ಪುಟ:ಕ್ರಾಂತಿ ಕಲ್ಯಾಣ.pdf/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮಾನವನು ದಾನವನಾದಾಗ

೨೭೭

ದರ್ಪದ ದನಿಯಲ್ಲಿ, “ನನ್ನ ಧಾರ್ಮಿಕ ವಿಶ್ವಾಸ ಅವಿಶ್ವಾಸಗಳನ್ನು ಮಹಾಸಂಘವೇಕೆ ಪರಿಗಣಿಸಬೇಕು ? ನಾನು ನಾಸ್ತಿಕನೆಂದು ನಿಮಗೆ ತಿಳಿದದ್ದು ಹೇಗೆ?” ಎಂದನು.

ಸನ್ಯಾಸಿ ಹೇಳಿದನು : “ಐನೂರ್ವರ ಮಹಾಸಂಘವೊಂದು ಧಾರ್ಮಿಕ ಸಂಸ್ಥೆ. ಜಗತ್ಕರ್ತನನ್ನು ನಿರಾಕರಿಸುವ ನಾಸ್ತಿಕ ಚಾರ್ವಾಕರಿಗೆ ಅದರಲ್ಲಿ ಸ್ಥಾನ ಕೊಡಕೂಡದೆಂಬುದು ನಮ್ಮ ಮೂಲ ನಿಬಂಧನೆ. ಭುಜಬಲ ಚಕ್ರವರ್ತಿ, ನಿಶ್ಯಂಕಮಲ್ಲ, ಶನಿವಾರ ಸಿದ್ದಿ ಮುಂತಾದ ನಿಮ್ಮ ಬಿರುದುಗಳು ನಿಮ್ಮ ನಾಸ್ತಿಕ ವಾದವನ್ನು ಸ್ಪಷ್ಟಪಡಿಸುವುದೆಂದು ಮಹಾಸಂಘ ಭಾವಿಸಿದೆ. ನಾರಣಕ್ರಮಿತನಂತಹ ನಿರೀಶ್ವರವಾದಿ ಮೀಮಾಂಸಕನನ್ನು ರಾಜಪುರೋಹಿತನನ್ನಾಗಿ ನೇಮಿಸಿ, ಭಕ್ತಿಪ್ರಧಾನವಾದ ಶೈವಶರಣಧರ್ಮದ ಮೇಲೆ ದಬ್ಬಾಳಿಕೆ ಆರಂಭಿಸಿ, ನೀವು ಆ ಅಭಿಪ್ರಾಯವನ್ನು ಸಮರ್ಥಿಸುತ್ತಿದ್ದೀರಿ. ಐನೂರ್ವರ ಮಹಾಸಂಘ ನಿಮ್ಮ ಕಾರ್ಯವಿಧಾನವನ್ನು ವಿರೋಧಿಸುತ್ತದೆ.”

ಬಿಜ್ಜಳನ ಮೊಗದಲ್ಲಿ ವಿಸ್ತಾರದ ನಗೆ ಮೂಡಿತು. ಕುಹಕದ ಚುಚ್ಚು ದನಿಯಿಂದ ಅವನು, “ಹಾಗಾದರೆ ಶರಣರು ಪ್ರಾರಂಭಿಸಿರುವ ವರ್ಣಸಂಕರದ ಕೃತ್ಯಗಳನ್ನು ವೈದಿಕ ಧರ್ಮದ ಅಪಚಾರಗಳನ್ನು ನೀವು ಅನುಮೋದಿಸುವಿರಾ?” ಎಂದು ಕೇಳಿದನು.

“ಈಗ ನಮ್ಮಲ್ಲಿ ಪ್ರಚಾರದಲ್ಲಿರುವ ಸಮಾಜಘಾತುಕವಾದ ಜಾತಿ ಪಂಥವನ್ನು ನೀವು ವರ್ಣಾಶ್ರಮಧರ್ಮವೆಂದು ಕರೆಯುವಿರಾ?” ಸನ್ಯಾಸಿ ಉತ್ತರಿಸಿದನು. “ಹಿಂದೊಂದು ಕಾಲದಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯಗಳ ರಕ್ಷಣೆಗೆ ಅಗತ್ಯವಾಗಿದ್ದ ವರ್ಣಧರ್ಮದ ಅಪವಾದ ರೂಪವಾದ ವಿರೂಪಚಿತ್ರವೇ ಈಗಿನ ಜಾತಿ ಪಂಥ. ಅದು ನಮ್ಮ ಸಮಾಜವನ್ನು ನೂರು ಚೂರುಗಳಾಗಿ ಮಾಡಿದೆ. ಅದನ್ನು ಹೀಗೆಯೇ ಬೆಳೆಯಬಿಟ್ಟರೆ ಆ ನೂರು ಚೂರುಗಳು ಸಾವಿರ ಚೂರುಗಳಾಗುವುವು. ಸಂಪ್ರದಾಯ ಶರಣರಾದ ವೈದಿಕರು ಈ ವಿದ್ರೂಪ ವರ್ಣಧರ್ಮವನ್ನು ಅನುಮೋದಿಸಿ ಸಮಾಜ ದ್ರೋಹಕ್ಕೆ ತೊಡಗಿದ್ದಾರೆ. ಈ ವಿಚಿತ್ರ ಪರಿಸ್ಥಿತಿಯಲ್ಲಿ ಜಾತಿಪಂಥವನ್ನು ವಿರೋಧಿಸಿ ಸಮಾಜದಲ್ಲಿ ಭಾವೈಕ್ಯತೆಯನ್ನು ಸಾಧಿಸಲು ಶರಣಧರ್ಮ ಪ್ರಯತ್ನಿಸುತ್ತಿದೆ. ಚಾಲುಕ್ಯ ರಾಜ್ಯದ ಸಾಮಾನ್ಯ ಪ್ರಜೆಗಳು, ಶ್ರೀಮಂತ ಸಾಮಂತರು, ಬುದ್ಧಿಜೀವಿ ಶಿಷ್ಟರು ಅದಕ್ಕೆ ಅನುಮೋದನೆ ಕೊಟ್ಟಿದ್ದಾರೆ. ಆರು ವರ್ಷಗಳ ಅಲ್ಪಾವಧಿಯಲ್ಲಿ ಶೈವಶರಣ ಧರ್ಮ ಸಾಧಿಸಿರುವ ವ್ಯಾಪ್ತಿ ಪ್ರಭಾವಗಳು ಅದರ ನಿದರ್ಶನ."

“ಹರಳಯ್ಯ ಮಧುವರಸರ ವಿವಾದ ಸಂಬಂಧ, ಅಸ್ಪಶ್ಯ ತರುಣನೊಬ್ಬನಿಗೆ ಬ್ರಾಹ್ಮಣ ಕನೈಯನ್ನು ಕೊಟ್ಟು ಮದುವೆ ಮಾಡಿದ್ದು, ಈ ವರ್ಣಸಂಕರವನ್ನು