ಪುಟ:ಕ್ರಾಂತಿ ಕಲ್ಯಾಣ.pdf/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೪೯


ಇನ್ನೆರಡು ದಿನ ಅವಕಾಶ ಕೊಡುತ್ತೇನೆ. ಅಷ್ಟರಲ್ಲಿ ನಿಮ್ಮ ವಿಚಾರಣೆ ಮುಗಿದು ತೀರ್ಪು ನನ್ನ ಕೈಯಲ್ಲಿರಬೇಕು. ಮಂಚಣನಾಯಕರು ಅರ್ಥಮಂತ್ರಿಯಾಗಿದ್ದಾಗ ರಾಜಧನದ ದುರುಪಯೋಗವೊಂದು ಪತ್ತೆಯಾಗಿತ್ತು. ದಾಕ್ಷಿಣ್ಯದಿಂದ ಇದುವರೆಗೆ ನಾನದನ್ನು ಮುಚ್ಚಿಟ್ಟಿದ್ದೆ. ಮಂಚನಾಯಕರು ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳದೆ ಹೋದರೆ ವೃದ್ಧಾಪ್ಯದಲ್ಲಿ ಸೆರೆಮನೆ ಸೇರಬೇಕಾಗುವುದು,” ಎಂದನು.

ಏನನ್ನೂ ಹೇಳಲೆಳಸಿ ಸಂಕೋಚಗೊಂಡವನಂತೆ ಕ್ರಮಿತನು ಸುಮ್ಮನಿರುವುದನ್ನು ಕಂಡು ಬಿಜ್ಜಳನು, “ಏಕೆ ಆ ಮುದುಕನನ್ನು ಎದುರಿಸುವ ಸಾಮರ್ಥ್ಯವೂ ಇಲ್ಲವೇ ನಿಮಗೆ? ನ್ಯಾಯಪೀಠದ ಅಧ್ಯಕ್ಷರು ನೀವು!” ಎಂದು ಅಪಹಾಸ್ಯಮಾಡಿ ನಕ್ಕನು.

ಕ್ರಮಿತನು ಚಮತ್ಕೃತನಾಗಿ, "ಪ್ರಭುಗಳು ಕ್ಷಮಿಸಬೇಕು. ಇದು ಧೈರ್ಯ ಸಾಹಸಗಳ ಪ್ರಶ್ನೆಯಲ್ಲ. ನಿಮ್ಮ ಆಜ್ಞೆ ಯಾವಾಗಲೂ ನನಗೆ ಶಿರೋಧಾರ್ಯ. ಆದರೆ ಒಂದು ಸಂದೇಹ....” -ಎಂದು ಅರ್ಧೋಕ್ತಿಯಲ್ಲಿ ನಿಲ್ಲಿಸಿದನು.

“ಸಂದೇಹ ! ಸಂದೇಹ! ಸಂದೇಹಗ್ರಸ್ತರಿಂದ ತುಂಬಿದೆ ಈ ಜಗತ್ತು! ಏನು ನಿಮ್ಮ ಸಂದೇಹ?” -ಬಿಜ್ಜಳನು ಚಡಪಡಿಸಿ ನುಡಿದನು.

ಅತಿ ವಿನಯದ ಮೆಲ್ದನಿಯಿಂದ ಕ್ರಮಿತನು, “ವರ್ಣಸಂಕರದ ಅಪರಾಧಕ್ಕೆ ಧರ್ಮಶಾಸ್ತ್ರಗಳು ವಧಾದಂಡ ವಿಧಿಸುತ್ತವೆ. ಈಗಿನ ಸಂದರ್ಭದಲ್ಲಿ ನ್ಯಾಯಪೀಠ....”

ಮುಂದುವರಿಸುವ ಅವಕಾಶವನ್ನೂ ಕೊಡದೆ ಬಿಜ್ಜಳನು,

“....ಆ ಅತಿ ಹೆಚ್ಚಿನ ದಂಡಾಜ್ಞೆಯನ್ನೇ ನಾನು ನ್ಯಾಯಪೀಠದಿಂದ ಅಪೇಕ್ಷಿಸುತ್ತೇನೆ, ಕ್ರಮಿತರೆ. ರಾಮರಾಜ್ಯದಲ್ಲಿ ವರ್ಣಸಂಕರದ ಅಪರಾಧಕ್ಕಾಗಿ ವಿಚಾರಣೆಯಿಲ್ಲದೆ ಶಂಭುಕನ ವಧೆ ನಡೆಯಿತು. ಬಿಜ್ಜಳನ ರಾಜ್ಯದಲ್ಲಿ ಧರ್ಮಶಾಸ್ತ್ರ ನಿಬಂಧನೆಯಂತೆ ವಿಚಾರಣೆ ನಡೆದು, ನ್ಯಾಯಪೀಠದ ಆಜ್ಞೆಯಂತೆ ಆ ಕಾರ್ಯ ನಡೆಯುತ್ತದೆ. ಪುರಾಣಯುಗದ ಆದರ್ಶಪಾಲನೆಗಾಗಿ ಆಧುನಿಕರಾದ ನಾವು ಇಷ್ಟಾದರೂ ಮಾಡಬೇಡವೆ?” -ಎಂದು ಮುಗಿಸಿದನು.

“ಶ್ರೀರಾಮಚಂದ್ರನ ಆ ವಧಾಕೃತ್ಯ ವಾಲ್ಮೀಕಿಯಿಂದ ಅಮರವಾಯಿತು. - ನಿಮ್ಮ ಈ ವರ್ಣಾಶ್ರಮೋದ್ದಾರ ಕಾರ್ಯವನ್ನು ಬಣ್ಣಿಸುವ ಕವಿ.....”

ಎಂದು ಕ್ರಮಿತನು ಎರಡನೇ ಸಾರಿ ಅರ್ಧೋಕ್ತಿಯಲ್ಲಿ ನಿಲ್ಲಿಸಿದನು.

.....ಹುಟ್ಟುತ್ತಾನೆ, ನಾರಣಕ್ರಮಿತರೆ. ಆ ವಿಚಾರದಲ್ಲಿ ನೀವು ಚಿಂತಿಸುವ ಅಗತ್ಯವಿಲ್ಲ.” -ಉಗ್ರವಾದಿಯ ಉನ್ಮತ್ತ ಉತ್ಸಾಹದಿಂದ ಬಿಜ್ಜಳನು ಹೇಳಿದನು.

ಕ್ರಮಿತನು ಆಸನದಿಂದೆದ್ದು ನಮಸ್ಕರಿಸಿ ಹೋಗಲನುವಾಗುತ್ತಿದ್ದಂತೆ ಹೆಗ್ಗಡೆ