ಪುಟ:ಕ್ರಾಂತಿ ಕಲ್ಯಾಣ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬

ಕ್ರಾಂತಿ ಕಲ್ಯಾಣ

ದೇವಿಯ ಮನೆಹೆಗ್ಗಡೆಗೆ ಉಚಿತವಾದ ಶ್ರೀಮಧಾಂಭೀರ್ಯದಿಂದ ಅಗ್ಗಳನು ನುಡಿದನು.

ಆದರೆ......ಆದರೇನು?"-ಅಸಹನೆಯ ಸೂಚನೆಯಾಗಿ ಬಿಜ್ಜಳನ ತುಟಿಗಳು ಮಿಡಿದವು.

ಇಂತಹ ಸಂದರ್ಭದಲ್ಲಿ ಸಂದೇಹದ ಬಳಸು ನುಡಿಗಳಿಗಿಂತ ಸ್ಪಷ್ಟಭಾಷಣ ಉಪಯುಕ್ತವೆಂದು ತಿಳಿದಿದ್ದ ಅಗ್ಗಳನು ಹೇಳಿದನು: "ಮಹಾರಾಣಿಯವರು ಮಂಗಳವೇಡೆಗೆ ಬರುವರೇ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ. ಆ ವಿಚಾರದಲ್ಲಿ ಅವರ ಕೊನೆಯ ನಿರ್ಧಾರವನ್ನು ನಾನು ನಿರೀಕ್ಷಿಸುತ್ತಿದ್ದೇನೆ. ಅದನ್ನು ತಿಳಿದಮೇಲೆ ಸ್ವಾಗತದ ವಿವರಗಳನ್ನು ಪ್ರಸ್ತಾಪಿಸಬಹುದು."

ಕ್ಷಣಕಾಲ ಬಿಜ್ಜಳನ ಹುಬ್ಬುಗಳೂ ಮುದುರಿದವು. ಅಸಮಾಧಾನದಿಂದ ತುಟಿ ಅದುರಿತು. ಕ್ರಮಿತನು ತಳವೆಳಗಾದನು. "ಎಂತಹ ಸಾಹಸಿ ಈ ಮನೆ ಹೆಗ್ಗಡೆ! ಗುಹೆಯಲ್ಲಿ ಸಿಕ್ಕೂ ಸಿಂಹದ ಬಾಲವನ್ನು ತಿರುವಲು ಯೋಚಿಸುತ್ತಿದ್ದಾನೆ. ಏನಾದರೂ ಅನರ್ಥವಾದರೆ ನಾನು ಹೊಣೆಯಲ್ಲ,” ಎಂದು ತನಗೆ ತಾನೆ ಹೇಳಿಕೊಂಡನು.

ಪ್ರತಿಕ್ಷಣದಲ್ಲಿ ಬಿಜ್ಜಳನ ಮುಖ ಮಿದುನಗೆಯಿಂದ ಅರಳಿತು. ಅವನು ಹೇಳಿದನು: "ಮಹಾರಾಣಿಯವರು ಈ ವಿಚಾರದಲ್ಲಿ ಯಾವ ನಿರ್ಧಾರಕ್ಕೂ ಬಾರದಿರಲು ನಾವು ಕಾರಣರು, ಅಗ್ಗಳದೇವರಸರೆ. ಕುಮಾರ ಪ್ರೇಮಾರ್ಣವನ ಪಟ್ಟಾಭಿಷೇಕದ ಸಲಹೆಯನ್ನು ನಾವು ಓಲೆ ಬರೆದು ತಿಳಿಸುವುದು ಉಚಿತವಾಗಿತ್ತು. ಹಾಗೆ ಮಾಡದೆ ಬಾಯಿಮಾತಿನಲ್ಲಿ ಹೇಳಿ ಕಳುಹಿಸಿದ್ದು ಸರಿಯಲ್ಲವೆಂದು ಈಗ ಅರಿವಾಗುತ್ತಿದೆ. ಆದರೆ ಈ ಸಂದರ್ಭದಲ್ಲಿ ಬೇರೆ ಉಪಾಯವಿರಲಿಲ್ಲ."

"ದೂತನಿಂದ ನಿಮ್ಮ ಸಲಹೆ ಕೇಳಿದಾಗ ಮಹಾರಾಣಿಯವರಿಗೆ ಆಶ್ಚರ್ಯವಾಯಿತು. 'ಈ ವಿಚಾರವನ್ನು ಆಹ್ವಾನ ಪತ್ರಿಕೆಯಲ್ಲಿ ಏಕೆ ಪ್ರಸ್ತಾಪಿಸಲಿಲ್ಲ?’ ಎಂದು ಪ್ರಶ್ನಿಸಿದರು. ದೂತನು ತಬ್ಬಿಬ್ಬಾಗಿ ಉತ್ತರ ಕೊಡಲಿಲ್ಲ,” ಎಂದನು ಅಗ್ಗಳ.

"ನಮ್ಮನ್ನೇ ತೊಂದರೆಯಲ್ಲಿ ಹಾಕಿರುವ ವಿಚಾರವಾಗಿ ಸಾಮಾನ್ಯ ದೂತನೊಬ್ಬನು ಉತ್ತರ ಕೊಡಲು ಶಕ್ತನಾಗುವನೆ? ಈಗಲೂ ಆ ತೊಂದರೆ ಪರಿಹಾರವಾಗಿಲ್ಲ."-ಎಂದು ಹೇಳಿ ಬಿಜ್ಜಳನು ಅರ್ಥಗರ್ಭಿತವಾಗಿ ಕ್ರಮಿತನ ಕಡೆ ನೋಡಿದನು.

ಇಂಗಿತವರಿತು ಕ್ರಮಿತನು ಹೇಳಿದನು- "ದಿವಂಗತ ತೈಲಪಮಹಾರಾಜರ ಸಹೋದರ ಜಗದೇಕಮಲ್ಲರಸರು ಈಗ ಚಾಲುಕ್ಯ ಸಿಂಹಾಸನದಲ್ಲಿ ಕುಳಿತಿರುವ