ಪುಟ:ಕ್ರಾಂತಿ ಕಲ್ಯಾಣ.pdf/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾನವನು ದಾನವನಾದಾಗ

೨೭೩

ಪ್ರಜೆಗಳಿಗೆ ಅವನಷ್ಟೇ ಉಪಕಾರ ಮಾಡಿದ ಐದನೆಯ ವಿಕ್ರಮಾದಿತ್ಯನನ್ನು ಯಾರೂ ಒಂದು ಸಾರಿಯೂ ಸ್ಮರಿಸುವುದಿಲ್ಲ. ಚಾಲುಕ್ಯ ಅರಸೊತ್ತಿಗೆ ಪುನಃ ಪ್ರತಿಷ್ಠಿತವಾಗಲು ಐವಡಿ ವಿಕ್ರಮಾದಿತ್ಯನ ದೂರದೃಷ್ಟಿ, ಅವನು ಅನುಸರಿಸಿದ ಸಂಪ್ರದಾಯಕ್ಕೆ ಪ್ರತಿವಾದಿಯಾದ ವಿಚಿತ್ರ ರಾಜನೀತಿ ಕೌಶಲ, ಇವು ಮುಖ್ಯ ಕಾರಣಗಳೆಂಬುದನ್ನು ಮರೆತಿದ್ದೇವೆ. ಐವಡಿ ವಿಕ್ರಮಾದಿತ್ಯನು ತ್ರಿಪುರಿಯ ಕಲಚೂರ್ಯ ಅರಸು ಲಕ್ಷಣದೇವನ ಮಗಳು ಮಹರ್ಲೇಖೆಯನ್ನು ಮದುವೆಯಾಗಿದ್ದನು. ಇತಿಹಾಸದಲ್ಲಿ ಆ ಸಾಧ್ವೀಮಣಿ ಬೊಂತಾದೇವಿಯೆಂದು ವಿಖ್ಯಾತೆಯಾಗಿದ್ದಾಳೆ.

"ಆಗ ಚಾಲುಕ್ಯ ರಾಜ್ಯ ರಾಷ್ಟ್ರಕೂಟರ ಅಧೀನದಲ್ಲಿತ್ತು. ಐವಡಿ ವಿಕ್ರಮಾದಿತ್ಯನು ರಾಷ್ಟ್ರಕೂಟರ ಸಾಮಂತನಾಗಿ ಪಟ್ಟದಕಲ್ ಸೀಮೆಯನ್ನು ಆಳುತ್ತಿದ್ದನು. ಕಳೆದುಕೊಂಡ ರಾಜ್ಯವನ್ನು ಪುನಃ ಪಡೆಯಲು ಸಾಮಾನ್ಯವಾಗಿ ಎಲ್ಲ ಕ್ಷತ್ರಿಯರು ಅನುಸರಿಸುವ ಯುದ್ಧ ಹೋರಾಟಗಳ ವಿಧ್ವಂಸಕ ಮಾರ್ಗವನ್ನು ಬಿಟ್ಟು ಆಗಿನ ಜನರಿಗೆ ವಿಚಿತ್ರವೆಂದು ತೋರಿದ ಬೇರೆ ಮಾರ್ಗವನ್ನು ಅವನು ಅನುಸರಿಸಿದನು. ಸಾಮಂತಾಧಿಕಾರವನ್ನು ಬಿಟ್ಟುಕೊಟ್ಟು ಸಾಮಾನ್ಯ ನಾಗರಿಕನಂತೆ ವಾಣಿಜ್ಯೋದ್ಯಮಗಳಲ್ಲಿ ತೊಡಗಿದನು. ತಲೆಮಾರುಗಳಿಂದ ಸಂಗ್ರಹವಾಗಿದ್ದ ತನ್ನ ಅಪಾರ ಸಂಪತ್ತಿನಿಂದ ರಾಜ್ಯದ ಅನೇಕ ಕಡೆಗಳಲ್ಲಿ ಹೊಸ ಉದ್ಯಮಗಳನ್ನು ಸ್ಥಾಪಿಸಿದನು.

"ರಾಷ್ಟ್ರಕೂಟ ಅರಸರ ಅಂಧನೀತಿಯ ಪರಿಣಾಮವಾಗಿ ಆಗ ಚಾಲುಕ್ಯ ರಾಜ್ಯದ ವಾಣಿಜ್ಯೋದ್ಯಮಗಳು ದಕ್ಷಿಣಕ್ಕೆ ವಲಸೆ ಬಂದು ನೆಲೆಸಿದ್ದ ಔತ್ತರೇಯರ ಕೈಯಲ್ಲಿದ್ದವು. ಸಾಕಾದಷ್ಟು ಮೂಲಧನವಿಲ್ಲದೆ ನಮ್ಮ ವರ್ತಕರು ಅವರೊಡನೆ ಸ್ಪರ್ಧಿಸಲು ಸಮರ್ಥರಾಗಿರಲಿಲ್ಲ. ಕೃಷಿಕ ಕಾರ್ಮಿಕ ಪಾಂಚಾಲ ವರ್ಗಗಳವರು ದಿನ ದಿನಕ್ಕೆ ಹೆಚ್ಚು ಹೆಚ್ಚು ಬಡವರಾಗುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಐವಡಿ ವಿಕ್ರಮಾದಿತ್ಯನು ವಾಣಿಜ್ಯ ಕ್ಷೇತ್ರವನ್ನು ಪ್ರವೇಶಿಸಿ ರಾಜ್ಯದ ವಾಣಿಜ್ಯ ಉದ್ಯಮಗಳನ್ನು ಭದ್ರವಾದ ತಳಹದಿಯ ಮೇಲೆ ಕಟ್ಟಲು ತನ್ನ ಅಪಾರ ಸಂಪತ್ತನ್ನು ವಿನಿಯೋಗಿಸಿದನು. ಅದಕ್ಕಾಗಿ ಅವನು ಎರಡು ಹೊಸ ಸಂಸ್ಥೆಗಳನ್ನು ಸ್ಥಾಪಿಸುವುದು ಅಗತ್ಯವಾಯಿತು. ಅವುಗಳಲ್ಲಿ ಮೊದಲನೆಯದು ಐಯ್ಯಾವಳೆಯ ಐನೂರ್ವರು ಸ್ವಾಮಿಗಳ ಮಹಾಸಂಘ, ಎರಡನೆಯದು ಅದರ ಕ್ರಿಯಾರೂಪವಾದ ವೀರಬಣಂಜು ವಾಣಿಜ್ಯ ಸಂಘ. ಈ ಎರಡು ಸಂಸ್ಥೆಗಳ ಬಿಡುವಿಲ್ಲದ ಕಾರ್ಯಕ್ರಮದಿಂದ ಕೆಲವೇ ವರ್ಷಗಳಲ್ಲಿ ಚಾಲುಕ್ಯ ರಾಜ್ಯದ ಆರ್ಥಿಕ ಪುನರ್ಘಟನೆ ನಡೆಯಿತು. ವಿಕ್ರಮಾದಿತ್ಯನ ಅನಂತರ ಅವನ ಪುತ್ರ ನೂರ್ಮಡಿ ತೈಲಪನು ಚಾಲುಕ್ಯ ಅರಸೊತ್ತಿಗೆಯನ್ನು