ಪುಟ:ಕ್ರಾಂತಿ ಕಲ್ಯಾಣ.pdf/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೪೬

ಕ್ರಾಂತಿ ಕಲ್ಯಾಣ


ವಿಷಣ್ಣತೆಯ ಭಾರವನ್ನು ಕೆಳಗಿಳಿಸುವಂತೆ ಮಂಚಣನು ತಲೆಕೊಡವಿ, ಕ್ರಮಿತನ ಕಡೆ ತಿರುಗಿ,

“ಮಧುವರಸನಂತಹ ದಕ್ಷ ಮಂತ್ರಿಯನ್ನು, ಹರಳಯ್ಯನಂತಹ ನಿರುಪದ್ರವಿ ವೃದ್ಧನನ್ನು, ಶೀಲವಂತನಂತಹ ಅಭಿಜ್ಞಕಲಾಕಾರನನ್ನು ವರ್ಣಸಂಕರದ ಸಾಮಾನ್ಯ ಆಪಾದನೆಯ ಮೇಲೆ ವಿಚಾರಣೆಯಿಲ್ಲದೆ ಸೆರೆಮನೆಗೆ ಕಳುಹಿಸಿದ್ದು ನಮಗೆ ಅಭಿಮಾನಾಸ್ಪದವಾದ ವಿಷಯವಲ್ಲ, ನಾರಣಕ್ರಮಿತರೆ. ಚಾಲುಕ್ಯ ಜನ ಸಮುದಾಯ, ಭವಿಷ್ಯ ಇತಿಹಾಸಕಾರರು, ಈ ಅಕೃತ್ಯಕ್ಕಾಗಿ ನಮ್ಮನ್ನು ಶಪಿಸುವುದು ಖಂಡಿತ. ಅದಕ್ಕಾಗಿ ಚಿಂತಿಸುತ್ತಿದ್ದೇನೆ,” ಎಂದು ಗಂಭೀರವಾಗಿ ನುಡಿದನು.

ರುದ್ರಭಟ್ಟನು ಮೌನ, ನಿರ್ಲಿಪ್ತತೆಯ ಮುಖವಾಡ, ಅವನ ಮನಸ್ಸಿನ ತಳಮಳವನ್ನು ಮರೆಮಾಡಿತ್ತು.

“ನಮ್ಮ ಕಾರ್ಯದಕ್ಷತೆಯಿಂದ ಸರ್ವಾಧಿಕಾರಿ ಬಿಜ್ಜಳರಾಯರು ಸುಪ್ರೀತರಾಗುವರು, ಮಂಚಣನಾಯಕರೆ. ಜನಸಮುದಾಯದ ಶಾಪ, ಇತಿಹಾಸಕಾರರ ಏಕಪಕ್ಷೀಯ ಟೀಕೆಗಳು, ನಮ್ಮನ್ನೇನೂ ಮಾಡಲಾರವು.” ದರ್ಪ ದುರಭಿಮಾನಗಳಿಂದ ಕ್ರಮಿತನು ಹೇಳಿದನು.

“ಹಾಗಾದರೆ, 'ಸರ್ವಾಧಿಕಾರಿ ದೇವತಾ ಸುಪ್ರೀತಾ ಸುಪ್ರಸನ್ನಾ ವರದಾ ಭವಂತು' ಎಂಬ ಅನುಕೂಲಸಿಂಧು ಸೂತ್ರವನ್ನು ಧರ್ಮಾಧಿಕರಣದ ಗೋಡೆಗಳ ಮೇಲೆ ಬರೆಸಿಬಿಡಿ!” ಎಂದು ಕಟಕಿಯಾಡಿ ನಕ್ಕನು ಮಂಚಣ.

ನ್ಯಾಯಾಲಯದ ಕರಣಿಕ ಕಾರ್ಯಕರ್ತರೂ ನಕ್ಕರು.

ಕ್ರಮಿತನು ದುರದುರ ಸುತ್ತ ನೋಡಿ, “ಇಂದಿನ ನಿರೂಪದಂತೆ ಸರ್ವಾಧಿಕಾರಿಗಳು ನಾಳೆಯೇ ಕಲ್ಯಾಣಕ್ಕೆ ಬರುತ್ತಾರೆ, ಮಂಚಣನಾಯಕರೆ. ನಿಮ್ಮ ಸಲಹೆಗೆ ಅವರು ಒಪ್ಪಿದರೆ ಬರೆಸಲು ನನ್ನ ಅಡ್ಡಿಯಿಲ್ಲ,” ಎಂದು ಹೇಳಿ ತಟ್ಟನೆದ್ದು ನ್ಯಾಯಾಲಯದಿಂದ ನಿಷ್ಕ್ರಮಿಸಿದನು. ಮಂಚಣ ಸುಯ್ಗೆರೆದು ರುದ್ರಭಟ್ಟನ ಮುಖ ನೋಡಿದನು. ರುದ್ರಭಟ್ಟ ಅರ್ಥಗರ್ಭಿತವಾಗಿ ನಕ್ಕನು.

***

ಮಂಗಳವೇಡೆಯಿಂದ ಹೊರಟ ಬಿಜ್ಜಳನು ಅವಸರದಿಂದ ಪ್ರಯಾಣಮಾಡಿ ಹತ್ತು ದಿನಗಳ ದಾರಿಯನ್ನು ಐದೇ ದಿನದಲ್ಲಿ ಕ್ರಮಿಸಿ ನಿರೀಕ್ಷಿಸಿದ್ದುದಕ್ಕಿಂತ ಒಂದು ದಿನ ಮೊದಲೇ ಕಲ್ಯಾಣಕ್ಕೆ ಬಂದಿದ್ದನು. ಈ ಅವಸರಕ್ಕೆ ಕಾರಣಗಳಿಲ್ಲದಿರಲಿಲ್ಲ.

ತನ್ನ ವಿರೋಧಿ ಸಾಮಂತರು ಸಿಂಧನಾಡಿನ ರಾಜಧಾನಿಯಲ್ಲಿ ನಡೆಸಿದ ರಹಸ್ಯ ಸಭೆಯಲ್ಲಿ ಓರಂಗಲ್ಲಿನ ಪ್ರತಾಪರುದ್ರದೇವನು ಭಾಗವಹಿಸಿದ್ದನೆಂಬ ಸುದ್ದಿ