ಪುಟ:ಕ್ರಾಂತಿ ಕಲ್ಯಾಣ.pdf/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೫೧


ಮುಗಿಸುವುದು ಈಗ ಅವನ ಉದ್ದೇಶವಾಗಿತ್ತು.

“ರಾಜಕಾರ್ಯದ ಹೊಣೆ ನಿಮ್ಮಂತೆ ನನ್ನನ್ನೂ ತ್ವರಿತಗೊಳಿಸುತ್ತಿದೆ, ಚೆನ್ನಬಸವಣ್ಣನವರೆ, ಮಂಗಳವೇಡೆಯ ಅಗ್ನಿಅಪಘಾತದಿಂದ ನಾನು ಕೆಲವು ದಿನಗಳು ನಿಶ್ಚೇಷ್ಟಿತನಾದೆ. ಇಲ್ಲವೆ ವಾರಕ್ಕೆ ಮೊದಲೆ ಕಲ್ಯಾಣಕ್ಕೆ ಬರಬೇಕಾಗಿತ್ತು. ನೀವು ಬಂದ ಅವಸರದ ಕಾರ್ಯವೇನು?” ಎಂದು ಬಿಜ್ಜಳನು ತಾನೇ ಮಾತಿಗೆ ಪ್ರಾರಂಭಿಸಿದನು.

“ಪ್ರಭುಗಳು ಚಾಲುಕ್ಯರಾಜ್ಯದ ಸರ್ವಾಧಿಕಾರಿಯಾಗಿರುವಾಗ ಧರ್ಮಾಧಿಕರಣದ ಹೆಸರಿನಲ್ಲಿ ನಡೆಯುತ್ತಿರುವ ಸತ್ಯಧರ್ಮಗಳ ಅಪಚಾರವನ್ನು ತಮ್ಮ ಗಮನಕ್ಕೆ ತರುವ ಉದ್ದೇಶದಿಂದ ನಾನಿಲ್ಲಿಗೆ ಬಂದೆ. ಮಧುವರಸ ಹರಳಯ್ಯಗಳ ಬಂಧನ, ಸಾಕ್ಷ್ಯ ಕೊಡಲು ಹೋದ ಶೀಲವಂತನನ್ನು ಅಲ್ಲಿಯೇ ಬಂಧಿಸಿ ಸೆರೆಮನಗೆ ಕಳುಹಿಸಿದ್ದು, ಧರ್ಮಾಧಿಕರಣದ ಈ ಕಾರ್ಯಗಳು ಕಲ್ಯಾಣದ ನಾಗರಿಕರನ್ನು ಸ್ತಂಭಿತಗೊಳಿಸಿವೆ. ಜನರು ಬೆದರಿದ್ದಾರೆ. ಪ್ರಭುಗಳ ಪರೋಕ್ಷದಲ್ಲಿ ನಡೆದ ಈ ಅಕ್ರಮ ಅನ್ಯಾಯಗಳನ್ನು ಸರಿಪಡಿಸಬೇಕಾಗಿ ಬೇಡಿಕೊಳ್ಳುತ್ತೇನೆ.” – ಎಂದು ಚೆನ್ನಬಸವಣ್ಣನವರು ಬಿನ್ನವಿಸಿಕೊಂಡರು. ಬಿಜ್ಜಳನು ಕೂಡಲೆ ಉತ್ತರ ಕೊಡಲಿಲ್ಲ. ತುಸು ಹೊತ್ತು ಯೋಚಿಸಿ ಗಂಭೀರವಾಗಿ,

“ವಸ್ತುಸ್ಥಿತಿ ಏನೆಂಬುದನ್ನು ತಿಳಿಯದೆ ನೀವು ಈ ವಿಷಯಕ್ಕೆ ಪ್ರವೇಶಿಸುತ್ತಿದ್ದೀರಿ, ಚೆನ್ನಬಸವಣ್ಣನವರೆ. ಈ ಎಲ್ಲ ಬಂಧನಗಳೂ ನನ್ನ ಆಜ್ಞೆಯಿಂದ ನಡೆದವು. ಹರಳಯ್ಯ ಮಧುವರಸರಿಂದ ವರ್ಣಸಂಕರದ ಅಪರಾಧ ನಡೆದಿದೆಯೆಂದು ನಮಗೆ ಖಚಿತವಾಗಿ ತಿಳಿದಮೇಲೆ, ಚಾಲುಕ್ಯ ರಾಜ್ಯದ ಘನತೆ ಗೌರವ ಸಂಪ್ರದಾಯಗಳ ರಕ್ಷಣೆಗಾಗಿ ಆ ಅವಸರದ ಆಜ್ಞೆಯನ್ನು ಮಾಡಬೇಕಾಯಿತು. ಈ ಅಕೃತ್ಯದಲ್ಲಿ ಶೀಲವಂತ ಪ್ರಮುಖ ವ್ಯಕ್ತಿ. ಅವನ ಬಂಧನ ಮತ್ತು ವಿಚಾರಣೆ ಧರ್ಮಾಧಿಕರಣದ ನಿಯಮ ನಿಬಂಧನೆಗಳಂತೆ ನಡೆಯುತ್ತಿದೆ.” ಎಂದು ಹೇಳಿದನು.

"ಪ್ರಭುಗಳು ಧರ್ಮಾಧಿಕಾರಿಗಳಾಗಿ ನಡೆಸಿದ ರಾಜಸಭೆಯಲ್ಲಿ ವರ್ಣಸಂಕರದ ವಿಚಾರವಾಗಿ ಚರ್ಚೆ ನಡೆದು, ನಿಪುಣರ ಸಮಿತಿ ನೇಮಕವಾಯಿತು. ಆ ಸಮಿತಿ ವರದಿ ಮಾಡುವ ಮೊದಲೇ ಪ್ರಭುಗಳು ಈ ಹೊಸ ಆಜ್ಞೆ ಹೊರಡಿಸಿ ವಧುವರಸ ಹರಳಯ್ಯಗಳನ್ನು ನ್ಯಾಯಪೀಠದ ಮುಂದೆ ನಿಲ್ಲಿಸಿದ್ದು ಕ್ರಮಬದ್ಧವಲ್ಲವೆಂದು ಅರಿಕೆ ಮಾಡಿಕೊಳ್ಳುತ್ತೇನೆ.”

-ಇಮ್ಮಡಿ ವಿನಯದಿಂದ ಚೆನ್ನಬಸವಣ್ಣನವರು ಮತ್ತೆ ಬಿನ್ನವಿಸಿಕೊಂಡರು.