ಪುಟ:ಕ್ರಾಂತಿ ಕಲ್ಯಾಣ.pdf/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೫೭


ರುದ್ರಭಟ್ಟನು ಮೌನ.

“ಶರಣರು ಪ್ರತ್ಯೇಕವಾಗಿ ಬಂಧಿಸಲ್ಪಟ್ಟಿದ್ದರೂ ಅವರ ರೀತಿ ನೀತಿ ಕಾರ್ಯ ವಿಧಾನ ಒಂದೇ ಅಲ್ಲವೆ? ಅದರಂತೆ ಹೇಳಿಕೆ ಒಂದೇ ಆಗಿರುವುದರಲ್ಲಿ ಆಶ್ಚರ್ಯವೇನಿದೆ? ಈ ಪರಿಸ್ಥಿತಿಯಲ್ಲಿ ಮುಂದೇನು ಮಾಡಬೇಕೆಂಬುದನ್ನು ನಿರ್ಧರಿಸಿಕೊಳ್ಳಬೇಕು,” ಎಂದನು ಮಂಚಣ.

ಕ್ರಮಿತನು ತುಸುಹೊತ್ತು ಯೋಚಿಸಿ, “ಆಪಾದಿತರ ಹೇಳಿಕೆಯ ವಿಚಾರದಲ್ಲಿ ಪಭುಗಳ ಪ್ರತಿಕ್ರಿಯೆ ಏನೆಂಬುದನ್ನು ನಾವು ಮೊದಲು ತಿಳಿಯಬೇಕು. ಆಮೇಲೆ ಮುಂದಿನ ಕಾರ್ಯ,” ಎಂದು ಹೇಳಿದನು.

ನ್ಯಾಯಪೀಠದ ಅಂದಿನ ಅಧಿವೇಶನ ಸಂದಿಗ್ಧದಲ್ಲಿ ಮುಗಿಯಿತು. ಬಂಧಿತರೊಡನೆ ಹೊರಗಿನವರ ಸಂಬಂಧವಿಲ್ಲದಂತೆ ಎಚ್ಚರದಿಂದ ನೋಡಿಕೊಳ್ಳಬೇಕೆಂದು ಸೆರೆಮನೆಯ ಅಧಿಕಾರಿಗಳಿಗೆ ಎಚ್ಚರಿಕೆ ಕೊಡಲು ಕ್ರಮಿತನು ಮರೆಯಲಿಲ್ಲ.

ಮರುದಿನ ಸಂಜೆ ಮಂಚಣನು ಸ್ನಾನ ಮುಗಿಸಿ ವಾಸಗೃಹದಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದಾಗ ಕ್ರಮಿತನು ಅಲ್ಲಿಗೆ ಬಂದು, ವಂದನೆ ಪ್ರತಿವಂದನೆಗಳು ಮುಗಿದ ಮೇಲೆ ಆಸನದಲ್ಲಿ ಕುಳಿತು, ಧರ್ಮಾಧಿಕರಣದ ಆಜ್ಞಾಪತ್ರವೊಂದನ್ನು ಮುಂದಿಟ್ಟು “ಇದಕ್ಕೆ ನಿಮ್ಮ ಒಪ್ಪಿಗೆಯ ಹಸ್ತಾಕ್ಷರ ಬೇಕಾಗಿದೆ,” ಎಂದನು.

“ಇಷ್ಟಕ್ಕಾಗಿ ನೀವೇಕೆ ಬರಬೇಕಾಗಿತ್ತು? ಕರಣಿಕನನ್ನು ಕಳುಹಿಸಿದ್ದರೆ ಒಪ್ಪಿಗೆ ಹಾಕುತ್ತಿದ್ದೆ,” ಎನ್ನುತ್ತ ಮಂಚಣನು ದೀಪದ ಬೆಳಕಿನಲ್ಲಿ ಪತ್ರವನ್ನು ಓದಿದನು. ಆಶ್ಚರ್ಯ ಭೀಭತ್ಸಗಳಿಂದ ಅವನ ಮುಖ ಬಿಳುಪೇರಿತು. ಕೈಗಳು ನಡುಗಿ ಆಜ್ಞಾಪತ್ರ ಕೆಳಗೆ ಬಿತ್ತು.

ಕ್ರಮಿತನು ಬಾಗಿ ಪತ್ರವನ್ನು ತೆಗೆದುಕೊಂಡು ಪೀಠದ ಮೇಲಿಟ್ಟು, “ಏಕೆ ಮಂಚಣನವರೆ ? ಸ್ವಸ್ಥವಿಲ್ಲವೆ?” ಎಂದನು.

ಅನೇಕ ಕ್ಷಣಗಳು ಮಂಚಣ ಉತ್ತರ ಕೊಡಲಿಲ್ಲ. ಆಮೇಲೆ ಕಂಪಿಸುವ ಕಂಠದಿಂದ, “ಇದೇನು ಉಪಹಾಸವೆ, ಕ್ರಮಿತರೆ? ಅಥವಾ ಈ ಅನ್ಯಾಯದ ಭೀಕರ ದಂಡಾಜ್ಞೆಗೆ ನನ್ನ ಒಪ್ಪಿಗೆ ಪಡೆಯಲು ಪ್ರಭುಗಳು ನಿಮ್ಮನ್ನು ಕಳುಹಿಸಿದರೆ?” ಎಂದನು.

“ಆಪಾದಿತರು ನ್ಯಾಯಪೀಠದ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಹಕರಿಸಲು ನಿರಾಕರಿಸಿದರೆಂದು ಕೇಳಿದಾಗ ಪ್ರಭುಗಳು ರೌದ್ರಾವತಾರವಾದರು. ಅವರನ್ನು ಸಮಾಧಾನಪಡಿಸುವುದು ಕಷ್ಟವಾಯಿತು. ಕೊನೆಗೆ ಅವರೇ ಕರಣಿಕನಿಂದ ಈ