ಪುಟ:ಕ್ರಾಂತಿ ಕಲ್ಯಾಣ.pdf/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೪೪

ಕ್ರಾಂತಿ ಕಲ್ಯಾಣ


ನೋಡುತ್ತ ನಿಂತನು.

ಕ್ರಮಿತನು ವಿಕಟವಾಗಿ ನಕ್ಕು, ಅಂತ್ಯಜನಾದ ನೀನು ನಿನ್ನ ರೂಪ ಯೌವನ ಅಭಿಜ್ಞತೆಗಳಿಂದ ಉತ್ತಮ ವರ್ಣದ ಕುಲೀನ ಸ್ತ್ರೀಯರನ್ನು ಆಕರ್ಷಿಸಿ, ಅವರ ಶೀಲ ಭಂಗಮಾಡಿ ವರ್ಣಸಂಕರದ ಈ ವ್ಯವಹಾರದಲ್ಲಿ ಪ್ರಮುಖ ಪಾತ್ರ ವಹಿಸಿರುವೆ. ಚಾಲುಕ್ಯ ರಾಜ್ಯದಲ್ಲಿ ವರ್ಣಾಶ್ರಮಗಳ ರಕ್ಷಣೆಗಾಗಿ ಪಣತೊಟ್ಟಿರುವ ಸರ್ವಾಧಿಕಾರಿ ಬಿಜ್ಜಳರಾಯರು ನಿನ್ನನ್ನು ಬಂಧನದಲ್ಲಿಟ್ಟು, ನಿನ್ನಿಂದಾದ ಈ ಘೋರ ಅಪರಾಧಗಳ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಲು ಆಜ್ಞೆ ಮಾಡಿದ್ದಾರೆ,” ಎಂದು ಹೇಳಿ ಪಾರ್ಶ್ವದ ಪೀಠದ ಮೇಲಿದ್ದ ಆಜ್ಞಾಪತ್ರವನ್ನು ತೆಗೆದು ಧರ್ಮಾಧಿಕರಣದ ಕಾರ್ಯಕರ್ತನಿಗೆ ಕೊಟ್ಟನು.

ಕಾರ್ಯಕರ್ತನು ಶೀಲವಂತನನ್ನು ಬಂಧಿಸುವಂತೆ ಭಟರಿಗೆ ಆಜ್ಞೆ ಮಾಡಿದನು. ಭಟರು ಶೀಲವಂತನ ಇಕ್ಕೆಲಗಳಲ್ಲಿ ನಿಂತು ತೋಳುಗಳನ್ನು ಹಿಡಿದರು.

ಕ್ರಮಿತನ ಶರವೇಗದ ಕಾರ್ಯಾಚರಣೆ ಶೀಲವಂತನಂತೆ ಮಂಚಣ ರುದ್ರ ಭಟ್ಟರನ್ನೂ ದಂಗುಗೊಳಿಸಿತು.

ಕೆಲವು ಕ್ಷಣಗಳ ಅನಂತರ ಮಂಚಣನು ಶೀಲವಂತನ ಮೇಲೆ ಆಶ್ವಾಸನೆಯ ದೃಷ್ಟಿ ಬೀರಿ, ಕ್ರಮಿತನ ಕಡೆ ತಿರುಗಿ, “ನಿಮ್ಮ ಮಾಯಾಜೋಳಿಗೆಯಲ್ಲಿ ಇರುವ ಎಲ್ಲ ಆಜ್ಞಾಪತ್ರಗಳನ್ನೂ ಹೊರಗೆ ತೆಗೆಯಿರಿ, ನಾರಣಕ್ರಮಿತರೆ. ನೀವು ಉದ್ದೇಶಿಸಿರುವ ಬಂಧನಗಳೆಲ್ಲ ಈಗಲೇ ನಡೆದುಹೋಗಲಿ,” ಎಂದು ಕಟಕಿಯಾಡಿ ನಕ್ಕನು.

ವೃದ್ಧಮಂತ್ರಿಯ ಹಾಸ್ಯಪ್ರವೃತ್ತಿಯನ್ನು ಕಂಡು ಆಗಿನ ಪರಿಸ್ಥಿತಿಯಲ್ಲಿಯೂ ಶೀಲವಂತನ ಮುಖದಲ್ಲಿ ಮಿದುನಗೆ ಮೂಡಿತು. ನ್ಯಾಯಪೀಠಕ್ಕೆ ವಂದಿಸಿ ಅವನು, “ನಾನು ಸೆರೆಮನೆಗೆ ಹೋಗುವ ಮೊದಲು ಒಂದು ಹೇಳಿಕೆ ಕೊಡಲು ಇಚ್ಚಿಸುತ್ತೇನೆ,” ಎಂದು ಬಿನ್ನವಿಸಿಕೊಂಡನು.

“ಅನುಮತಿ ಕೊಡುವುದೇ? ನಿರಾಕರಿಸುವುದೇ?” ಎಂದು ಕ್ರಮಿತನು ಯೋಚಿಸುತ್ತಿದ್ದಂತೆ ಮಂಚಣನು, “ಬಂಧನಾನಂತರ ಹೇಳಿಕೆ ಕೊಡುವುದು ನಿಮ್ಮ ಹಕ್ಕು, ಶೀಲವಂತಯ್ಯ, ನ್ಯಾಯಪೀಠಕ್ಕೆ ಅದನ್ನು ನಿರಾಕರಿಸುವ ಅಧಿಕಾರವಿಲ್ಲ,” ಎಂದು ಹೇಳಿ ಕ್ರಮಿತನ ಬಾಯಿ ಮುಚ್ಚಿಸಿದನು.

“ಆಗಬಹುದು,” ಎಂದು ಶ್ರೀಮದ್ಗಾಂಭೀರ್ಯದಿಂದ ಕ್ರಮಿತನು ಸಲಹೆಗೆ ಒಪ್ಪಿದನು.

ಶೀಲವಂತ ಪುನಃ ನ್ಯಾಯಪೀಠಕ್ಕೆ ವಂದಿಸಿ ಹೇಳಿದನು :
“ನಾನು ಸಾಕ್ಷಿ ಕೊಡಲು ಬಂದಾಗ ಸೆರೆಮನೆಯ ಶೃಂಖಲೆ ನನಗಾಗಿ ಇಲ್ಲಿ