ಪುಟ:ಕ್ರಾಂತಿ ಕಲ್ಯಾಣ.pdf/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವವಾದಾಗ

೨೫೫

ಕ್ರಮಿತನು ತಲೆಬಾಗಿ ನಮಸ್ಕಾರ ಮಾಡಿ ಹೊರಗೆ ಹೋಗುತ್ತಿದ್ದಂತೆ ಪಾನ
ಪಾತ್ರೆ ಬೀಸಣಿಗೆಗಳನ್ನು ಹಿಡಿದ ದಾಸದಾಸಿಯರು ಪುನಃ ಅಲ್ಲಿಗೆ ಬಂದರು.
ರಾಜಪೌರೋಹಿತ್ಯ-ಧರ್ಮಾಧಿಕರಣಗಳಂತೆ ಬಿಜ್ಜಳನ ಗಣಿಕಾವಾಸಗಳ
ಮೇಲ್ವಿಚಾರಣೆಯನ್ನೂ ಕ್ರಮಿತನೇ ನೋಡಿಕೊಳ್ಳಬೇಕಾಗಿತ್ತು. ಅಗ್ನಿ ಅಪಘಾತದ
ಅನಂತರ, ತಾನು ಮಂಗಳವೇಡೆಯನ್ನು ಬಿಟ್ಟ ನಾಲ್ಕು ದಿನಗಳ ಅಂತರದಲ್ಲಿ
ಪ್ರಭುಗಳ ಮೇಲೆ ಮೋಹದ ಇಂದ್ರಜಾಲ ಬೀರಿದ ಆ ಹೊಸ ಹೆಗ್ಗಡತಿ ಯಾರು?
ಎಂಬ ಚಿಂತೆಯಲ್ಲಿ ಕ್ರಮಿತನು ಮಗ್ನನಾದನು. ತಾನೇ ಏರ್ಪಡಿಸಿದ್ದ ಮಹಾ ವ್ರತದ
ಬಯಲಾಟದಲ್ಲಿ ಗಣಿಕೆಯ ಪಾತ್ರ ವಹಿಸಿದ್ದ ಪಂಡಿತ ಪತ್ನಿಯೇ ಆ ಹೊಸ
ಹೆಗ್ಗಡತಿಯೆಂಬುದು ಆಗ ಕ್ರಮಿತನಿಗೆ ತಿಳಿದಿದ್ದರೆ, ಅವನ ಏಳು ತಲೆಮಾರಿನ
ಪಿತೃಗಳು ಸ್ವರ್ಗದಲ್ಲಿ ಬೆಚ್ಚಿ ಏಳುತ್ತಿದ್ದರು.
* * *
ಚೆನ್ನಬಸವಣ್ಣನವರ ಮ್ಲಾನ ಮುಖವನ್ನು ಕಂಡಾಗ ಮಾಚಿದೇವ ಸಕಲೇಶ
ಮಾದರಸರು ತಿಳಿದರು, ಸಂಧಾನ ವಿಫಲವಾಯಿತೆಂದು. ಸಂದರ್ಶನದಲ್ಲಿ ನಡೆದುದನ್ನು
ವಿವರಿಸಿ ಚೆನ್ನಬಸವಣ್ಣನವರು,
“ಬಿಜ್ಜಳರಾಯರ ಸವಿನುಡಿಗಳಿಗೆ ಮರುಳಾಗಿ ಮಂತ್ರಿಯಾಗಿರಲು ನಾನು
ಒಪ್ಪಿಕೊಂಡದ್ದು ತಪ್ಪು ಹೆಜ್ಜೆಯೆಂದು ಈಗ ಅರಿವಾಗುತ್ತಿದೆ. ರಾಜಕೀಯಾನುಭವವಿಲ್ಲದ
ನಾನು ರಾಜಕೀಯ ವ್ಯವಹಾರದಲ್ಲಿ ಚತುರರಾದ ಬಿಜ್ಜಳರಾಯರೊಡನೆ ಸೆಣಸುವುದು
ಸಾಧ್ಯವೆ? ಮಂತ್ರಿಮಂಡಲದಿಂದ ನಿವೃತ್ತನಾಗಲು ಯೋಚಿಸಿದ್ದೇನೆ,” ಎಂದರು.
ಚೆನ್ನಬಸವಣ್ಣನವರ ನುಡಿಗಳಿಂದ ಶರಣರಲ್ಲಿ ನಿರಾಶೆ ಮೂಡಿತು. ಮಧುವರಸ
ಹರಳಯ್ಯಗಳ ಬಂಧನದಿಂದ ತಳಮಳಗೊಂಡಿದ್ದ ಅವರು ಹಿಂದಿನ ಸಂಜೆ
ಲಾವಣ್ಯವತಿಯಿಂದ ಶೀಲವಂತನ ಬಂಧನದ ಸುದ್ದಿ ಕೇಳಿ ಕರ್ತವ್ಯಮೂಢರಾದರು.
ಬಿಜ್ಜಳರಾಯರ ಪರೋಕ್ಷದಲ್ಲಿ ನಾರಣಕ್ರಮಿತನಿಂದ ಈ ಕಾರ್ಯ ನಡೆದಿದೆಯೆಂದೂ,
ಪ್ರಭುಗಳು ಕಲ್ಯಾಣಕ್ಕೆ ಬಂದಕೂಡಲೆ ಅವರನ್ನು ಸಂದರ್ಶಿಸಿ ಶರಣರ ಬಿಡುಗಡೆಗೆ
ಪ್ರಂರತ್ನಿಸುವುದಾಗಿಯೂ ಹೇಳಿ ಚೆನ್ನಬಸವಣ್ಣನವರು ಅವರನ್ನು
ಸಮಾಧಾನಗೊಳಿಸಿದ್ದರು.
“ಹಾಗಾದರೆ ಬಂಧನದಲ್ಲಿರುವ ಶರಣರ ಗತಿಯೇನು ? ಅವರ ರಕ್ಷಣೆಗೆ
ಯಾವ ಉಪಾಯವೂ ಇಲ್ಲವೆ?” ತೀವ್ರ ನಿರಾಶೆಯಿಂದ ಶರಣನೊಬ್ಬನು ಪ್ರಶ್ನಿಸಿದನು.
ದೀರ್ಘಕಾಲ ಪರ್ಯಾಲೋಚನೆ ನಡೆದು ಕೊನೆಗೆ ಸಕಲೇಶ ಮಾದರಸರು
ಹೇಳಿದರು: “ಧರ್ಮಾಧಿಕರಣದಲ್ಲಿ ಪ್ರಾರಂಭವಾದ ಈ ವ್ಯವಹಾರ ಅಷ್ಟಕ್ಕೇ