ಪುಟ:ಕ್ರಾಂತಿ ಕಲ್ಯಾಣ.pdf/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೭೨

ಕ್ರಾಂತಿ ಕಲ್ಯಾಣ

ಗೌರವ ಅನುಕಂಪಗಳು ಬೆರೆತ ಸರಳ ಗಂಭೀರದೃಷ್ಟಿಯಿಂದ ಬಿಜ್ಜಳನನ್ನು ನೋಡುತ್ತ ಸನ್ಯಾಸಿ ನಿಂತನು.

ಬಿಜ್ಜಳನು ಆಸನದಿಂದೆದ್ದು ಎರಡು ಹೆಜ್ಜೆ ಮುಂದೆ ಹೋಗಿ ಕೈ ಮುಗಿದು, "ಅಪರಿಚಿತರಿಗೆ ದರ್ಶನ ಕೊಡುವುದು ನನ್ನ ಪದ್ಧತಿಯಲ್ಲ. ಆದರೂ ಗುರುದೇವರ ಆಜ್ಞೆಯಂತೆ ನಿಮ್ಮನ್ನು ಸ್ವಾಗತಿಸುತ್ತೇನೆ. ದಯೆಮಾಡಿ ಆಸನವನ್ನು ಪರಿಗ್ರಹಿಸಬೇಕು," ಎಂದು ಒಳಗೆ ಕರೆತಂದು ಕುಳ್ಳಿರಿಸಿದನು.

"ನಾನು ನಾಥಪಂಥದ ಒಬ್ಬ ಸಾಮಾನ್ಯ ಸನ್ಯಾಸಿ. ಹೆಸರು ಸಿದ್ಧಿನಾಥ, ಅಷ್ಟು ಮಾತ್ರ ತಿಳಿಸಿದ್ದರೆ, ಪರಿಚಯಪತ್ರ ಕೊಟ್ಟವರು ನಿಮ್ಮ ಕುಲಗುರು ಚಿದ್ಛನ ಶಿವಾಚಾರ್ಯರೇ ಆಗಿದ್ದರೂ ನೀವು ದರ್ಶನ ಕೊಡುತ್ತಿರಲಿಲ್ಲವೆಂದು ನಾನು ತಿಳಿದೆ. ಕಾವಿಯುಟ್ಟವರೆಲ್ಲ ಪರಿಶಿವನ ಅವತಾರವೆಂದು ಭಾವಿಸಿ ಸನ್ಮಾನಿಸುವ ಕಾಲ ಕಳೆಯಿತು. ನವಯುಗ ಆರಂಭವಾಗುತ್ತಿದೆ. ಈಗಿನ ಸಾಮಂತ ಸರ್ವಾಧಿಕಾರಿಗಳು ಹಿಂದಿನವರಂತೆ ಅರಮನೆಯ ವ್ಯವಹಾರದಲ್ಲಿ ಗುರುಮನೆಯ ಪ್ರವೇಶವನ್ನು ಒಪ್ಪುವುದಿಲ್ಲ," ಎಂದು ಹೇಳಿ ಸನ್ಯಾಸಿ ಅರ್ಥಗರ್ಭಿತವಾಗಿ ನಕ್ಕನು.

ಪರಿಚಯ ಪತ್ರವನ್ನು ಓದಿದಾಗ ತನ್ನ ಮನಸ್ಸಿನಲ್ಲಾದ ಭಾವನೆಯನ್ನು ಸನ್ಯಾಸಿ ಊಹೆಯಿಂದ ತಿಳಿದಿರಬೇಕೆಂದು ಬಿಜ್ಜಳನು ಭಾವಿಸಿದನು. ಪರರ ಇಂಗಿತವನ್ನು ಅರಿಯುವುದು ಯೋಗಸಾಧನೆಯಲ್ಲಿ ತೀರ ಕೆಳಗಿನ ಹಂತ. ತನ್ನ ಬುದ್ಧಿಜ್ವಾಲೆಯ ಎದುರಿಗೆ ಭೇದಿಸಲಾಗದ ಲೋಹಪ್ರಾಕಾರವೊಂದು ನಿಂತಂತೆ ಭಾಸವಾಯಿತು ಬಿಜ್ಜಳನಿಗೆ. ಸನ್ಯಾಸಿ ಬಂದ ಉದ್ದೇಶವೇನೆಂಬುದನ್ನು ತಿಳಿಯಲಾರದೆ ಅವನು ಮೌನವಾಗಿ ನಿಂತನು.

ಕೆಲವು ಕ್ಷಣಗಳ ಮೇಲೆ ಸನ್ಯಾಸಿ ಮುಂದುವರೆದು, "ನನ್ನ ಪೂರ್ಣ ಪರಿಚಯ ತಿಳಿಯಲು ಚಾಲುಕ್ಯ ಇತಿಹಾಸದ ಕೆಲವು ಅಜ್ಞಾತ ಪ್ರಸಂಗಗಳನ್ನು ಉಲ್ಲೇಖಿಸುವುದು ಅಗತ್ಯ. ಸರ್ವಾಧಿಕಾರಿಗಳು ದಯಮಾಡಿ ಕುಳಿತುಕೊಳ್ಳಬೇಕು," ಎಂದನು.

ನಿಂತಂತೆ ಕೆಲವೇ ಮಾತುಗಳಲ್ಲಿ ಸಂದರ್ಶನವನ್ನು ಮುಗಿಸುವ ತನ್ನ ಉದ್ದೇಶ ಸನ್ಯಾಸಿಗೆ ತಿಳಿಯಿತೆಂದು ಬಿಜ್ಜಳನು ಅಪ್ರತಿಭನಾಗಿ ನಸುನಕ್ಕು ಆಸನದಲ್ಲಿ ಕುಳಿತು, "ಪೂರ್ಣ ಪರಿಚಯಕ್ಕೆ ಪೀಠಿಕೆ ಅಗತ್ಯವಾದರೆ ನಾನು ಕೇಳಲು ಸಿದ್ಧನಾಗಿದ್ದೇನೆ," ಎಂದನು.

ಸನ್ಯಾಸಿ ಹೇಳಿದನು: "ಚಾಲುಕ್ಯ ಅರಸರಲ್ಲಿ ಆರನೆಯ ವಿಕ್ರಮಾದಿತ್ಯನ ಹೆಸರನ್ನು ನಾವು ಪ್ರತಿದಿನ ಎಲ್ಲರ ಬಾಯಲ್ಲಿ ಕೇಳುತ್ತೇವೆ. ಆದರೆ ರಾಜ್ಯಕ್ಕೆ,