ವೇಚ್ಛಾಚಾರಿಣಿಯಾದ ಕುಲಟೆಯೆಂದು ತೋರಿಸಲು ವರದಿ ಪ್ರಯತ್ನಿಸಿದೆ. ಅದಕ್ಕಾಗಿ ರಾಣಿಯನ್ನು ಕುರಿತು ಆಗ ಪ್ರಚಾರದಲ್ಲಿದ್ದ ಎಲ್ಲ ಅಸತ್ಯ ಅಪವಾದಗಳನ್ನು ವರದಿಯಲ್ಲಿ ಸಂಗ್ರಹಿಸಿದೆ. ದಾಸದಾಸಿಯರ ಹೇಳಿಕೆಗಳು ಪರಸ್ಪರ ವಿರುದ್ಧವೆಂದು