ಪುಟ:ಕ್ರಾಂತಿ ಕಲ್ಯಾಣ.pdf/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೫೬

ಕ್ರಾಂತಿ ಕಲ್ಯಾಣ


ಮುಗಿಯುವುದಿಲ್ಲ. ರಾಜಕೀಯ ಆಡಳಿತಗಳಲ್ಲಿಯೂ ಹರಡುತ್ತದೆ. ಶರಣಧರ್ಮವನ್ನು ನಿರ್ಮೂಲಗೊಳಿಸುವುದು ಬಿಜ್ಜಳನ ಉದ್ದೇಶ. ಈಗ ಚೆನ್ನಬಸವಣ್ಣನವರು ಮಂತ್ರಿಪದವಿಯಿಂದ ನಿವೃತ್ತರಾದರೆ ರಾಜ್ಯದಲ್ಲಿ ಶರಣರ ಬಲ ಕುಂದುವುದು. ನಾನು ಆ ಮಾರ್ಗವನ್ನು ಅನುಮೋದಿಸುವುದಿಲ್ಲ. ನ್ಯಾಯಪೀಠದ ವಿಚಾರಣೆ ಯಾವ ರೀತಿ ಮುಗಿಯುವುದೆಂಬುದನ್ನು ಕಾದು ನೋಡಿ ಆಮೇಲೆ ನಾವು ಮುಂದಿನ ಕಾರ್ಯಕ್ರಮವನ್ನು ನಿರ್ಧರಿಸಬೇಕಾಗುವುದು.”

ಮಾಚಿದೇವರ ಅಭಿಪ್ರಾಯ ಬೇರೆಯಾಗಿತ್ತು. ಅವರು ಹೇಳಿದರು : “ನ್ಯಾಯಪೀಠದ ರಚನೆಯಲ್ಲಿ ಬಿಜ್ಜಳನು ಸತ್ಯಧರ್ಮಗಳನ್ನು ಕಡೆಗಣಿಸಿ, ನಿರಂಕುಶ ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾನೆ. ಚಾಲುಕ್ಯ ಧರ್ಮಾಧಿಕರಣ ಅಧರ್ಮ ಅತ್ಯಾಚಾರಗಳ ನೆಲೆವೀಡಾಗುತ್ತಿದೆ. ಈ ದುಷ್ಟ ಪ್ರವೃತ್ತಿಯನ್ನು ಪ್ರತಿಭಟಿಸುವುದು ನಮ್ಮ ಮೊದಲ ಕರ್ತವ್ಯ. ಶರಣರು ಸೆರೆಮನೆಯಲ್ಲಿರಲಿ, ಹೊರಗಿರಲಿ, ಈ ಅನ್ಯಾಯದ ವ್ಯವಹಾರದಲ್ಲಿ ಧರ್ಮಾಧಿಕರಣದೊಡನೆ ಸಹಕರಿಸಲು ನಿರಾಕರಿಸಬೇಕು. ನ್ಯಾಯಪೀಠದ ವಿಚಾರದಲ್ಲಿ ನಮ್ಮ ಆಕ್ಷೇಪಣೆಗಳೇನೆಂಬುದನ್ನು ಚೆನ್ನಬಸವಣ್ಣನವರು ಆಗಲೇ ಬಿಜ್ಜಳರಾಯರಿಗೆ ತಿಳಿಸಿದ್ದಾರೆ. ಮುಂದಿನ ಕಾರ್ಯವಿಧಾನವನ್ನು ಅದಕ್ಕೆ ಅನುಗುಣವಾಗಿ ರೂಪಿಸಬೇಕು.”

“ನಾಳೆ ಪುನಃ ನ್ಯಾಯಪೀಠದ ವಿಚಾರಣೆ ಪ್ರಾರಂಭವಾಗುತ್ತದೆ. ಆಪಾದಿತರು ಹೇಳಿಕೆ ಕೊಡಬೇಕಾಗುತ್ತದೆ. ಈ ವಿಚಾರದಲ್ಲಿ ನಿಮ್ಮ ಸಲಹೆಯೇನು?” -ಎಂದು ಪ್ರಶ್ನಿಸಿದರು ಚೆನ್ನಬಸವಣ್ಣನವರು.

“ವರ್ಣಸಂಕರದ ಅಪರಾಧ ನಮ್ಮಿಂದ ನಡೆದಿಲ್ಲ. ಧರ್ಮಾಧಿಕರಣದ ಮೂಲತತ್ವಗಳಿಗೆ ವಿರುದ್ಧವಾಗಿ ರಚಿತವಾದ ನ್ಯಾಯಪೀಠದೊಡನೆ ನಾವು ಸಹಕರಿಸುವುದಿಲ್ಲ ಎಂದು ಮೂವರೂ ಒಂದೇ ರೀತಿಯ ಪ್ರತ್ಯೇಕ ಹೇಳಿಕೆಗಳನ್ನು ಕೊಟ್ಟರೆ ಸಾಕು,” -ಎಂದು ಮಾಚಿದೇವರು ಉತ್ತರ ಕೊಟ್ಟರು.

ಶರಣರೆಲ್ಲ ಅದಕ್ಕೊಪ್ಪಿದರು.

ಮರುದಿನ ನ್ಯಾಯಪೀಠ ಕೂಡಿದಾಗ ಆಪಾದಿತರು ಒಂದೇ ರೀತಿಯ ಮೂರು ಪ್ರತ್ಯೇಕ ಹೇಳಿಕೆಗಳನ್ನು ಕೊಟ್ಟು ನ್ಯಾಯಪೀಠದೊಡನೆ ಸಹಕರಿಸಲು ನಿರಾಕರಿಸಿದಾಗ ಕ್ರಮಿತನು ಗೊಂದಲದಲ್ಲಿ ಬಿದ್ದನು. ಆಪಾದಿತರನ್ನು ಕಳುಹಿಸಿ, ಸಹೋದ್ಯೋಗಿಗಳ ಕಡೆ ತಿರುಗಿ ಅವನು,

“ನಾವು ಮೂವರನ್ನೂ ಪ್ರತ್ಯೇಕ ಬಂಧನದಲ್ಲಿಟ್ಟಿದ್ದೇವೆ. ಒಬ್ಬರನ್ನೊಬ್ಬರು ನೋಡುವ ಅವಕಾಶವೂ ಇರುವುದಿಲ್ಲ. ಆದರೂ ಮೂವರ ಹೇಳಿಕೆಗಳು ಒಂದೇ ಆಗಿರುವುದು ಆಶ್ಚರ್ಯ,” ಎಂದನು.