ಪುಟ:ಕ್ರಾಂತಿ ಕಲ್ಯಾಣ.pdf/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೫೨

ಕ್ರಾಂತಿ ಕಲ್ಯಾಣ


“ರಾಜಸಭೆ ಧರ್ಮಾಧಿಕರಣವಲ್ಲ. ವರ್ಣಸಂಕರದ ಬಗೆಗೆ ನಾಗರಿಕರ ಮನವಿ ಪತ್ರವನ್ನು ಅಧಿಕೃತವಾಗಿ ಸ್ವೀಕರಿಸಿ, ಉಭಯಪಕ್ಷಗಳ ಅಭಿಮತವನ್ನು ತಿಳಿದುಕೊಳ್ಳುವುದು, ಸಭೆ ನಡೆಸುವುದರಲ್ಲಿ ನಮ್ಮ ಉದ್ದೇಶವಾಗಿತ್ತು. ಆ ಸಂದರ್ಭದಲ್ಲಿ ನಡೆದ ವಾದ ವಿವಾದಗಳು ನ್ಯಾಯಪೀಠದ ವಿಚಾರಣೆಯ ರೂಪ ತಾಳುವುದೆಂದು ನಾವು ನಿರೀಕ್ಷಿಸಿರಲಿಲ್ಲ. ಪರಿಸ್ಥಿತಿಯ ಅವಸರ ಆವೇಗಗಳನ್ನು ಗಮನಿಸಿ ಆಗ ನಾವು ನಿಪುಣರ ಸತ್ಯಶೋಧನಾ ಸಮಿತಿಯನ್ನು ನೇಮಿಸುವುದು ಅಗತ್ಯವಾಯಿತು. ನ್ಯಾಯಪೀಠದ ಸಾಮಾನ್ಯ ಅಧಿಕಾರಗಳೂ ಆ ಸಮಿತಿಗಿರಲಿಲ್ಲ. ಯಥಾಕಾಲದಲ್ಲಿ ಸಭೆ ಸೇರಿ ವರದಿ ಮಾಡದಿದ್ದುದರಿಂದ ಸಮಿತಿಯನ್ನು ವಿಸರ್ಜಿಸಿ ಅದರ ಸ್ಥಾನದಲ್ಲಿ ನ್ಯಾಯಪೀಠವನ್ನು ರಚಿಸಿದೆ. ಚಾಲುಕ್ಯರಾಜ್ಯದಲ್ಲಿ ಅನಾದಿಕಾಲದಿಂದ ಆಚರಣೆಯಲ್ಲಿರುವ ಜಾತಿಪಂಥ ವರ್ಣಾಶ್ರಮಧರ್ಮಗಳ ರಕ್ಷಣೆಗಾಗಿ ಈ ಕಾರ್ಯ ಅಗತ್ಯವಾಯಿತು. ವರ್ಣಸಂಕರದ ಅಪರಾಧ ನಡೆದಿದೆಯೆಂದು ದೃಢವಾಗಿ ತಿಳಿದ ಮೇಲೆ, ಅಪರಾಧಿಗಳನ್ನು ದಂಡಿಸಿ, ಆ ಬಗೆಯ ದುಷ್ಟಪ್ರವೃತ್ತಿಯನ್ನು ನಿರ್ಮೂಲ ಮಾಡುವುದು ನಮ್ಮ ಕರ್ತವ್ಯ. ಅದನ್ನು ನಿರ್ವಹಿಸಲು ನಾನು ಪಣ ತೊಟ್ಟಿದ್ದೇನೆ.” -ಅಧಿಕಾರ ದರ್ಪದಿಂದ ಬಿಜ್ಜಳನು ಹೇಳಿದನು.

ಬಿಜ್ಜಳನ ರಾಜ್ಯಾಪಹಾರದ ಅನಂತರ ಪ್ರಚಾರಕ್ಕೆ ಬಂದಿದ್ದ ನಿರಂಕುಶ ಪ್ರಭುತ್ವದ ನಗ್ನರೂಪವನ್ನು ಕಂಡು ಚೆನ್ನಬಸವಣ್ಣನವರು ಸ್ತಂಭಿತರಾದರು. ಈ ದುರ್ದಮ್ಯ ದಬ್ಬಾಳಿಕೆಯ ಕೋರೆದಾಡೆಗಳಿಂದ ಶರಣರನ್ನು ರಕ್ಷಿಸಲು ನಾನು ಸಮರ್ಥನಾಗುವೆನೆ? ಎಂಬ ಸಂದೇಹ ಅವರ ಮನಸ್ಸಿನಲ್ಲಿ ಮೊದಲಬಾರಿಗೆ ತಲೆದೋರಿತು. ಆದರೆ ನಿರಾಶೆಯಿಂದ ಕರ್ತವ್ಯವಿಮುಖರಾಗುವುದು ಅವರ ಸ್ವಭಾವವಾಗಿರಲಿಲ್ಲ. ನ್ಯಾಯಧರ್ಮಶಾಸ್ತ್ರಗಳ ಅಧ್ಯಯನದಿಂದ ಹುಟ್ಟಿದ ದೃಢ ವಿಶ್ವಾಸದಿಂದ ಅವರು,

“ಆದರೆ ಈ ಕರ್ತವ್ಯ ನಿರ್ವಹಣೆಯಲ್ಲಿ ಪ್ರಭುಗಳು ಧರ್ಮವಿರುದ್ಧವಾದ ಮಾರ್ಗ ಹಿಡಿಯಬಾರದಾಗಿ ನನ್ನ ಮನವಿ. ಪ್ರಭುತ್ವ ವಿಚಾರಣೆ ನಡೆಸಿ ಶಿಕ್ಷೆ ವಿಧಿಸುವ ಹದಿನೆಂಟು ಅಪರಾಧ ಸ್ಥಾನಗಳಲ್ಲಿ ವರ್ಣಸಂಕರ ಸೇರುವುದಿಲ್ಲ. ಕುಲವೃದ್ಧರು, ಮಠಾಧಿಪತಿಗಳೂ ವಿಚಾರಣೆ ನಡೆಸಿ ತೀರ್ಪುಕೊಡುವ ಆ ವಿಷಯದಲ್ಲಿ ಪ್ರಭುತ್ವದ ಪ್ರವೇಶವನ್ನು ಧರ್ಮಶಾಸ್ತ್ರಗಳು ನಿಷೇಧಿಸುತ್ತವೆ. ಚಾಲುಕ್ಯ ರಾಜ್ಯದಲ್ಲಿ ಸತ್ಯ ಧರ್ಮಗಳ ರಕ್ಷಣೆಗಾಗಿ ಪಣತೊಟ್ಟ ಪ್ರಭುಗಳು, ಬಂಧನದಲ್ಲಿರುವವರನ್ನು ಬಿಡುಗಡೆ ಮಾಡಿ ಅವರ ವಿಚಾರಣೆಯ ಹೊಣೆಯನ್ನು ಕುಲವೃದ್ಧ ಮಠಾಧಿಪತಿಗಳಿಗೊಪ್ಪಿಸುವುದು ಸೂಕ್ತವಾದ ಮಾರ್ಗ,” ಎಂದು ನುಡಿದರು.