ಪುಟ:ಕ್ರಾಂತಿ ಕಲ್ಯಾಣ.pdf/೨೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೮

ಕ್ರಾಂತಿ ಕಲ್ಯಾಣ

ಸೂಚಿಸಿದಿರಲ್ಲವೆ? ನೀವು ಒಪ್ಪುವುದಾದರೆ ವರ್ಣಸಂಕರದ ಅಪರಾಧಕ್ಕೆ ಮರಣ ದಂಡನೆಯನ್ನು ಒತ್ತಾಯಪಡಿಸುವ ವೈದಿಕ ನಿಯೋಗವೊಂದನ್ನು ನಿಮ್ಮ ಮುಂದೆ ತಂದು ನಿಲ್ಲಿಸುತ್ತೇನೆ," ಎಂದನು.

"ಈ ಮಕ್ಕಳಾಟದಲ್ಲಿ ದಿನಗಳನ್ನು ಕಳೆಯುವುದು ನಮಗಿಷ್ಟವಿಲ್ಲ, ರಾಜ ಪುರೋಹಿತರೆ. ನಮ್ಮ ಮಹಾಸೈನ್ಯ ಕಲ್ಯಾಣದಿಂದ ಒಂದು ಹರಿದಾರಿ ದೂರದಲ್ಲಿದೆ. ಇಂದು ಸಂಜೆ ಅದು ನಗರವನ್ನು ಪ್ರವೇಶಿಸುವುದು. ನಾಳಿನ ಪ್ರಾತಃಕಾಲ ನಮ್ಮ ದಡಾಜ್ಞೆ ಪ್ರಚಾರವಾಗಲಿ.ದಂಡಾಜ್ಞೆಯನ್ನು ವಿರೋಧಿಸುವವರು ನಮ್ಮಉಗ್ರಕೋಪಕ್ಕೆ ಪಾತ್ರರಾಗುವರು." -ಬಿಜ್ಜಳನು ಗಂಭೀರವಾಗಿ ನುಡಿದನು.

"ಇದೀಗ ಭುಜಬಲ ಚಕ್ರವರ್ತಿ, ಶನಿವಾರಸಿದ್ಧಿ, ಸರ್ವಾಧಿಕಾರಿಯ ನಿರ್ಧಾರ," -ಎಂದು ಹೇಳಿ ಕ್ರಮಿತನು ಜಯಘೋಷ ಮಾಡಿದನು. ಪ್ರಶಂಸೆಯ ನುಡಿಗಳು ಬಿಜ್ಜಳನಿಗೆ ಮಧುರಸದಷ್ಟೇ ಪ್ರಿಯವೆಂದು ಅವನಿಗೆ ತಿಳಿದಿತ್ತು.

ನಿರೀಕ್ಷಿಸಿದ್ದಂತೆ ಬಿಜ್ಜಳನ ದೊಡ್ಡ ಸೈನ್ಯ, ಆ ದಿನ ಸಂಜೆ, ಕರ್ಣದೇವನ ಅಧೀನದಲ್ಲಿ ಕಲ್ಯಾಣಕ್ಕೆ ಬಂದಿತು. ಮರಣದಂಡನೆಯ ಆಜ್ಞೆಗಳು ಮರುದಿನ ನಗರದಲ್ಲಿ ಪ್ರಚಾರವಾದವು. ಮಧುವರಸ ಹರಳಯ್ಯಗಳನ್ನು ಕುರಿತ ಮೊದಲ ದಂಡಾಜ್ಞೆಯಲ್ಲಿ ವಿಶೇಷವೇನೂ ಇರಲಿಲ್ಲ. ವರ್ಣಸಂಕರದ ಅಪರಾಧಕ್ಕಾಗಿ ಅವರನ್ನು ಶೂಲಕ್ಕೇರಿಸಲು ಬಿಜ್ಜಳನು ಆಜ್ಞೆ ಮಾಡಿದ್ದನು.

ಶೀಲವಂತನನ್ನು ಕುರಿತ ಎರಡನೆಯ ದಂಡಾಜ್ಞೆ ನಾಗರಿಕರನ್ನು ಅಚ್ಚರಿಗೊಳಿಸಿತು. ಅದರ ವಿಚಿತ್ರ ಒಕ್ಕಣೆ ಚಾಲುಕ್ಯ ಧರ್ಮಾಧಿಕರಣಕ್ಕೆ ಹೊಸದಾಗಿತ್ತು.

"ಶೀಲವಂತನು ಮಂತ್ರವಾದಿ. ತನ್ನ ರೂಪ ಯೌವನ ಅಭಿಜ್ಞತೆಗಳಿಂದ ಅವನು ಚಾಲುಕ್ಯರಾಣಿ ಕಾಮೇಶ್ವರಿ, ಕದಂಬರಾಜಕನ್ಯೆ ಕುಸುಮಾವಳಿ, ಇವರೇ ಮೊದಲಾಗಿ ಬಹುಮಂದಿ ಉತ್ತಮಕುಲದ ಹೆಂಗಸರನ್ನು ಮರುಳುಮಾಡಿ ಅವರ ಕುಲಶೀಲಗಳನ್ನು ಕೆಡಿಸಿದನೆಂದು ಸಂದೇಹಕ್ಕೆಡೆಯಿಲ್ಲದ ಸಾಕ್ಷ್ಯಾಧಾರಗಳಿಂದ ನಮಗೆ ತಿಳಿದುಬಂದಿದೆ. ಶೀಲವಂತನ ಮಾಯಾಜಾಲಕ್ಕೆ ಸಿಕ್ಕು ಭ್ರಷ್ಠರಾದ ಕುಲೀಣ ತರುಣಿಯರಲ್ಲಿ ಲಾವಣ್ಯವತಿಯೊಬ್ಬಳು. ಮಗಳ ಶೀಲಹರಣದ ಬಗ್ಗೆ ತಿಳಿದ ಮಧುವರಸನು ಬೇರೆಮಾರ್ಗವಿಲ್ಲದೆ ಮಗಳನ್ನು ಶೀಲವಂತನಿಗೆ ಮದುವೆ ಮಾಡಿಕೊಟ್ಟನು. ಮಧುವರಸ ಹರಳಯ್ಯಗಳ ವರ್ಣಸಂಕರ ಕೃತ್ಯಕ್ಕೆ ಮೂಲಕಾರಣನಾದ ಶೀಲವಂತನು ಮೊದಲ ದರ್ಜೆಯ ಸಮಾಜಘಾತಕನೆಂದು ಪರಿಗಣಿಸಿ ಅವನ ಶಿರಶ್ಛೇದನೆಗೆ ಆಜ್ಞೆಮಾಡಿದೆ. ಅವನ ದೇಹವನ್ನು ಸಂಸ್ಕಾರಕ್ಕೆ ಕೊಡದೆ, ತುಂಡು ತುಂಡಾಗಿ ಕತ್ತರಿಸಿ ನಾಯಿನರಿಗಳಿಗೆ ಹಾಕತಕ್ಕದ್ದು. ಅವನ