ಪುಟ:ಕ್ರಾಂತಿ ಕಲ್ಯಾಣ.pdf/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೫೩


“ಎಲ್ಲ ಸಂದರ್ಭಗಳಲ್ಲಿಯೂ ಧರ್ಮಶಾಸ್ತ್ರ ನಿಬಂಧನೆಯಂತೆ ಆಡಳಿತ ನಡೆಸುವುದು ಸಾಧ್ಯವಲ್ಲ. ಯುದ್ಧ ಕ್ಷಾಮ ಡಾಮರ ಮುಂತಾದ ವಿಶೇಷ ಸಂದರ್ಭಗಳಲ್ಲಿ ಕುಲವೃದ್ಧ ಮಠಾಧಿಕಾರಿಗಳ ಅಧಿಕಾರವನ್ನು ರಾಜನೇ ನಿರ್ವಹಿಸುವುದು ಅಗತ್ಯವಾಗುತ್ತದೆ. ಈಗ ಚಾಲುಕ್ಯ ರಾಜ್ಯಕ್ಕೆ ಅಂತಹ ವಿಶೇಷ ಪರಿಸ್ಥಿತಿ ಒದಗಿದೆಯೆಂದು ಭಾವಿಸಿ, ಕುಲವೃದ್ದ ಮಠಾಧಿಕಾರಿಗಳ ಅಧಿಕಾರವನ್ನು ನಾವು ವಹಿಸಿಕೊಂಡಿದ್ದೇವೆ. ಅದರಂತೆ ರಚಿತವಾದ ನ್ಯಾಯಪೀಠದ ಮುಂದೆ ಆಪಾದಿತರ ಪರವಾಗಿ ನೀವು ಮನವಿ ಸಲ್ಲಿಸಬಹುದು,” ಎಂದು ನುಡಿದು ಬಿಜ್ಜಳನು ಸಂದರ್ಶನ ಮುಗಿದುದನ್ನು ಸೂಚಿಸಲು ಹೊರಡಲನುವಾದನು.

“ಸತ್ಯಧರ್ಮಗಳಿಗೆ ವಿರುದ್ಧವಾಗಿ ರಚಿತವಾದ ಈ ನ್ಯಾಯಪೀಠವನ್ನು ನಾಗರಿಕರು ಒಪ್ಪುವುದಿಲ್ಲ. ಅದು ನಡೆಸುವ ವಿಚಾರಣೆಗೆ, ಕೊಡುವ ತೀರ್ಪಿಗೆ ಆಪಾದಿತರು ಬದ್ದರಾಗುವುದಿಲ್ಲ. ಪ್ರಭುಗಳ ಈ ನಿರಂಕುಶ ವರ್ತನೆಯನ್ನು ವಿರೋಧಿಸುವುದು ಮಂತ್ರಿಮಂಡಲದ ಸದಸ್ಯನಾದ ನನ್ನ ಕರ್ತವ್ಯ.” - ಚೆನ್ನಬಸವಣ್ಣನವರ ದನಿಯಲ್ಲಿ ಕರ್ಕಶತೆ ಇಚ್ಛೆಯಿಲ್ಲದೆ ತಲೆಹಾಕಿತ್ತು. ತಿರಸ್ಕಾರದ ಸ್ಪರ್ಧಾಭಾವದಿಂದ ಅವರು ನುಡಿದರು.

ಬಿಜ್ಜಳನ ಹುಬ್ಬುಗಳು ಕುಂಚಿತವಾದವು. ಕಣ್ಣುಗಳಿಂದ ಉನ್ಮತ್ತ ಕೋಪದ ಕಿಡಿಗಳು ಹಾರಿದವು. ದೀರ್ಘಾಭ್ಯಾಸದಿಂದ ಅವನು ಉಕ್ಕಿಬರುತ್ತಿದ್ದ ಆವೇಗವನ್ನು ಅದಮಿಟ್ಟು ಮುಖದಲ್ಲಿ ಕುಹಕದ ನಗೆ ಮೂಡಿಸಿ,

“ನೀವು ರಾಜಕೀಯಾನುಭವವಿಲ್ಲದ ತರುಣರು, ಚೆನ್ನಬಸವಣ್ಣನವರೆ. ಬಸವ ದಂಡನಾಥರ ಬಂಧುವೆಂಬ ಕಾರಣದಿಂದ ನಿಮ್ಮನ್ನು ಮಂತ್ರಿಯಾಗಿ ತೆಗೆದುಕೊಳ್ಳುವುದು ಅಗತ್ಯವಾಯಿತು. ಆದರೆ ನೀವು ಪ್ರಭು-ಭೃತ್ಯ ಸಂಬಂಧವನ್ನು ಮರೆತು, ಸಭೆಯ ಮರ್ಯಾದೆಯನ್ನು ಕಡೆಗಣಿಸಿ, ನನ್ನೊಡನೆ ಈ ರೀತಿ ವರ್ತಿಸುವಿರೆಂದು ನಾನು ಯಾವಾಗಲೂ ನಿರೀಕ್ಷಿಸಿರಲಿಲ್ಲ. ಶರಣಧರ್ಮದ ದರ್ಪ ದುರಭಿಮಾನಗಳು ನಿಮ್ಮನ್ನು ನುಡಿಸುತ್ತಿದೆಯೆಂದು ತಿಳಿದು ಮನ್ನಿಸಿದ್ದೇನೆ. ದೀರ್ಘ ಪ್ರವಾಸದಿಂದ ಬಳಲಿದ ನನಗೆ ಈಗ ವಿಶ್ರಾಂತಿ ಅಗತ್ಯ. ಸಂದರ್ಶನ ಮುಗಿಯಿತು.” -ಎಂದು ನುಡಿದು ಮುಖ ತಿರುಗಿಸಿದನು.

ಪ್ರಯತ್ನ ವಿಫಲವಾಯಿತೆಂದು ಚೆನ್ನಬಸವಣ್ಣನವರು ತಿಳಿದರು. ಬರಿಗೈಯಿಂದ ಮಹಮನೆಗೆ ಹಿಂದಿರುಗುವುದು ಹೇಗೆ ? ಎಂದು ಚಿಂತಿಸಿ,

“ಸೆರೆಮನೆಯಲ್ಲಿ ಆಪಾದಿತರನ್ನು ಅಮಾನುಷ ಕೌಂರ್ತದಿಂದ ನಡೆಸಿಕೊಳ್ಳುತ್ತಿದ್ದಾರೆ. ಈ ಸಾಮಾನ್ಯ ವಿಚಾರದಲ್ಲಾದರೂ ಪ್ರಭುಗಳು