ಪುಟ:ಕ್ರಾಂತಿ ಕಲ್ಯಾಣ.pdf/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೫೪

ಕ್ರಾಂತಿ ಕಲ್ಯಾಣ


ಉದಾರತೆಯಿಂದ ನಡೆದುಕೊಳ್ಳಬೇಕಾಗಿ ಬೇಡುತ್ತೇನೆ,” -ಎಂದು ಬಿನ್ನವಿಸಿಕೊಂಡರು.

ಬಿಜ್ಜಳನು ಮುಖ ತಿರುಗಿಸಿ ಉಪೇಕ್ಷೆಯ ಕಟು ಧ್ವನಿಯಿಂದ, "ಧರ್ಮಾಧಿಕರಣದ ಧಿಕರಣದ ಸಾಮಾನ್ಯ ನಿಬಂಧನೆಗಳಂತೆ ಬಂಧಿತರನ್ನು ನಡೆಸಿಕೊಳ್ಳಲಾಗುತ್ತಿದೆ. ಶರಣರೆಂಬ ಕಾರಣದಿಂದ ಯಾವ ಹೊಸ ಪದ್ಧತಿಯನ್ನೂ ಆಚರಣೆಗೆ ತಂದಿಲ್ಲ,” ಎಂದು ಹೇಳಿದನು.

ಚೆನ್ನಬಸವಣ್ಣನವರು ನಿರಾಶೆಯ ತೀವ್ರತೆಯಿಂದ ನಿಟ್ಟುಸಿರಿಟ್ಟುಹೆಗ್ಗಡೆಯೊಡನೆ ಅಲ್ಲಿಂದ ಸರಿದರು.

ತುಸುಹೊತ್ತಿನ ಮೇಲೆ ಬಿಜ್ಜಳನು ಕ್ರಮಿತನನ್ನು ಹೊರಗೆ ಕರೆದು “ಹೇಗಿತ್ತು ನನ್ನ ಅಭಿನಯ?” ಎಂದು ನಗುತ್ತ ಕೇಳಿದನು.

“ಪ್ರಭುಗಳ ರಾಜನೀತಿ ಅನುಭವಗಳು ಅಗಾಧ. ಕ್ಷಣಕಾಲ ನಾನೆಲ್ಲಿರುವೆ ನೆಂಬುದನ್ನೇ ಮರೆತೆ.” -ಮೆಚ್ಚುಗೆಯ ಆವೇಶದಿಂದ ಕ್ರಮಿತನು ನುಡಿದನು “ಇಷ್ಟೆಲ್ಲ ಚಾತುರ್ಯ ಕೌಶಲಗಳು ರಾಜಿಕಕ್ಕೆ ಅಗತ್ಯವೇ?” -ಬೇಸರದಿಂದ ಹೇಳಿದನು ಬಿಜ್ಜಳ.

“ಅಗತ್ಯ, ಪ್ರಭು. 'ವಾರಾಂಗನೇವ ನೃಪನೀತಿರನೇಕ ರೂಪಾ' ಎಂದು ಕವಿ ಹೇಳಿದ್ದಾನೆ. ಸೂಳೆಯಂತೆ ರಾಜನೂ ಸಂದರ್ಭೋಚಿತವಾಗಿ ಬೇರೆ ಬೇರೆ ಮುಖವಾಡಗಳನ್ನು ಧರಿಸಿ ಅಭಿನಯಿಸಬೇಕಾಗುವುದು.”

“ನೀವು ವಾರಾಂಗನೆಯೆಂದದ್ದು ನೆನಪಾಯಿತು, ಕ್ರಮಿತರೆ. ಕಲ್ಯಾಣದ ನಮ್ಮ ಗಣಿಕಾವಾಸಗಳಲ್ಲಿ ಯಾವುದು ತೆರವಾಗಿದೆ?”

“ಧರ್ಮಾಧಿಕರಣದ ಪಾರ್ಶ್ವದಲ್ಲಿರುವ ಸಮ್ಮುಖದ ಚಾವಡಿ. ಉಳಿದೆಲ್ಲ ಕಡೆಗಳಲ್ಲಿ ಮಂಗಳವೇಡೆಗೆ ಬಂದಿದ್ದ ನರ್ತಕಿಯರು ಬಿಡಾರ ಮಾಡಿದ್ದಾರೆ. ಇನ್ನೆರಡು ವಾರಗಳವರೆಗೆ ಅವುಗಳಲ್ಲಿ ಯಾವುದೂ ತೆರವಾಗುವುದಿಲ್ಲ.”

“ಹಾಗಾದರೆ ಸಮ್ಮುಖದ ಚಾವಡಿಗಳನ್ನು ಅತ್ಯಾಧುನಿಕ ಅಲಂಕಾರ ವಸ್ತುಗಳಿಂದ ಸಜ್ಜುಗೊಳಿಸಿರಿ, ಕ್ರಮಿತರೆ. ಮಂಗಳವೇಡೆಯ ಹೊಸ ಹೆಗ್ಗಡತಿಯೊಬ್ಬಳು ಇನ್ನೆರಡು ದಿನಗಳಲ್ಲಿ ಅದರ ಒಡತಿಯಾಗಿ ಬರುತ್ತಾಳೆ. ನಂಬಿಕಸ್ಥರಾದ ಎಂಟುಮಂದಿ ದಾಸದಾಸಿಯರು, ಕಾವಲುಭಟರು ಸಿದ್ಧರಾಗಿರಬೇಕು.”

"ಆಜ್ಞೆ"

“ನೀವಿನ್ನು ಹೋಗಬಹುದು. ನ್ಯಾಯಪೀಠದ ತೀರ್ಪಿನ ವಿಚಾರದಲ್ಲಿ ನನ್ನ ಆದೇಶ ನೆನಪಿರಲಿ.”