ಪುಟ:ಕ್ರಾಂತಿ ಕಲ್ಯಾಣ.pdf/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೨೮೦

ಕ್ರಾಂತಿ ಕಲ್ಯಾಣ

ಅವನು, “ನನ್ನ ಈ ಎಲ್ಲ ಅಪರಾಧಗಳನ್ನು ಮಹಾಸಂಘ ಕರುಣೆಯಿಂದ ಮನ್ನಿಸಲು ಕಾರಣ ?” ಎಂದು ವಿನಯದ ಬಲೆ ಬೀಸಿ ನುಡಿದನು.

“ನೀವು ದಕ್ಷರಾದ ಆಡಳಿತಗಾರರೆಂದು, ದೇಶದಲ್ಲಿ ಶಾಂತಿ ಸುರಕ್ಷಣೆಗಳನ್ನು ಸ್ಥಾಪಿಸಿ ಆರ್ಥಿಕ ಭದ್ರತೆಯನ್ನು ಉತ್ತಮಪಡಿಸಲು ನೀವು ಶಕ್ತರೆಂದು, ಬಸವಣ್ಣನವರು ಪ್ರಾರಂಭಿಸಿದ ಧಾರ್ಮಿಕ ಆರ್ಥಿಕ ಸಾಮಾಜಿಕ ಸುಧಾರಣೆಗಳಿಗೆ ನೀವು ನೆರವಾದದ್ದು ಮಹಾಸಂಘ ನಿಮ್ಮ ವಿಚಾರದಲ್ಲಿ ಅನುಸರಿಸಿದ ಉಮಾನೀತಿಯ ಮುಖ್ಯ ಕಾರಣಗಳಲ್ಲೊಂದು.”

-ಸನ್ಯಾಸಿ ಅಷ್ಟೇ ವಿನಯದಿಂದ ಉತ್ತರ ಕೊಟ್ಟನು.

ಬಿಜ್ಜಳನು ಕೆಲವು ಕ್ಷಣಗಳು ಯೋಚಿಸಿ ಬದಲಿಸಿದ ಕಂಠದಿಂದ, “ಈಗಿನ ಪರಿಸ್ಥಿತಿಯಲ್ಲಿ ಮಹಾಸಂಘ ನನ್ನಿಂದ ಅಪೇಕ್ಷಿಸುವುದೇನು?” ಎಂದು ಪ್ರಶ್ನಿಸಿದನು.

“ನೀವು ಪ್ರಚಾರ ಮಾಡಿರುವ ಮರಣದಂಡನೆಯ ಆಜ್ಞೆಯನ್ನು ಹಿಂದಕ್ಕೆ ತೆಗೆದುಕೊಂಡು ಮಧುವರಸ ಹರಳಯ್ಯ ಶೀಲವಂತರನ್ನು ಬಿಡುಗಡೆಮಾಡುವುದು. ಶರಣ ಧರ್ಮದ ವಿರುದ್ಧವಾಗಿ ಪ್ರಾರಂಭಿಸಿರುವ ದಬ್ಬಾಳಿಕೆಯ ಕಾರ್ಯಗಳನ್ನು ನಿಲ್ಲಿಸುವುದು.”

“ಪ್ರತಿಯಾಗಿ ಮಹಾಸಂಘ ನನಗೆ ಕೊಡುವ ಪರಿಹಾರವೇನು?”

“ಸದಸ್ಯತ್ವಕ್ಕಾಗಿ ನೀವು ಕಳುಹಿಸಿರುವ ಅಭ್ಯರ್ಥಿ ಪತ್ರವನ್ನು ಮಹಾಸಂಘ ಅಂಗೀಕರಿಸುತ್ತದೆ. ಶರಣರ ವಿರುದ್ದ ನೀವು ಪ್ರಾರಂಭಿಸಿರುವ ಕಾರ್ಯಕ್ರಮವನ್ನು ನಿಲ್ಲಿಸುವುದರಿಂದ ನಿಮಗಾಗುವ ಆರ್ಥಿಕ ನಷ್ಟವನ್ನು ತುಂಬಿಕೊಡಲು ಮಹಾಸಂಘ ನಿಮ್ಮ ಸ್ವಂತ ರಾಜಕೋಶಕ್ಕೆ ಹತ್ತು ಲಕ್ಷ ವರಹಗಳನ್ನು ಪರಿಹಾರ ಧನವಾಗಿ ನೀಡುತ್ತದೆ.”

ಬಿಜ್ಜಳನು ಸ್ತಂಭಿತನಾದನು.

ಹತ್ತು ಲಕ್ಷ ವರಹಗಳು! ಮಂಗಳವೇಡೆಯ ಹತ್ತು ವರ್ಷಗಳ ಉತ್ಪನ್ನ ! ಚಾಲುಕ್ಯ ರಾಜ್ಯಕ್ಕೆ ಸಾಮಂತ ಮಾಂಡಲಿಕರು ಸಲ್ಲಿಸುವ ವಾರ್ಷಿಕ ಕಪ್ಪಕಾಣಿಕೆಗಳ ದಶಮಾಂಶ !

ಲಂಚ ಕೊಟ್ಟು ನ್ಯಾಯಾಧೀಶರನ್ನು ಒಲಿಸಿಕೊಳ್ಳುವುದು, ದಂಡಾಜ್ಞೆ ಕಾರ್ಯ ಗತವಾಗದಂತೆ ಮಾಡುವುದು, ನ್ಯಾಯವನ್ನು ಬೆಲೆಕೊಟ್ಟು ಕೊಳ್ಳುವುದು, ಈ ಎಲ್ಲ ರೀತಿಯ ಭ್ರಷ್ಟಾಚಾರಗಳನ್ನು ಶಿಕ್ಷಾರ್ಹ ಅಪರಾಧಗಳೆಂದು ಧರ್ಮಶಾಸ್ತ್ರಗಳು ಹೇಳುತ್ತವೆ. ನ್ಯಾಯಪೀಠದ ತೀರ್ಪಿನಂತೆ ಮರಣದಂಡನೆಗೆ ಗುರಿಯಾದ ಅಪರಾಧಿಗಳನ್ನು ಉಳಿಸಿಕೊಳ್ಳಲು ರಾಜನಿಗೆ ಲಂಚ ಕೊಡುವುದು