ಪುಟ:ಕ್ರಾಂತಿ ಕಲ್ಯಾಣ.pdf/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೬೯

ತಲೆಯನ್ನು ಕಬ್ಬಿಣದ ಪಂಜರದಲ್ಲಿಟ್ಟು ಕಲ್ಯಾಣಮಹಾನಗರದ ದಕ್ಷಿಣಮಹಾದ್ವಾರದಲ್ಲಿ ತೂಗುಹಾಕತಕ್ಕದ್ದು," ಎಂದು ದಂಡಾಜ್ಞೆ ಕೊನೆಗೊಂಡಿತ್ತು.

ಧರ್ಮಾಧಿಕರಣದ ಮೊಗಶಾಲೆಯಲ್ಲಿ ನಿಂತು, ನೆರೆದಿದ್ದ ನಾಗರಿಕರ ಸಮಕ್ಷಮ ದಂಡಾಜ್ಞೆಯನ್ನು ಪಠಿಸಿದ ಕರಣಿಕನು ಮೇಲೆ ಉಲ್ಲೇಖಿಸಿದ ಕೊನೆಯ ಭಾಗವನ್ನು ಸಂಕೋಚದಿಂದ ದನಿ ತಗ್ಗಿಸಿ ಓದಿದನಾದರೂ, ಕುತೂಹಲದಿಂದ ಕೂಡಿದ ಜನ ಸಮೂಹ ಸ್ತಂಭಿತವಾಗಿ ಸದ್ದಿಲ್ಲದೆ ನಿಂತಿದ್ದುದರಿಂದ ಪ್ರತಿಯೊಂದು ಮಾತೂ ಸ್ಪಷ್ಟವಾಗಿ ಕೇಳಿಸಿತು. ಚಾವಡಿಯ ಸುತ್ತ ಸೈನಿಕರು ಕಾವಲಿದ್ದುದರಿಂದ ಗುಂಪು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸದೆ ಮೌನವಾಗಿ ಚದುರಿತು.

ಆ ದಿನ ಸಂಜೆ ಬಿಜ್ಜಳನು ಸೈನ್ಯಾಧಿಕಾರಿ ನಾಯಕರ ರಹಸ್ಯ ಸಭೆ ಕರೆದು, ದಕ್ಷಿಣದಲ್ಲಿ ವಿರೋಧಿ ಸಾಮಂತರ ಚಟುವಟಿಕೆಗಳಿಂದ ರಾಜ್ಯಕ್ಕೊದಗಿರುವ ವಿಪತ್ತು, ವರ್ಣಾಶ್ರಮ ಜಾತಿ ಪಂಥಗಳ ವಿನಾಶಕ್ಕಾಗಿ ಶರಣರು ನಡೆಸುತ್ತಿರುವ ಸಮಾಜ ಘಾತುಕ ಆಂದೋಳನ, ವರ್ಣಸಂಕರದ ಅಪರಾಧಕ್ಕಾಗಿ ವಿಚಾರಣೆ ನಡೆಸಿದ ನ್ಯಾಯ ಪೀಠ ಮಧುವರಸ ಹರಳಯ್ಯ ಶೀಲವಂತರ ಮೇಲೆ ವಿಧಿಸಿರುವ ಮರಣದಂಡನೆಯ ಆಜ್ಞೆ. ಈ ವಿಚಾರಗಳನ್ನು ಪ್ರಸ್ತಾಪಿಸಿ, "ಈ ಬಿಕ್ಕಟ್ಟಿನ ಸನ್ನಿವೇಶದಲ್ಲಿ ರಾಜ್ಯ ರಕ್ಷಣೆಗೆ ಸೈನ್ಯದ ಪಾತ್ರ ಅತ್ಯಂತ ಮುಖ್ಯವಾದುದಾಗಿದೆ. ನಿಮ್ಮ ರಾಜನಿಷ್ಠೆ ಶೌರ್ಯಸಾಹಸಗಳ ಪರೀಕ್ಷೆಯ ಕಾಲವಿದು. ಧರ್ಮದ ಹೆಸರಿನಲ್ಲಿ ಶರಣರು ನಡೆಸುತ್ತಿರುವ ಆಂದೋಳನವನ್ನು ಅಂಕುರದಲ್ಲಿಯೇ ನಾಶ ಮಾಡುವುದು ಅಗತ್ಯ. ಉಪೇಕ್ಷೆಯಿಂದ ಬೆಳೆಯಲು ಅವಕಾಶಕೊಟ್ಟರೆ ಮುಂದೆ ಅದು ಹೆಮ್ಮರವಾಗಿ, ರಾಜಕೀಯ ರೂಪ ತಳೆದು, ನಮ್ಮನ್ನೇ ಭಕ್ಷಿಸುವ ಸಂಭವವಿರುತ್ತದೆ. ಶರಣ ಧರ್ಮಕ್ಕೆ ಪ್ರೋತ್ಸಾಹ ಕೊಡುತ್ತಿರುವ ಮಠಮಂದಿರ ಸಂಸ್ಥೆಗಳನ್ನು ಶಾಸನಬಾಹಿರವೆಂದು ಘೋಷಿಸುವ ಅವಶ್ಯಕತೆ ಮುಂದೆ ಉದ್ಭವಿಸಬಹುದು. ಮೂವರು ಶರಣರ ಮೇಲೆ ನ್ಯಾಯಪೀಠ ವಿಧಿಸಿರುವ ಮರಣದಂಡನೆಯ ಆಜ್ಞೆಯನ್ನು ವಿರೋಧಿಸುವವರು ಯಾರೇ ಆಗಲಿ ಕೂಡಲೆ ಅವರನ್ನು ವಿಚಾರಣೆಯಿಲ್ಲದೆ ವಧಿಸಲು ನಿಮಗೆ ಅಧಿಕಾರ ಕೊಟ್ಟಿದ್ದೇನೆ," ಎಂದು ಹೇಳಿದನು.

ಬಿಜ್ಜಳನಲ್ಲಿ ರಾಜನಿಷ್ಠೆಯಿಂದ ನಡೆದುಕೊಳ್ಳುವುದಾಗಿ ಸೈನ್ಯಾಧಿಕಾರಿಗಳ ಪ್ರಮಾಣವಚನದೊಡನೆ ರಹಸ್ಯಸಭೆ ಮುಗಿಯಿತು. ಪ್ರತಿಯೊಬ್ಬ ಸಾಮಾನ್ಯ ಸೈನಿಕನಿಗೆ ಹತ್ತು ವರಹಗಳು, ಅಧಿಕಾರಿಗಳಿಗೆ ಅಂತಸ್ತಿಗೆ ತಕ್ಕಂತೆ ನೂರರಿಂದ ಐನೂರು ವರಹಗಳು, ಪಾರಿತೋಷಕ ಕೊಡುವಂತೆ ಆ ದಿನ ಬಿಜ್ಜಳನು ಆಜ್ಞೆ ಮಾಡಿದನು. ಸೈನಿಕರ ಸ್ವಾಮಿನಿಷ್ಠೆ ಶೌರ್ಯಸಾಹಸಗಳು, ಸ್ವರ್ಣಮುದ್ರೆಗಳ