ಪುಟ:ಕ್ರಾಂತಿ ಕಲ್ಯಾಣ.pdf/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೪೧


“ಐದು ವರ್ಷಗಳ ಅನಂತರ.”
“ಆಗ ರಾಣೀ ಕಾಮೇಶ್ವರಿ ಎಲ್ಲಿದ್ದಳು?” :“ನನಗೆ ತಿಳಿಯದು. ತಿಳಿಯಲು ಪ್ರಯತ್ನಿಸಲಿಲ್ಲ.”
“ಕದಂಬ ರಾಜಕನ್ಯೆ ಕುಸುಮಾವಳೀ?”
“ಕಲ್ಯಾಣದಲ್ಲಿ.”

“ಸ್ವಸ್ಥಳವಾದ ಬನವಾಸಿಯನ್ನು ಬಿಟ್ಟು ಆಕೆ ಕಲ್ಯಾಣಕ್ಕೆ ಬಂದಿರಲು ಕಾರಣ?”

“ನಾನು ಅಜಂತಕ್ಕೆ ಹೋದಮೇಲೆ ಕುಸುಮಾವಳಿ ಶರಣ ಧರ್ಮವನ್ನು ಪರಿಗ್ರಹಿಸಿ ಕಲ್ಯಾಣದಲ್ಲಿ ವಾಸಮಾಡುತ್ತಿದ್ದಳು.”

“ನಿಮಗೆ ಈ ವಿಚಾರ ತಿಳಿದದ್ದು ಹೇಗೆ?”
“ಮಹಮನೆಯ ಶರಣರಿಂದ.”

“ನೀವು ಅಜಂತದಿಂದ ಬಂದಮೇಲೆ ಕುಸುಮಾವಳಿಯನ್ನು ಆಗಾಗ ನೋಡುತ್ತಿದ್ದಿರಲ್ಲವೆ?”

“ಆಗ ನಾನು ಮಹಮನೆಯ ಸಭಾಮಂಟಪವನ್ನು ಚಿತ್ರಗಳಿಂದ ಅಲಂಕರಿಸುತ್ತಿದ್ದೆ, ಕುಸುಮಾವಳಿ ಆಗಾಗ ಆ ಚಿತ್ರಗಳನ್ನು ನೋಡಲು ಬರುತ್ತಿದ್ದಳು.”

“ನಿಮ್ಮ ಪ್ರಣಯ ಸಂಬಂಧ ಆಗ ಪುನರಾರಂಭವಾಯಿತಲ್ಲವೆ!”
“ಇದು ಅಸಂಬದ್ಧ ಪ್ರಶ್ನೆ. ನಾನು ಉತ್ತರ ಕೊಡುವುದಿಲ್ಲ.”

ಕ್ರಮಿತನು ಮಿದುನಗೆ ಬೀರಿ, “ನಾನು ಒತ್ತಾಯಪಡಿಸುವುದಿಲ್ಲ. ಚಿತ್ರ ಕಲೆಯ ಅಭ್ಯಾಸಕ್ಕಾಗಿ ಕುಸುಮಾವಳಿ ನಿಮ್ಮ ಹತ್ತಿರ ಬರುತ್ತಿದ್ದುದನ್ನು ಒಪ್ಪಿಕೊಳ್ಳುತ್ತೀರಾ?” ಎಂದು ಕೇಳಿದನು.

“ವಿದ್ಯಾರ್ಥಿಗಳ ಸಂಗಡ ಕುಸುಮಾವಳಿಯೂ ಬರುತ್ತಿದ್ದಳು.”
“ನಿಮ್ಮ ಹತ್ತಿರ ಅವಳ ಕಲಾಭ್ಯಾಸ ಎಷ್ಟು ದಿನ ನಡೆಯಿತು?”
“ಸುಮಾರು ಒಂದು ವರ್ಷಕಾಲ.”

“ಈ ಅವಧಿಯಲ್ಲಿ ನೀವು ಕುಸುಮಾವಳಿಯನ್ನು ಪ್ರತಿದಿನ ನೋಡುತ್ತಿದ್ದಿರಿ, ಅವಳೊಡನೆ ಹೆಚ್ಚು ಕಾಲ ಕಳೆಯುತ್ತಿದ್ದಿರಿ, ಅಲ್ಲವೆ?”

“ಎಲ್ಲ ವಿದ್ಯಾರ್ಥಿಗಳಂತೆ ಕುಸುಮಾವಳಿಯೂ ಬರುತ್ತಿದ್ದಳು. ಇತರರಂತೆ ಅವಳು ಬರೆದ ಚಿತ್ರಗಳನ್ನೂ ವಿಮರ್ಶಿಸಿ ಸಲಹೆ ಕೊಡುತ್ತಿದ್ದೆ.”

“ನಿಮ್ಮ ಹಿಂದಿನ ಪ್ರಣಯ ಜೀವನವನ್ನು ಪುನರಾರಂಭಿಸುವ ಅವಕಾಶ ಆಗ ನಿಮಗೆ ದೊರಕಿರಬೇಕು?”