ಪುಟ:ಕ್ರಾಂತಿ ಕಲ್ಯಾಣ.pdf/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೪೩


ಲಾವಣ್ಯವತಿಯನ್ನು ಕುಸುಮಾವಳಿಯೆಂದೇ ಭಾವಿಸಿದಿರಿ, ಅಲ್ಲವೆ?”

“ಸ್ಮೃತಿಭಗ್ನದ ಕಾರಣದಿಂದ ಆಗ ನನಗೆ ಹಿಂದೆ ನಡೆದುದೆಲ್ಲ ಮರೆತುಹೋಗಿತ್ತು. ಅದರಿಂದ ನಾನು ತಪ್ಪು ಮಾಡಿದೆ. ಮೋಳಿಗೆ ಮಾರಯ್ಯನವರನ್ನು ಕಂಡಾಗ ನನ್ನ ಸ್ಮೃತಿ ಪುನಃ ಎಚ್ಚೆತ್ತಿತ್ತು. ನನ್ನಿಂದಾದ ತಪ್ಪನ್ನು ತಿಳಿದೆ.”

“ಇದನ್ನು ಯಾರೂ ನಂಬುವುದಿಲ್ಲ. ವಾಸ್ತವದಲ್ಲಿ ನಡೆದುದನ್ನು ನಾನು ಹೇಳುತ್ತೇನೆ. ಕುಸುಮಾವಳಿಯ ಮರಣದಿಂದ ಆದ ಅಭಾವವನ್ನು ನೀವು ಲಾವಣ್ಯವತಿಯಿಂದ ತೀರಿಸಿಕೊಳ್ಳಲು ಇಚ್ಛಿಸಿದಿರಿ. ಕುಸುಮಾವಳಿಯ ಮೇಲಿನ ನಿಮ್ಮ ಪ್ರೇಮ ಲಾವಣ್ಯವತಿಯ ಕಡೆಗೆ ಹರಿಯಿತು. ಪ್ರವಾಹಕ್ಕೆ ಸಿಕ್ಕ ಎಳೆ ಲತೆಯಂತೆ ಲಾವಣ್ಯವತಿ ಅದರಲ್ಲಿ ತೇಲಿಹೋದಳು.”

ಶೀಲವಂತ ವಿಭ್ರಾಂತನಂತೆ ಥರಥರಿಸಿ ಚೀರಾಡಿ, “ನೀವು ಹೇಳಿದಂತೆ ಯಾವುದೂ ನಡೆದಿಲ್ಲ. ಇಬ್ಬರಿಗೂ ಇದ್ದ ಹೋಲಿಕೆಯ ಮೇಲಿಂದ ನೀವು ಈ ಅಸಂಗತಗಳನ್ನು ಕಲ್ಪಿಸಿಕೊಳ್ಳುತ್ತಿದ್ದೀರಿ!” ಎಂದನು.

ಕ್ರಮಿತನು ಹಠಾತ್ತನೆ ಉತ್ತೇಜಿತನಾಗಿ ಕುಹಕದ ಚುಚ್ಚುದನಿಯಿಂದ

“ಕಾಮೇಶ್ವರಿ ಕುಸುಮಾವಳಿಯರಂತಹ ವಿದಗ್ಧ ರಾಜಮಹಿಳೆಯರನ್ನು ಮರುಳುಗೊಳಿಸಿದ ನಿನ್ನ ರೂಪ ಯೌವನ ರಸಿಕತೆಗಳೆದುರಿಗೆ ಲಾವಣ್ಯವತಿಯಂತಹ ಗೃಹಸ್ಥ ಹೆಣ್ಣು ಉಳಿಯುವುದು ಸಾಧ್ಯವೇ? ಎರಡೇ ದಿನಗಳಲ್ಲಿ ಅವಳು ನಿನ್ನ ಕೈಗೊಂಬೆಯಾದಳು. ಮಹಮನೆಯ ಆರೋಗ್ಯಧಾಮ ನಿನ್ನ ಪ್ರೇಮಲೀಲೆಗೆ ಅನುವಾದ ಸ್ಥಳವಲ್ಲವೆಂದು ತಿಳಿದು ನೀನು ಅವಳನ್ನು ರಥದಲ್ಲಿ ನಗರದ ಹೊರಗಿನ ಒಂದು ರಹಸ್ಯ ಪ್ರದೇಶಕ್ಕೆ ಕರೆದುಕೊಂಡುಹೋಗಿ ಶೀಲಭಂಗ ಮಾಡಿದೆ. ಈ ಎಲ್ಲ ವಿಚಾರಗಳು ನ್ಯಾಯಪೀಠಕ್ಕೆ ತಿಳಿದಿದೆ,” ಎಂದು ಗಜರಿ ನುಡಿದನು.

ಶೀಲವಂತ ಅಸಹನೆಯಿಂದ ಬೊಬ್ಬಿಟ್ಟನು. “ನಾವು ರಥದಲ್ಲಿ ಮೋಳಿಗೆ ಮಾರಯ್ಯನವರನ್ನು ನೋಡಲು ಹೋಗಿದ್ದುದು ನಿಜ. ನೀವು ಅದಕ್ಕೆ ಅಪಾರ್ಥ ಕಲ್ಪಿಸುತ್ತಿದ್ದೀರಿ,” ಎಂದು ದೊಡ್ಡ ದನಿಯಿಂದ ಹೇಳಿದನು.

“ಈ ಅಕ್ರಮಕೃತ್ಯ ನಡೆದದ್ದು ನೀವು ಬಾಂಧವರ ಓಣಿಯಿಂದ ಹಿಂದಿರುಗುತ್ತಿದ್ದಾಗ, ಮಧುವರಸನಿಗೆ ಈ ವಿಚಾರ ತಿಳಿದು ಬೇರೆ ಮಾರ್ಗವಿಲ್ಲದೆ ಮಗಳನ್ನು ನಿನಗೆ ಕೊಟ್ಟು ಮದುವೆ ಮಾಡಲು ಒಪ್ಪಿದನು.”

-ಕ್ರಮಿತನ ಮೊನೆ ಮಾತು ಅಪಾಯದ ಸ್ಥಳವನ್ನು ಪುನಃ ಚೂರಿಯಿಂದ ಚುಚ್ಚಿದಂತೆ ಶೀಲವಂತನ ಎದೆಯನ್ನಿರಿಯಿತು. ಸ್ತಬ್ಧನಾಗಿ ಅವನು ಕೆಕ್ಕರಿಸಿ