ಪುಟ:ಕ್ರಾಂತಿ ಕಲ್ಯಾಣ.pdf/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೪೦

ಕ್ರಾಂತಿ ಕಲ್ಯಾಣ


ವಿಚಾರಣೆ ನಡೆಸಿದ ನ್ಯಾಯಶಾಸ್ತ್ರಿ ಕೇಶವ ಫೈಸರೇ ಒಪ್ಪಿಕೊಂಡಿದ್ದಾರೆ. ಅನಾಮಿಕ ಮನವಿಯಲ್ಲಿದ್ದ ಕೆಲವು ಹೆಸರುಗಳನ್ನು ಕಾಡಿಗೆ ಹಚ್ಚಿ ಅಳಿಸಿರುವುದು ಸಂದೇಹಾಸ್ಪದವಾಗಿದೆ.”

-ಎಂದು ಶೀಲವಂತ ಉತ್ತರ ಕೊಟ್ಟನು.

“ಅಪಹರಿಸಲ್ಪಟ್ಟವರು ನೀವೇ ಅಲ್ಲವೆ? ಕೃತ್ಯ ಯಾರಿಂದ ಹೇಗೆ ನಡೆಯಿತು ಎಂಬುದನ್ನು ಈಗ ನೀವು ನ್ಯಾಯಪೀಠಕ್ಕೆ ತಿಳಿಸಬಹುದು.” -ವಂಚನೆಯ ಸವಿದನಿಯಿಂದ ಕ್ರಮಿತನು ನುಡಿದನು.

ಬಿಜ್ಜಳನ ಸಹೋದರ ಕರ್ಣದೇವರಿಂದ ಅಪಹಾರ ನಡೆಯಿತೆಂದು ಶೀಲವಂತ ನಿಂದಲೇ ಹೇಳಿಸುವುದು ಕ್ರಮಿತನ ಉದ್ದೇಶವಾಗಿತ್ತು.

“ಅಪಹಾರ ನಡೆಸಿದವರಾರು ಎಂಬುದನ್ನು ಆಗ ನಾನು ತಿಳಿಸದಿರಲು ಒಂದು ಮುಖ್ಯ ಕಾರಣವಿತ್ತು. ಈಗಲೂ ಆ ಕಾರಣ ನನ್ನ ಬಾಯಿ ಮುಚ್ಚಿಸಿದೆ,”

-ಎಂದು ಶೀಲವಂತ ಉತ್ತರ ಕೊಟ್ಟನು.

ಕ್ರಮಿತನು ಕೋಪದಿಂದ ಚಡಪಡಿಸಿ, “ಧರ್ಮಾಧಿಕರಣ ಅಧಿಕೃತವಾಗಿ ಅಂಗೀಕರಿಸಿದ ವರದಿಯ ಮೇಲೆ ನೀವು ಅಕಾರಣವಾಗಿ ಅಲ್ಲದ ಸಲ್ಲದ ಆಕ್ಷೇಪ ಮಾಡುತ್ತಿದ್ದೀರಿ. ನ್ಯಾಯಪೀಠ ಅದನ್ನು ತೀವ್ರವಾಗಿ ಗಮನಿಸಬೇಕಾಗುತ್ತದೆ,” ಎಂದನು.

-ಶೀಲವಂತನು ಮೌನವಾಗಿದ್ದನು.

ಅಷ್ಟರಲ್ಲಿ ಮಂಚಣನು ಕ್ರಮಿತನನ್ನು ಉದ್ದೇಶಿಸಿ, “ಈಗ ನಮ್ಮ ಮುಂದಿರುವ ವರ್ಣಸಂಕರದ ವ್ಯವಹಾರಕ್ಕೂ ಈ ಘಟನೆಗೂ ಇರುವ ಸಂಬಂಧವೇನು ಎಂಬುದನ್ನು ಇದುವರೆಗೆ ಅಧ್ಯಕ್ಷರು ನ್ಯಾಯಪೀಠಕ್ಕೆ ತಿಳಿಸಿಲ್ಲ. ಈ ವಿಚಾರವನ್ನು ನಾನು ಪುನಃ ಅಧ್ಯಕ್ಷರ ಗಮನಕ್ಕೆ ತರಬೇಕಾಗಿ ಬಂದದ್ದು ವಿಷಾದಕರ,” ಎಂದು ಆಕ್ಷೇಪ ಮಾಡಿದನು.

“ಆ ಸಂಬಂಧವೇನು ಎಂಬುದನ್ನು ಈಗ ನೀವು ತಿಳಿಯುವಿರಿ, ಮಂಚಣ ನಾಯಕರೆ. ಇನ್ನು ಹೆಚ್ಚು ಕಾಲ ನಿಮ್ಮನ್ನು ಅಂಧಕಾರದಲ್ಲಿರಿಸುವುದಿಲ್ಲ,”

-ಎಂದು ಹೇಳಿ ಕ್ರಮಿತನು ವಿಚಾರಣೆ ಮುಂದುವರೆಸಿ ಶೀಲವಂತನನ್ನು ಪ್ರಶ್ನಿಸಿದನು.

“ನೀವು ಅಜಂತದ ಚೀರಘಟ್ಟಿ ವಿದ್ಯಾಶಾಲೆಗೆ ಹೋದದ್ದು ಯಾವಾಗ?” :“ಅಪಹಾರ ನಡೆದ ಕೆಲವು ದಿನಗಳ ಮೇಲೆ.”
“ಅಲ್ಲಿಂದ ಕಲ್ಯಾಣಕ್ಕೆ ಹಿಂದಿರುಗಿದ್ದು?”