ಪುಟ:ಕ್ರಾಂತಿ ಕಲ್ಯಾಣ.pdf/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮಾನವನು ದಾನವನಾದಾಗ

೨೭೯

“ಈಗಿನ ಸಂದರ್ಭದಲ್ಲಿ ತಿರಸ್ಕರಿಸುವುದು ಅನಿವಾರ್ಯ”
-ಬಿಜ್ಜಳನು ಅಷ್ಟೇ ಬಿರುಸಾಗಿ ಉತ್ತರ ಕೊಟ್ಟನು.
“ಅದರ ಪರಿಣಾಮವೇನೆಂಬುದು ನಿಮಗೆ ತಿಳಿದಿದೆಯೆ?”
ಬಿಜ್ಜಳನು ವಿಕಟವಾಗಿ ನಕ್ಕು, “ನನ್ನ ಬಿರುದುಗಳು ನಾಸ್ತಿಕವಾದದ ಕುರುಹುಗಳೆಂದು ನೀವೇ ಹೇಳಿದಿರಲ್ಲವೆ? ಬಿಜ್ಜಳನನ್ನು ಹೆದರಿಸುವ ಶಕ್ತಿ ಈ ಜಗತ್ತಿನಲ್ಲಿ ಯಾವುದೂ ಇರುವುದಿಲ್ಲ,” ಎಂದನು.

ಸನ್ಯಾಸಿ ಚಡಪಡಿಸಿ, “ಇದುವರೆಗೆ ನಿಮ್ಮ ಶತಾಪರಾಧಗಳನ್ನು ಮಹಾಸಂಘ ಮನ್ನಿಸಿದೆ. ಆದರೆ ಈ ಸಾರಿ ನೀವು ಸಂಘದ ಆದೇಶವನ್ನು ತಿರಸ್ಕರಿಸಿದರೆ, ಖಂಡಿತವಾಗಿ ವಿಪತ್ತಿಗೆ ಗುರಿಯಾಗಬೇಕಾಗುವುದು,” ಎಂದು ಆವೇಗದಿಂದ ನುಡಿದನು.

“ಶತಾಪರಾಧಗಳು! ಮಹಾಸಂಘ ನನ್ನ ತಪ್ಪುನಪ್ಪುಗಳ ಎಣಿಕೆಗೆ ತೊಡಗಿದ್ದು ಎಂದಿನಿಂದ ?” ಉಪಹಾಸದ ನಗೆ ಹಾರಿಸಿ ಬಿಜ್ಜಳನು ಪ್ರಶ್ನಿಸಿದನು.

ಸನ್ಯಾಸಿ ಹೇಳಿದನು : "ಕಳೆದ ಹನ್ನೆರಡು ವರ್ಷಗಳಿಂದ ನಿಮ್ಮ ಕಾರ್ಯಾಚರಣೆಯ ಒಂದೊಂದು ಘಟನೆಯೂ ಮಹಾಸಂಘಕ್ಕೆ ವರದಿಯಾಗಿದೆ. ತೈಲಪ ಮಹಾರಾಜರನ್ನು ವಿಲಾಸದ ಮಡುವಿನಲ್ಲಿ ತಳ್ಳಲು ನೀವು ಹೂಡಿದ ತಂತ್ರ ಹಂತಹಂತವಾಗಿ ನಡೆಸಿದ ರಾಜ್ಯಾಪಹಾರ, ತೈಲಪನ ಕಡೆಯ ಸಾಮಂತ ಅಧಿಕಾರಿಗಳನ್ನು ಪದಚ್ಯುತರಾಗಿ ಮಾಡಲು ನೀವು ಕೈಗೊಂಡ ಭೇದೋಪಾಯಗಳು, ಚಾಲುಕ್ಯ ವಂಶೀಯರನ್ನು ದೇಶದಿಂದ ಓಡಿಸಲು ನೀವು ನಡೆಸಿದ ರಹಸ್ಯ ಹಿಂಸಾಕೃತ್ಯಗಳು, ಅತಿಥಿಯಾಗಿ ಮಂಗಳವೇಡೆಗೆ ಬಂದ ಚಾಲುಕ್ಯ ರಾಣಿ ಕಾಮೇಶ್ವರಿಯ ಬಗೆಗೆ ನಿಮ್ಮ ವಿಶ್ವಾಸಘಾತಕ ದುರ್ವತ್ರನೆ, ಅದರ ಪರಿಣಾಮವಾಗಿ ನಡೆದ ಅಗ್ನಿ ಅಪಘಾತ-ಈ ಎಲ್ಲ ವಿಚಾರಗಳೂ ಮಹಾಸಂಘಕ್ಕೆ ತಿಳಿದಿದೆ. ಮಹಾಭಾರತದಲ್ಲಿನ ಶಿಶುಪಾಲಕಥೆ ಕೇಳಿಲ್ಲವೆನೀವು. ಅವನ ನೂರು ಅಪರಾಧಗಳನ್ನು ಕೃಷ್ಣನು ಕ್ಷಮಿಸಿದನು. ನೂರೊಂದನೆಯ ಅಪರಾಧ ನಡೆದಾಗ ನಿಷ್ಕರುಣೆಯಿಂದ ಶಿರಶ್ಛೇದನ ಮಾಡಿದನು. ನಿಮ್ಮ ಅಂತ್ಯವೂ ಹಾಗಾಗದಿರಬೇಕಾದರೆ ಮಹಾಸಂಘದ ಸೂಚನೆಯಂತೆ ನಡೆಯುವುದು ಅಗತ್ಯ.”

ಕಾಮೇಶ್ವರಿಯ ಹೆಸರು ಕೇಳಿ ಬಿಜ್ಜಳನು ಬೆಚ್ಚಿದನು. ಅವಳ ವಿಚಾರದಲ್ಲಿ ತನ್ನ ದುರ್ವತ್ರನೆ ಯಾವ ಘಟ್ಟಕ್ಕೆ ಮುಟ್ಟಿತೆಂಬುದನ್ನು ಮಹಾಸಂಘ ತಿಳಿದಿರಬಹುದೇ ಎಂದು ಅವನು ಸಂದೇಹಿಸಿದನು. ಆ ವಿಚಾರ ಪ್ರಜೆಗಳಿಗೆ ತಿಳಿದರೆ ರಾಜ್ಯಾದ್ಯಂತ ವಿರೋಧ ಅವಹೇಳನಗಳ ಮಹಾಪೂರವೇ ಹರಿಯಬಹುದೆಂದು ಭಾವಿಸಿ