ಪುಟ:ಕ್ರಾಂತಿ ಕಲ್ಯಾಣ.pdf/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೪೮

ಕ್ರಾಂತಿ ಕಲ್ಯಾಣ


“ನೀವು ಶುದ್ಧ ಕರ್ಮಠರು, ನಾರಣಕ್ರಮಿತರೆ. ವಿಧಿ ನಿಷೇಧಗಳ ನಿರರ್ಥಕ ಚರ್ಚೆಯಲ್ಲಿ ಎರಡು ದಿನಗಳನ್ನು ವ್ಯರ್ಥಮಾಡಿದಿರಿ. ನಾನು ನ್ಯಾಯಪೀಠದಿಂದ ಅಪೇಕ್ಷಿಸಿದ್ದು ಅಪರಾಧಿಗಳ ದಂಡನೆಯನ್ನು, ಕಾಲಹರಣದ ವಿಚಾರಣೆಯನ್ನಲ್ಲ.” ಎಂದು ಒತ್ತಿ ಹೇಳಿದನು.

ಅವಕಾಶ ದೊರೆತು ಕ್ರಮಿತನು, “ಪ್ರಭುಗಳ ಆಜ್ಞೆಯಂತೆ ನಡೆಯಲು ಯಾವಾಗಲೂ ಸಿದ್ದವಾಗಿದೆ ನ್ಯಾಯಪೀಠ. ಆದರೆ ಮಂಚಣನವರು ಹೆಜ್ಜೆ ಹೆಜ್ಜೆಗೂ ಅಡ್ಡಿಯಾಗಿದ್ದಾರೆ,” ಎಂದನು.

“ಅಡ್ಡಿಪಡಿಸುವ ಕಾರಣ?”

“ವರ್ಣಸಂಕರ ನಡೆದಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸಲು ಕುಲವೃದ್ಧರ, ಮಠಾಧಿಪತಿಗಳ ಸಾಕ್ಷ್ಯ ತೆಗೆದುಕೊಳ್ಳಬೇಕೆಂದು ಅವರು ಹೇಳುತ್ತಾರೆ.”

“ವರ್ಣಸಂಕರ ನಡೆದಿದೆಯೆಂದು ನಿರ್ಧರಿಸಿ ನಾನು ಆಜ್ಞೆ ಮಾಡಿದ ಮೇಲೆ ಬೇರೆ ಸಾಕ್ಷ್ಯದ ಅಗತ್ಯವಿಲ್ಲ. ಆಜ್ಞೆಯಂತೆ ದಂಡನೆ ವಿಧಿಸುವುದು ನ್ಯಾಯಪೀಠದ ಕಾರ್ಯ. ಅಷ್ಟಕ್ಕೆ ಅಸಮರ್ಥವಾಯಿತೇ ಧರ್ಮಾಧಿಕರಣ?” -ಬಿಜ್ಜಳನ ಮಾತು ಬೇಸರ ತಿರಸ್ಕಾರಗಳಿಂದ ಕೂಡಿತ್ತು.

“ಧರ್ಮಾಧಿಕರಣ ಪ್ರಭುತ್ವದಿಂದ ಸ್ವತಂತ್ರವಾದದ್ದೆಂದು ಮಂಚಣನಾಯಕರು ತಿಳಿದಿದ್ದಾರೆ. ನ್ಯಾಯಪೀಠದಲ್ಲಿ ನಿಮ್ಮ ಆಜ್ಞೆಯ ವಿಚಾರ ಬಂದಾಗ ಅವರು, ಕಟಕಿಯಾಡಿ ಮೂದಲಿಸಿದರು.” -ಎಂದು ಕ್ರಮಿತನು ಉತ್ತರ ಕೊಟ್ಟನು.

ಬಿಜ್ಜಳನು ವಿಚಲಿತನಾದನು. ವೃದ್ದಮಂತ್ರಿ ಮಂಚಣನು ಕೊನೆಗಾಲದಲ್ಲಿ ತನ್ನ ವಿರೋಧಿಯಾಗುವನೆಂದು ಅವನು ನಿರೀಕ್ಷಿಸಿರಲಿಲ್ಲ. ಕೆಲವು ಕ್ಷಣಗಳು ಯೋಚಿಸಿ ಅವನು,

“ಶರಣರಂತೆ ಮಂಚಣನ ಕಾಲವೂ ಮುಗಿಯುತ್ತಾ ಬಂದಿದೆ, ಕ್ರಮಿತರೆ. ಈ ಎಲ್ಲ ನ್ಯಾಯ ಸೂಕ್ಷ್ಮಗಳನ್ನು ಗಮನಿಸುತ್ತಾ ಹೋದರೆ ವಿಚಾರಣೆ ಎಂದಿಗೂ ಮುಗಿಯುವುದಿಲ್ಲ.” ಎಂದನು.

“ಹಾಗಾದರೆ ಪ್ರಭುಗಳ ಆಜ್ಞೆಯೇನು? ಅದರಂತೆ ನಾನು ಕಾರ್ಯನಿರ್ವಹಿಸುತ್ತೇನೆ.” –ಕ್ರಮಿತನು ನಮ್ರತೆಯಿಂದ ಹೇಳಿದನು.

ಬಿಜ್ಜಳನ ಮುಖ ಉನ್ಮತ್ತ ಅಟ್ಟಹಾಸದಿಂದ ಬಿರಿಯಿತು. ಸರ್ವಾಧಿಕಾರಿಯ ಉದ್ಧಟ ದರ್ಪದಿಂದ ಅವನು,

ನಾನು ಜೀವಿಸಿರುವವರೆಗೆ ಚಾಲುಕ್ಯ ರಾಜ್ಯದಲ್ಲಿ ನನ್ನ ಆಜ್ಞೆಯಿಲ್ಲದೆ ಹುಲ್ಲು ಕಡ್ಡಿಯೂ ಚಲಿಸುವುದಿಲ್ಲವೆಂಬುದನ್ನು ಮಂಚಣನಿಗೆ ತಿಳಿಸಿರಿ. ನ್ಯಾಯಪೀಠಕ್ಕೆ