ಪುಟ:ಕ್ರಾಂತಿ ಕಲ್ಯಾಣ.pdf/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೫೦

ಕ್ರಾಂತಿ ಕಲ್ಯಾಣ


ಪ್ರವೇಶಿಸಿ, “ಮಂತ್ರಿ ಚೆನ್ನಬಸವಣ್ಣನವರು ದರ್ಶನಕ್ಕಾಗಿ ಬಂದಿದ್ದಾರೆ,” ಎಂದು ಅರಿಕೆ ಮಾಡಿದನು.

“ಈ ಆವೇಳೆಯಲ್ಲಿ ದರ್ಶನಕ್ಕಾಗಿ ! ಅವರ ಅವಸರ ಕಾರ್ಯ ನಾಳಿನವರೆಗೆ ತಡೆಯಲಿ,” -ಅಸಹನೆಯಿಂದ ಬಿಜ್ಜಳನೆಂದನು.

“ಹಾಗಾದರೆ ಈಗ ಅವಕಾಶವಿಲ್ಲವೆಂದು ಹೇಳಿಬಿಡುತ್ತೇನೆ.” -ಎಂದು ಹೆಗ್ಗಡೆ ಹೋಗುತ್ತಿದ್ದಂತೆ ಬಿಜ್ಜಳನು ಅವನನ್ನು ಕರೆದು, ಕ್ರಮಿತನು ಇಲ್ಲಿರುವ ವಿಚಾರ ಚೆನ್ನಬಸವಣ್ಣನವರಿಗೆ ತಿಳಿದಿದೆಯೇ?” ಎಂದು ಕೇಳಿದನು.

“ಪ್ರಭುಗಳು ವಿಶ್ರಾಂತಿ ಪಡೆಯುತ್ತಿರುವರೆಂದು ಹೇಳಿದೆ. ಕ್ರಮಿತರ ವಿಚಾರ ತಿಳಿಸಲಿಲ್ಲ.” -ಹೆಗ್ಗಡೆ ಉತ್ತರ ಕೊಟ್ಟನು.

ಬಿಜ್ಜಳನು ಕೆಲವು ಕ್ಷಣಗಳು ಯೋಚಿಸಿ, “ಹಾಗಾದರೆ ಚೆನ್ನಬಸವಣ್ಣನವರನ್ನು ಕರೆದುಕೊಂಡು ಬಾ,” ಎಂದು ಆಜ್ಞೆ ಮಾಡಿದನು.

ಹೆಗ್ಗಡೆ ಹೋದಕೂಡಲೆ ಬಿಜ್ಜಳನು ಕ್ರಮಿತನ ಕಡೆ ತಿರುಗಿ, “ನೀವು ಇಲ್ಲಿದ್ದಿರೆಂದು ಆ ಶರಣನಿಗೆ ತಿಳಿಯದಿದ್ದರೆ ಒಳ್ಳೆಯದು. ಕೊಂಚಕಾಲ ಪಾರ್ಶ್ವದ ಆ ಸಣ್ಣ ಕೋಣೆಯಲ್ಲಿರಿ,” ಎಂದನು. ಬಿಜ್ಜಳನ ವಿಚಿತ್ರ ಸಲಹೆ ಕ್ರಮಿತನನ್ನು ಅಚ್ಚರಿಗೊಳಿಸಿತು. 'ಪ್ರಭುಗಳು ಇಂದು ಹೀಗೇಕೆ ವರ್ತಿಸುತ್ತಿದ್ದಾರೆ. ಸಂದರ್ಶನದಲ್ಲಿ ನಡೆಯುವ ಮಾತುಕಥೆಗಳು ನನಗೆ ತಿಳಿದಿರಲೆಂದೇ?' ಎಂದು ಯೋಚಿಸುತ್ತ ಅವಸರದಲ್ಲಿ ಒಳಹೊಕ್ಕು ತೆರೆ ಸರಿಸಿಕೊಂಡನು.

ವಿಶ್ರಾಂತಿಗೃಹದ ಚಿತ್ರಾಲಂಕೃತವಾದ ನೆಲದಮೇಲೆ ಬಿಜ್ಜಳನು ಶತಪಥ ತಿರುಗಾಡುತ್ತಿದ್ದಂತೆ ಹೆಗ್ಗಡೆ ಚೆನ್ನಬಸವಣ್ಣನವರನ್ನು ಕರೆದುಕೊಂಡು ಅಲ್ಲಿಗೆ ಬಂದನು.

“ಅವೇಳೆಯಲ್ಲಿ ಪ್ರಭುಗಳಿಗೆ ತೊಂದರೆ ಕೊಟ್ಟಿದ್ದಕ್ಕಾಗಿ ಕ್ಷಮೆ ಬೇಡುತ್ತೇನೆ. ಕಾರ್ಯಾವಸರ ನನ್ನನ್ನು ಈ ಸಾಹಸಕ್ಕೆ ತಳ್ಳಿತು.”

-ಎಂದು ಹೇಳಿ ಚೆನ್ನಬಸವಣ್ಣನವರು ಬಿಜ್ಜಳನಿಗೆ ವಂದಿಸಿದರು.

ಮಾರ್ದವ ಗಾಂಭೀರ್ಯಗಳ ಸಹಜ ಮಿಶ್ರಣದಿಂದ ಗುರುಮನೆಗೆ ಅಗತ್ಯವೂ ಅರಮನೆಗೆ ಅಪರೂಪವೂ ಆಗಿದ್ದ ಚೆನ್ನಬಸವಣ್ಣನವರ ಕಂಠ, ಅವರ ಮಾತುಗಳಿಗೆ ಸ್ವಾಭಿಮಾನ ಸರಳತೆಗಳನ್ನು ಕೊಟ್ಟಿತ್ತು. ನಿನ್ನೆ ಮೊನ್ನಿನ ಈ ಬಾಲಕ, ಪಾಂಡಿತ್ಯದ ಪ್ರತಿಭೆಯಿಂದ ನೈಷ್ಠಿಕ ಜೀವನದ ತೇಜಸ್ಸಿನಿಂದ ತನ್ನೊಡನೆ ಸಮಾನಸ್ಕಂದನಂತೆ ವರ್ತಿಸುವುದನ್ನು ಕಂಡು ಬಿಜ್ಜಳನು ಮೊದಲಿಂದ ಅಸಮಾಧಾನಗೊಂಡಿದ್ದನು. ಕುಳಿತುಕೊಳ್ಳುವ ಅವಕಾಶವನ್ನೂ ಕೊಡದೆ ನಾಲ್ಕೇ ಮಾತುಗಳಿಂದ ಸಂದರ್ಶನವನ್ನು