ಪುಟ:ಕ್ರಾಂತಿ ಕಲ್ಯಾಣ.pdf/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೭೧

ತಪ್ಪು ಕಾಣಿಕೆ ಕೊಟ್ಟು ಒಪ್ಪಿಗೆಗಳನ್ನು ಹಿಂದಕ್ಕೆ ತೆಗೆದುಕೊಂಡರೆ ವ್ಯವಹಾರ ನಿಲ್ಲುವುದು," ಎಂದು ಸಲಹೆ ಮಾಡಿದನು. ನಾಗರಿಕರು ಒಪ್ಪಿ ಚೆನ್ನಬಸವಣ್ಣನವರ ಒತ್ತಾಯದಿಂದ ನಾವು ಮನವಿ ಪತ್ರಕ್ಕೆ ಒಪ್ಪಿಗೆ ಹಾಕಿದೆವು. ವರ್ಣಸಂಕರದ ಅಪರಾಧ ನಡೆದಿದೆಯೆಂದು ಈಗ ನಮಗೆ ಖಚಿತವಾಗಿ ತಿಳಿದಿರುವುದರಿಂದ ಒಪ್ಪಿಗೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ," ಎಂದು ಹೇಳಿಕೆ ಕೊಟ್ಟು ವಿಪತ್ತಿನಿಂದ ಪಾರಾದರು.

ಈ ವಿಚಾರ ಚೆನ್ನಬಸವಣ್ಣನವರಿಗೆ ತಿಳಿದಾಗ ಅವರ ಚಿಂತೆ ಇಮ್ಮಡಿಸಿತು. "ಬಂಧಿಗಳ ಬಿಡುಗಡೆಗೆ ಬೇರೆ ಮಾರ್ಗ ಹಿಡಿಯಬೇಕಾಗುವುದು," ಎಂದು ಮಾಚಿದೇವರು ಭಾವಿಸಿದರು.

ಇನ್ನೊಂದು ವಾರ ಕಳೆದು ಮರಣದಂಡನೆಯ ಆಜ್ಞೆ ಕಾರ್ಯಗತವಾಗಲು ಎರಡು ದಿನಗಳು ಮಾತ್ರವೇ ಉಳಿದಿದ್ದಾಗ, ಕಲಚೂರ್ಯ ಕುಲಗುರುಗಳಾದ ಮತ್ತ ಮಯೂರ ಮಠದ ಚಿದ್ಛನ ಶಿವಾಚಾರ್ಯ ಸ್ವಾಮಿಗಳ ಪರಿಚಯ ಪತ್ರದೊಡನೆ ಅವಧೂತ ಸನ್ಯಾಸಿಯೊಬ್ಬನು ಬಿಜ್ಜಳನ ಸಂದರ್ಶನಕ್ಕಾಗಿ ಬಂದನು.

"ಈ ಪತ್ರವನ್ನು ತರುವವರು ಚಾಲುಕ್ಯರಾಜ್ಯದ ಉನ್ನತ ಪ್ರಭಾವಶಾಲಿ ವ್ಯಕ್ತಿಗಳಲ್ಲೊಬ್ಬರು. ಒಂದು ಮಹತ್ವದ ಕಾರ್ಯಕ್ಕಾಗಿ ಅವರು ನಿಮ್ಮ ಬಳಿಗೆ ಬಂದಿದ್ದಾರೆ. ನೀವು ಅವರನ್ನು ಸನ್ಮಾನದಿಂದ ಕಂಡು ಅವರ ಇಚ್ಛೆಯನ್ನು ನಡೆಸಿ ಕೊಡಬೇಕಾಗಿ ನಮ್ಮ ಆಗ್ರಹದ ಕೋರಿಕೆ." -ಎಂದು ಪರಿಚಯಪತ್ರ ಮುಗಿದಿತ್ತು.

ಬಿಜ್ಜಳನು ಪತ್ರವನ್ನು ಓದಿಕೊಂಡು, "ರಾಜ್ಯಾಡಳಿತದಲ್ಲಿ ಗುರುಮನೆಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ವಿಕ್ರಮಾದಿತ್ಯ ಮಹಾರಾಜರು ಪ್ರಚಾರಕ್ಕೆ ತಂದ ದುಷ್ಟ ಸಂಪ್ರದಾಯ ಈಗ ನಮ್ಮ ತಲೆ ತಿನ್ನುತ್ತಿದೆ," ಎಂದು ಭಾವಿಸಿ, ಪತ್ರವನ್ನು ತಂದ ಪಸಾಯಿತನ ಕಡೆ ತಿರುಗಿ, "ಈಗ ಸನ್ಯಾಸಿದೇವರೆಲ್ಲಿದ್ದಾರೆ?" ಎಂದು ಕೇಳಿದನು.

"ಸಭಾಂಗಣದಲ್ಲಿ ಕುಳಿತಿದ್ದಾರೆ."
"ಸಂಗಡ ಯಾರಾದರೂ ಇರುವರೆ?"
"ಒಬ್ಬ ವಟು ಮತ್ತು ಪೆಟ್ಟಿಗೆಗಳನ್ನು ಹೊತ್ತ ಹತ್ತು ಮಂದಿ ಆಳುಗಳು.":"ಸನ್ಯಾಸಿದೇವರನ್ನು ಕರೆದುಕೊಂಡು ಬಾ. ಆಳುಗಳ ಮೇಲೆ ದೃಷ್ಟಿಯಿರಲಿ."

ತುಸು ಹೊತ್ತಿನ ಮೇಲೆ ಅಲ್ಲಿಗೆ ಬಂದ ಮಧ್ಯಮ ವಯಸ್ಸಿನ ವ್ಯಕ್ತಿ ಎಲ್ಲ ಸನ್ಯಾಸಿಗಳಂತೆ ಕಾವಿಯ ಕಪಿನಿ ಉತ್ತರೀಯಗಳನ್ನು ಧರಿಸಿದ್ದರೂ, ನಡಿಗೆಯ ಠೀವಿ, ಕಣ್ಣುಗಳ ತೀಕ್ಷ್ಮದೃಷ್ಟಿ, ವಿಶಾಲವಾದ ಹಣೆ, ಜಡೆಕಟ್ಟಿದ ಕೇಶಗಳು ಅವನು ಅಸಾಮಾನ್ಯನೆಂಬುದನ್ನು ಸೂಚಿಸುತ್ತಿದ್ದವು.