ಪುಟ:ಕ್ರಾಂತಿ ಕಲ್ಯಾಣ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಜಗೃಹದ ರಹಸ್ಯ

೧೩

ಮೀರಿಸಬಲ್ಲನೆಂದು, ಅವನೊಡನೆ ವಾದ ಹೂಡುವುದು ಅವಿವೇಕವೆಂದು, ನಗೆಗೂಡಿಸಿ ಹೇಳಿದನು : “ನೀವು ತುಂಬ ಚತುರರು, ಅಗ್ಗಳದೇವ, ಪ್ರಭುಗಳು ನಿಮ್ಮ ತರ್ಕ ಕೇಳಿದ್ದರೆ ಸಂತೋಷಪಡುತ್ತಿದ್ದರು,” ಎಂದನು.

ಅಷ್ಟರಲ್ಲಿ ಪಸಾಯಿತನು ಅಲ್ಲಿಗೆ ಬಂದು, “ನಾಟಕಶಾಲೆಗೆ ನಿಮ್ಮನ್ನು ಕರೆತರ ಬೇಕೆಂದು ಅಪ್ಪಣೆ ಆಗಿದೆ” ಎಂದನು.

ಭುವನೇಶ್ವರ ನಾಟ್ಯತಂಡದ ಪ್ರದರ್ಶನ ಮುಗಿದು, ಬಿಜ್ಜಳರಾಯನು ನರ್ತಕಿಯರಿಗೆ ಪಾರಿತೋಷಕಗಳನ್ನು ಹಂಚುತ್ತಿದ್ದಾಗ ಕ್ರಮಿತನು ಅಗ್ಗಳನನ್ನು ನಾಟಕ ಶಾಲೆಗೆ ಕರೆದುಕೊಂಡು ಬಂದನು.

ನೆಲದಿಂದ ಒಂದು ಅಡಿ ಮಾತ್ರ ಎತ್ತರವಿದ್ದ ಅರ್ಧಚಂದ್ರಾಕೃತಿಯ ವೇದಿಕೆ, ಸುತ್ತ ಜೋಡಿಸಿದ ಭದ್ರಾಸನಗಳು, ವೇದಿಕೆಯ ಹಿಂದೆ ಎರಡು ಕಡೆಗಳಲ್ಲಿ ಎರಡು ಪ್ರಸಾಧನಗೃಹಗಳು, ಇಷ್ಟು ಮಾತ್ರ ಆ ಆಟಿಕೆಯ ನಾಟಕಶಾಲೆಯ ರಚನಾವಿಧಾನವಾಗಿತ್ತು.

ಕಲ್ಯಾಣದಲ್ಲಿದ್ದ ಚಾಲುಕ್ಯ ಅರಮನೆಯ ನಾಟಕಶಾಲೆಯ ಮಾದರಿಯಲ್ಲಿ ಕಟ್ಟಲ್ಪಟ್ಟು ಆಕೃತಿಯಲ್ಲಿ ಚಿಕ್ಕದಾದರೂ ಅಲಂಕಾರ ವೈಭವದಲ್ಲಿ ಅದಕ್ಕಿಂತ ಇದೇ ಉತ್ತಮವೆಂಬುದನ್ನು ಅಗ್ಗಳನು ಗಮನಿಸಿದನು.

ಪ್ರದರ್ಶನಕ್ಕಾಗಿ ಬಂದ ನಟನರ್ತಕಿಯರು, ಬಿಜ್ಜಳನ ಪರಿವಾರದ ಕೆಲವು ಮಂದಿ ನಿಯಕ್ತರು, ಇವರು ಮಾತ್ರವೆ ನಾಟಕಶಾಲೆಯಲ್ಲಿದ್ದರು. ಕೃಷ್ಣಪಾತ್ರ ಧಾರಿಣಿಯಾದ ಪ್ರಧಾನ ನರ್ತಕಿ ಬಿಜ್ಜಳನ ಮುಂದೆ ವೈಯಾರದಿಂದ ತಲೆಬಾಗಿ ನಿಂತಿದ್ದಳು.

ಬಿಜ್ಜಳನು ನರ್ತಕಿಯ ಗದ್ದಹಿಡಿದೆತ್ತಿ, ಕೆನ್ನೆ ಚಿವುಟಿ, “ನಿನ್ನ ಹೆಸರೇನು ಗೋಪಿಕಾಪತಿ?” ಎಂದು ನಗುತ್ತಾ ಕೇಳಿದನು.

“ನಾನು ಕೋಣಾರ್ಕ ದೇವಾಲಯದ ಪ್ರಧಾನ ನರ್ತಕಿ, ಹೆಸರು ಛಾಯಾ ದೇವಿ,” ಎಂದು ನರ್ತಕಿ ಉತ್ತರ ಕೊಟ್ಟಳು.

“ಕೋಣಾರ್ಕ ದೇವಾಲಯದ ನೃತ್ಯಶೈಲಿ ಬೇರೆ ಮಾದರಿಯದೆಂದು ಕೇಳಿದ್ದೇನೆ. ನೀವು ಈ ರಾಸಲೀಲೆಯ ನಾಟ್ಯ ಕಲಿತದ್ದು ಹೇಗೆ?”

“ಪುರಿ ಜಗನ್ನಾಥದ ಪೂಜೋತ್ಸವದಲ್ಲಿ ನಾವು ಆಗಾಗಭಾಗವಹಿಸಬೇಕಾಗುತ್ತದೆ ಅದಕ್ಕಾಗಿ ಇದನ್ನು ಕಲಿತೆ.”

“ನೀವು ಮಂಗಳವೇಡೆಯಲ್ಲಿ ಕೋಣಾರ್ಕದ ಅಶ್ಲೀಲ, ಜಗನ್ನಾಥದ ಶೀಲ. ಈ ಎರಡು ಬಗೆಯ ನಾಟ್ಯಗಳನ್ನೂ ಅಭಿನಯಿಸಬೇಕಾಗುತ್ತದೆ.”