ಪುಟ:ಕ್ರಾಂತಿ ಕಲ್ಯಾಣ.pdf/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೬೫

ತುಸು ಹೊತ್ತಿನ ಮೇಲೆ ಮಾಚಿದೇವರು ಮೃದುವಾಗಿ ನಕ್ಕು, ಆದರಾಭಿಮಾನಗಳ ತುಂಬು ಕಂಠದಿಂದ,

"ನೀವು ನಿಜವಾಗಿ ಕಾರಣಪುರುಷರು, ಚೆನ್ನಬಸವಣ್ಣನವರೆ. ಅದರಿಂದಲೇ ಈ ತರುಣ ವಯಸ್ಸಿನಲ್ಲಿ ಆದರ್ಶಸಾಧನೆಗೆ ಅಗತ್ಯವಾದ ತ್ಯಾಗ ವೈರಾಗ್ಯಗಳೂ ನಿಮಗೆ ಲಭಿಸಿವೆ. ಮಧುವರಸರು ನ್ಯಾಯಪೀಠದ ಮುಂದೆ ಕೊಟ್ಟ ಹೇಳಿಕೆಯನ್ನು, 'ಭಕ್ತಿ ಪ್ರಧಾನವಾದ ಶೈವಧರ್ಮದಲ್ಲಿ ವೀರತ್ವವನ್ನು ಮೂಡಿಸಲು ಶರಣರು ಪಣ ತೊಡಬೇಕಾಗುವುದು' ಎಂದು ಮುಗಿಸಿದರಂತೆ. ನಾನು ಆ ಆದರ್ಶದಂತೆ ನಡೆದು ಶರಣರ ರಕ್ಷಣೆಗೆ ಪ್ರಯತ್ನಿಸುತ್ತೇನೆ. ಜ್ಞಾನವೃದ್ಧರಾದ ನೀವು ನಿಮಗೆ ಉಚಿತವಾದ ಆದರ್ಶ ಪಥದಲ್ಲಿ ನಡೆದು ಶರಣಧರ್ಮದ ಉದ್ಧಾರ ಮಾಡಿರಿ. ನಿಮ್ಮನ್ನೂ ನಿಮ್ಮ ಸಂಗಡ ಕಲ್ಯಾಣವನ್ನು ಬಿಡುವ ಅನುಭಾವೀಶರಣರನ್ನೂ ಸಹ್ಯಾದ್ರಿ ಮಧ್ಯದ ಉಳಿವೆಯ ಮಹಾಮನೆಗೆ ಸುರಕ್ಷಿತವಾಗಿ ಕಳುಹಿಸಲು ನಾನು ನೆರವಾಗುತ್ತೇನೆ.” ಎಂದು ಹೇಳಿದರು.

ಆಮೇಲೆ ಅವರು ಬಂಧಿಗಳ ಪರವಾಗಿ ಬಿಜ್ಜಳನಿಗೆ ಸಲ್ಲಿಸಬೇಕಾದ ಮನವಿ ಪತ್ರದ ರಚನೆ, ಸಾಮಂತರಿಗೆ ಕಳುಹಿಸುವ ರಹಸ್ಯ ಪತ್ರ ಇವುಗಳ ವಿವರಗಳನ್ನು ಪರ್ಯಾಲೋಚಿಸುತ್ತಿದ್ದಂತೆ, ನಗರದಿಂದ ಭಕ್ತ ಬಣಜಿಗನೊಬ್ಬನು ಸಂದರ್ಶನಕ್ಕೆ ಬಂದಿರುವುದಾಗಿ ವಟು ತಿಳಿಸಿದನು.

"ನಗರದ ಸುದ್ದಿ ಕೇಳಿದ್ರ ಅಣ್ಣಾ ಅವ್ರ?” -ಎನ್ನುತ್ತ ಬಣಜಿಗ ಒಳಗೆ ಬಂದನು.

"ಏನಾಯಿತು ಶೆಟ್ಟರೆ?” -ಮಾಚಿದೇವರು ಕುತೂಹಲದಿಂದ ಪ್ರಶ್ನಿಸಿದರು.

"ಮಂಚಣ ಮಂತ್ರಿಗಳ ಮನೀಮುಂದ ಭರಪೂರಾ ಜನಾ ಸೇರಾರ್ರಿ. ರಾಜ ಪುರೋಹಿತ ಕ್ರಮಿತರು ಭಟರನ್ನೂ ಕರಸಾರ."

"ಭಟರು ಮಂಚಣನವರನ್ನು ಸೆರೆಹಿಡಿದರೆ?"
"ಸೆರೀ ಹಿಡಿಯೋ ಹಾಂಗಿಲ್ಲ. ಈಗವ್ರು ಅಂತಸ್ಥ!"
"ಅಂದರೆ? ಅರ್ಥವಾಗುವ ಹಾಗೆ ಹೇಳಿರಿ, ಶೆಟ್ಟರೆ?"

"ಹೇಳತೇನ್ರಿ ಅಣ್ಣಾವ್ರ, ಇಂದು ಮುಂಜಾವಿನಾಗ ಊಳಿಗದೋರು ಮಂಚಣನವರ ಮನೆಗೆ ಹೋದಾಗ ಬಾಗಿಲು ಮುಚ್ಚಿತ್ತಂತ್ರಿ. ಎಷ್ಟು ಕೂಗಿದ್ರೂ ತೆಗೀಲಿಲ್ಲ. ನೆರೆಹೊರೆಯೋರು ಸೇರಿ ಗೊಂದಲ ಹಚ್ಚಿದರೂ ತೆಗೀಲಿಲ್ಲ. ಅಷ್ಟರಲ್ಲಿ ರಾಜಪುರೋಹಿತರ ರಥಾ ಅಲ್ಲೀಗೆ ಬಂತ್ರಿ ಅವರು ಅಲ್ಲಿನ ವಿಚಾರಗಳ್ನ ತಿಳ್ದು, ಭಟರನ್ನ ಕರೆಸಿ ಬಾಗಿಲಾ ಹೊಡಿಸಾರಂತ. ಆಗ ತಿಳೀತ್ರಿ...."