ಪುಟ:ಕ್ರಾಂತಿ ಕಲ್ಯಾಣ.pdf/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೬

ಕ್ರಾಂತಿ ಕಲ್ಯಾಣ

"ಏನು ತಿಳಿದದ್ದು?"
"ಮಂಚಣ್ಣಾವ್ರು, ಅವರ ಕುಟುಂಬ, ಒಟ್ಟಿಗೇ ಪ್ರಾಣಬಿಟ್ಟಿದ್ರು.":ಮಾಚಿದೇವರು ಸ್ತಂಭಿತರಾಗಿ ಚೆನ್ನಬಸವಣ್ಣನವರ ಮುಖ ನೋಡಿದರು.

ಬಣಜಿಗ ಮುಂದುವರಿದು, "ಪೂಜೆಗೆ ಕುಂತಹಾಂಗಾ ಪ್ರಾಣಬಿಟ್ಟಾರ್ರಿ ಮಂಚಣ್ಣಾವ್ರು. ಅವ್ರ ಕೈಲಿದ್ದ ಲಿಂಗದೇವರನ್ನು ಕಂಡಾಗ ಕ್ರಮಿತರಿಗೆ ತಿಳೀತು, ಮಂಚಣನವ್ರು ಶಿವಭಕ್ತರಂತ. ಸದಾಚಾರಿ ಮಠದ ಭಕ್ತರನ್ನ ಕರೆಸಿ ಗಂಡ ಹೆಂಡಿರ ಸಂಸ್ಕಾರಕ್ಕೆ ಏರ್ಪಡಿಸಾರ," ಎಂದು ಮುಗಿಸಿದನು.

"ಶರಣರೆಂದು ತಿಳಿದಮೇಲೆ ಸಂಸ್ಕಾರವನ್ನು ಶರಣರಿಗೊಪ್ಪಿಸುವ ಮಾನವೀಯತೆ ಇನ್ನೂ ಉಳಿದಿದೆ ಕ್ರಮಿತರಲ್ಲಿ!" -ಎಂದು ಉದ್ಗಾರ ತೆಗೆದರು ಸಕಲೇಶ ಮಾದರಸರು.

ಹಿಂದಿನ ರಾತ್ರಿ ಊಳಿಗದವರನ್ನು ಮನೆಗೆ ಕಳುಹಿಸಿ ಮಂಚಣ, ಅವರ ಪತ್ನಿ, ಇಬ್ಬರೇ ಮನೆಯಲ್ಲಿದ್ದರೆಂದೂ, ಕಾರ್ಯಕರ್ತ ಕಾಣೆಯಾಗಿರುವನೆಂದೂ ಬಣಜಿಗನಿಂದ ತಿಳಿಯಿತು. ಮನೆಯ ಒಡವೆ ವಸ್ತುಗಳೂ ಯಥಾಸ್ಥಿತಿಯಲ್ಲಿದ್ದವು. ವೃದ್ಧ ದಂಪತಿಗಳು ವಾರ್ಧಿಕ್ಯದ ದುರ್ಬಲತೆಯಿಂದ ಪ್ರಾಣಬಿಟ್ಟಿರಬೇಕೆಂದು ಜನರು ತಿಳಿದಿದ್ದಾರೆ. ಅಸೂಯಾಪರರಾದ ಕೆಲವರು ಆತ್ಮಹತ್ಯೆಯೆಂದು ಸಂದೇಹಿಸಿದರು.

ಬಣಜಿಗನು ಹೋದಮೇಲೆ ಚೆನ್ನಬಸವಣ್ಣನವರು, "ಪರೋಕ್ಷ ವಿನಯಕ್ಕಾಗಿ ನಾವು ಅಲ್ಲಿಗೆ ಹೋಗಿಬರಬೇಕು," ಎಂದರು.

"ನಾನು ಆ ಕಾರ್ಯ ಮಾಡುತ್ತೇನೆ. ನಿಮ್ಮನ್ನಲ್ಲಿ ನೋಡಿದರೆ ಕ್ರಮಿತರಿಗೆ ಸಂದೇಹ ಹುಟ್ಟಬಹುದು. ಮಂಚಣ ಶರಣನೆಂಬುದು ನಿಮಗೆ ತಿಳಿದಿತ್ತೆಂದು ಭಾವಿಸಬಹುದು." -ಎಂದು ಮಾಚಿದೇವರು ತಡೆದರು.

"ಮಂಚಣನವರು ಗುಪ್ತಶರಣರೆಂದು ನಿಮಗೆ ಮೊದಲೇ ತಿಳಿದದ್ದು ಹೇಗೆ?"

-ತುಸು ಹೊತ್ತಿನಮೇಲೆ ಚೆನ್ನಬಸವಣ್ಣನವರು ಕೇಳಿದರು.

"ನನ್ನ ಗುರುಗಳಾದ ಹಿಪ್ಪರಿಗೆಯ ಮಲ್ಲಿಕಾರ್ಜುನದೇವರೇ ಮಂಚಣನವರ ದೀಕ್ಷಾಗುರುಗಳಾಗಿದ್ದರು. ಆಗ ಮಂಚಣ ಹೇಳಿದ್ದರು, 'ರಾಜಕೀಯ ಕಾರಣಗಳಿಗಾಗಿ ನಾನು ಗುಪ್ತನಾಗಿದ್ದೇ ಶರಣರ ಸೇವೆ ಮಾಡುತ್ತೇನೆ. ರಹಸ್ಯ ಬಯಲಾದ ಮೇಲೆ ಒಂದು ಗಳಿಗೆಯೂ ಉಳಿಯುವುದಿಲ್ಲ' ಎಂದು. ನುಡಿದಂತೆ ನಡೆದುಕೊಂಡಿದ್ದಾರೆ," -ಎಂದು ಮಾಚಿದೇವರು ಉತ್ತರ ಕೊಟ್ಟರು.