ಪುಟ:ಕ್ರಾಂತಿ ಕಲ್ಯಾಣ.pdf/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮಾನವನು ದಾನವನಾದಾಗ

೨೭೫

ನಿನ್ನನ್ನು ಬಂಧಿಸಿ ಸೆರೆಯಲ್ಲಿಡುತ್ತೇನೆ. ಯಾರಲ್ಲಿ?” ಎಂದು ಗಜರಿ ನುಡಿದು ಭಟರನ್ನು ಕರೆದನು.

ಕೆಲವು ಕ್ಷಣಗಳಾದರೂ ಭಟರು ಬರಲಿಲ್ಲ. ನಿರ್ಲಿಪ್ತನಂತೆ ಗಂಭೀರವಾಗಿ ಕುಳಿತಿದ್ದ ಸನ್ಯಾಸಿ ತುಸು ಹೊತ್ತಿನ ಮೇಲೆ ಕುಹಕದ ನಗೆ ಹಾರಿಸಿ, “ನಮ್ಮ ಏಕಾಂತ ಸಂದರ್ಶನಕ್ಕೆ ಅಡ್ಡಿಯಾಗದಿರಲೆಂದು ನಿಮ್ಮಭಟರು ಅರಮನೆಯ ಈ ಭಾಗದಿಂದ ದೂರ ಹೋಗಿದ್ದಾರೆ, ಬಿಜ್ಜಳರಾಯರೆ. ನಿಮ್ಮ ಕರೆ ಅವರಿಗೆ ಕೇಳಿಸುವುದಿಲ್ಲ. ಒಂದು ವೇಳೆ ಕೇಳಿಸಿ ಅವರಿಲ್ಲಿಗೆ ಬಂದರೂ ಐಯ್ಯಾವಳೆಯ ಐನೂರ್ವರು ಸ್ವಾಮಿಗಳ ಮಹಾಸಂಘದ ಅಧ್ಯಕ್ಷನನ್ನು ಸೆರೆಹಿಡಿಯುವ ಧೈರ್ಯ ಅವರಲ್ಲಿ ಯಾರಿಗೂ ಇರುವುದಿಲ್ಲ” ಎಂದು ಹೇಳಿ ಬೆರಳಲ್ಲಿ ಮುಚ್ಚಿಟ್ಟಿದ್ದ ಮುದ್ರೆಯುಂಗುರ ಕಾಣುವಂತೆ ಬಲಗೈಯನ್ನು ಮುಂದೆ ಚಾಚಿದನು.

ಉಂಗುರಕ್ಕೆ ಜೋಡಿಸಿದ್ದ ನೀಲಮಣಿ ಗಗನದ ತೇಜಃಪೂರ್ಣ ನಕ್ಷತ್ರವೊಂದನ್ನು ಕಿತ್ತು ಭೂಮಿಗೆ ತಂದಂತೆ ಅಪೂರ್ವ ಕಾಂತಿಯಿಂದ ಕಣ್ಣುಗಳು ಕೋರೈಸುವಂತೆ ಬೆಳಗಿತು.

ಗರುಡ ಮಣಿಯನ್ನು ಕಂಡ ಸರ್ಪದಂತೆ ಬಿಜ್ಜಳನು ಸ್ತಂಭಿತನಾಗಿ ನೆಟ್ಟ ದೃಷ್ಟಿಯಿಂದ ಉಂಗುರವನ್ನು ನೋಡುತ್ತಿದ್ದನು. ಕೆಲವು ಕ್ಷಣಗಳ ಅನಂತರ ತಲೆ ತಿರುಗಿ ಗರ ಬಡಿದಂತಾದಾಗ, ಸನ್ಯಾಸಿ ಸನ್ನೆಯಿಂದ ಕುಳಿತುಕೊಳ್ಳುವಂತೆ ಹೇಳಿ, ಅನುನಯದ ಮಿದುದನಿಯಿಂದ, “ಈಗ ನನ್ನ ಪೂರ್ಣ ಪರಿಚಯ ನಿಮಗೆ ತಿಳಿದಂತಾಯಿತು. ಇನ್ನು ನಾವು ಬಹುದಿನದ ಗೆಳೆಯರಂತೆ ಆವೇಶ ಆಕ್ರೋಶಗಳಿಲ್ಲದೆ ಮಾತುಕಥೆಗಳನ್ನು ಮುಗಿಸಬಹುದಲ್ಲವೆ?” ಎಂದನು.

ಬಿಜ್ಜಳನು ತಲೆಯಾಡಿಸಿ ಸಮ್ಮತಿ ಸೂಚಿಸಿದನು.

ಸನ್ಯಾಸಿ ಹೇಳಿದನು : “ಐನೂರ್ವರು ಸ್ವಾಮಿಗಳ ಮಹಾಸಂಘದ ಧಾರ್ಮಿಕ ಸಂಸ್ಥೆ, ದಕ್ಷಿಣ ಭಾರತದ ಸಂಸ್ಥಾನಾಧೀಶರು, ಸಾಮಂತರು, ಪ್ರಭಾವಶಾಲಿ ಗುರುಪೀಠಗಳ ಕಾರ್ಯಕರ್ತರು, ಶ್ರೀಮಂತ ವರ್ತಕರು, ಸಾಮಾನ್ಯ ಪ್ರಜೆಗಳು, ಇವರೆಲ್ಲ ಮಹಾಸಂಘಕ್ಕೆ ಪ್ರತಿನಿಧಿಗಳನ್ನು ಕಳುಹಿಸಿದ್ದಾರೆ. ಸಂಸ್ಥೆಯ ಸದಸ್ಯತ್ವ ಪಡೆಯಲು ನೀವು ಕೂಡ ಎರಡು ಸಾರಿ ಪ್ರಯತ್ನಿಸಿ ವಿಫಲರಾದಿರಿ. ಈಗ ಮೂರನೆಯ ಸಾರಿ ನಿಮ್ಮ ಅಭ್ಯರ್ಥಿ ಪತ್ರ ನನ್ನ ಹತ್ತಿರ ಬಂದಿದೆ. ಅದನ್ನು ಅಂಗೀಕರಿಸುವುದೇ ನಿರಾಕರಿಸುವುದೇ ಎಂಬುದನ್ನು ನಿರ್ಧರಿಸುವ ಮೊದಲು ನಿಮ್ಮೊಡನೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಬೇಕಾಗಿದೆ.”

“ನಾನು ಸಿದ್ಧವಾಗಿದ್ದೇನೆ, ಭಗವನ್. ಆದರೆ ನನ್ನ ಪ್ರಶ್ನೆಯೊಂದಕ್ಕೆ ನೀವು