ಪುಟ:ಕ್ರಾಂತಿ ಕಲ್ಯಾಣ.pdf/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೬೨

ಕ್ರಾಂತಿ ಕಲ್ಯಾಣ

ಕರ್ತವ್ಯವಾಗಿದೆ. ಪ್ರಸ್ತುತ ಬಂಧನದಲ್ಲಿರುವ ಮಧುವರಸ ಹರಳಯ್ಯ ಶೀಲವಂತರಿಗೆ ವರ್ಣಸಂಕರದ ಅಪರಾಧಕ್ಕಾಗಿ ಮರಣದಂಡನೆ ವಿಧಿಸಲು ಸರ್ವಾಧಿಕಾರಿ ಬಿಜ್ಜಳರಾಯರು ನಿರ್ಧರಿಸಿದ್ದಾರೆ. ಈ ಸಂಬಂಧವಾದ ದಂಡಾಜ್ಞೆಗೆ ನ್ಯಾಯಪೀಠದ ಅನುಮೋದನೆ ಪಡೆಯಲು ಈ ಸಂಜೆ ನಾರಣ ಕ್ರಮಿತರು ನನ್ನ ಬಳಿಗೆ ಬಂದಿದ್ದರು. ನಾನು ಒಪ್ಪಿಗೆ ಕೊಡಲು ನಿರಾಕರಿಸಿದಾಗ, ನೀವು ಗುಪ್ತಶರಣರೆಂಬುದನ್ನು ಬಯಲುಮಾಡುತ್ತೇನೆ,” ಎಂದು ಬೆದರಿಕೆ ಹಾಕಿದರು. ಶರಣರ ಮೇಲೆ ನಿರಂತರ ದಬ್ಬಾಳಿಕೆ, ಶರಣಧರ್ಮದ ವಿಧ್ವಂಸ, ಇವು ಮುಂದೆ ಬಿಜ್ಜಳರಾಯರ ಆಡಳಿತ ಸೂತ್ರಗಳಾಗುತ್ತವೆ. ಈ ವಿಷಮ ಸನ್ನಿವೇಶದಲ್ಲಿ ಶರಣರ ರಕ್ಷಣೆಗಾಗಿ ನೀವು ನಿಮ್ಮ ಶಕ್ತಿ ಸಾಮರ್ಥ್ಯಗಳೆಲ್ಲವನ್ನೂ ಉಪಯೋಗಿಸಬೇಕಾಗುವುದು. ಈ ವಿಚಾರವನ್ನು ಅನುಭವಮಂಟಪದ ಪ್ರಮುಖ ಶರಣರಿಗೆ ರಹಸ್ಯವಾಗಿ ತಿಳಿಸಿ ಬಂಧನದಲ್ಲಿರುವವರ ಬಿಡುಗಡೆಗಾಗಿ ಪ್ರಯತ್ನಿಸಬೇಕೆಂದು ನನ್ನ ಸಲಹೆ.

ಇತಿ, ಮಂಚಣ.”

ಸಭೆ ಮುಗಿದು ಶರಣರೆಲ್ಲ ಹೊರಗೆ ಹೋದಮೇಲೆ ಮಾಚಿದೇವರು ಸಕಲೇಶ ಮಾದರಸ, ಚೆನ್ನಬಸವಣ್ಣನವರಿಗೆ ಪತ್ರದ ವಿಚಾರ ತಿಳಿಸಿದರು.

ಪತ್ರವನ್ನು ಓದಿದಾಗ ಚೆನ್ನಬಸವಣ್ಣನವರ ಮುಖ ವಿವರ್ಣವಾಯಿತು. ಕಾತರದಿಂದ ಅವರು, “ಬಂಧಿಗಳನ್ನು ಉಳಿಸಲು ನಾವು ಎಲ್ಲ ಪ್ರಯತ್ನಗಳನ್ನೂ ಮಾಡಬೇಕು,” ಎಂದರು.

“ಅದು ಅಷ್ಟು ಸುಲಭವಾದ ಕಾರ್ಯವಲ್ಲ. ಮಂಗಳವೇಡೆಗೆ ಹೋಗಿದ್ದ ಬಿಜ್ಜಳನ ದೊಡ್ಡ ಸೈನ್ಯ ಕರ್ಣದೇವನ ಅಧೀನದಲ್ಲಿ ನಾಳೆ ಕಲ್ಯಾಣಕ್ಕೆ ಹಿಂದಿರುಗುತ್ತದೆ. ಮಂಚಣನವರೇ ಹೇಳಿರುವಂತೆ ಶರಣರ ನಾಶ ಬಿಜ್ಜಳನ ಉದ್ದೇಶವಾದರೆ, ನಗರ ಸೈನ್ಯಶಿಬಿರವಾಗುತ್ತದೆ. ದಂಡಾಜ್ಞೆಯನ್ನು ನಾವು ಪ್ರತಿಭಟಿಸುವೆವೆಂಬ ಸಂದೇಹ ಹುಟ್ಟಿದರೂ ಬಂಧಿಗಳ ರಹಸ್ಯವಧೆಗೆ ಬಿಜ್ಜಳನು ಆಜ್ಞೆಮಾಡಬಹುದು. ಈ ಸಂದರ್ಭದಲ್ಲಿ ನಾವು ಬಹಳ ಎಚ್ಚರದಿಂದ ವರ್ತಿಸಬೇಕು.”

-ಮಾಚಿದೇವರು ಯೋಚಿಸಿ ಹೇಳಿದರು.
“ಹಾಗಾದರೆ ನಿಮ್ಮ ಸಲಹೆಯೇನು?” ಎಂದರು ಸಕಲೇಶ ಮಾದರಸರು.

"ಚಾಲುಕ್ಯರಾಜ್ಯದ ಶೈವಮಠಗಳಿಗೆ, ಶರಣಧರ್ಮದ ಪ್ರೋತ್ಸಾಹಕರಾದ ಸಾಮಂತರಿಗೆ, ಇಂದೇ ರಹಸ್ಯವಾಗಿ ಸುದ್ಧಿ ಕಳುಹಿಸುತ್ತೇನೆ. ಅವರಿಂದ ಸಹಾಯ ಬರಲು ಒಂದೆರಡು ವಾರಗಳಾದರೂ ಆಗಬಹುದು. ಈ ಅವಧಿಯಲ್ಲಿ ನಾವು ಬಂಧಿಗಳ ಪರವಾಗಿ ಕ್ಷಮಾಯಾಚನೆಯ ಮನವಿಯೊಂದನ್ನು ಸಿದ್ಧಗೊಳಿಸಿ,