ಪುಟ:ಕ್ರಾಂತಿ ಕಲ್ಯಾಣ.pdf/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮಾನವನು ದಾನವನಾದಾಗ

೨೮೧

ರಾಜದ್ರೋಹದಷ್ಟೇ ಗುರುತರವಾದ ಅಪರಾಧ. ಐನೂರ್ವರ ಮಹಾಸಂಘ ಇಂತಹ ಅಚಿಂತ್ಯ ಸಾಹಸ ಕೃತ್ಯಕ್ಕೆ ತೊಡಗಿದ್ದು ಹೇಗೆ?

ಬಿಜ್ಜಳನು ಯೋಚಿಸುತ್ತ ಮೌನವಾಗಿ ಕುಳಿತಿದ್ದಂತೆ ಸನ್ಯಾಸಿ ಮುಂದುವರೆದು, “ಇದು ಅಪರಿಚಿತನೊಬ್ಬನ ಉನ್ಮತ್ತಾಲಾಪವಲ್ಲ. ಐಯ್ಯಾವಳೆಯ ಐನೂರ್ವರು ಸ್ವಾಮಿಗಳ ಅಧ್ಯಕ್ಷನಾಗಿ, ಸಂಘದ ಅನುಮತಿ ಪಡೆದು ನಾನೀ ಮಾತುಗಳನ್ನು ಹೇಳುತ್ತಿದ್ದೇನೆ. ಗೊತ್ತಾದ ಹತ್ತು ಲಕ್ಷ ಹಣವನ್ನು ಒಂದೇ ಮೊತ್ತದಲ್ಲಿ ಸ್ವರ್ಣಮುದ್ರೆಗಳ ರೂಪದಿಂದ ನಿಮಗೆ ಸಲ್ಲಿಸಲು ಮಹಾಸಂಘ ಉದ್ದೇಶಿಸಿದೆ. ಪೂರ್ಣ ಹಣವನ್ನು ನಾನು ಸಂಗಡ ತಂದಿದ್ದೇನೆ,” - ಎಂದು ಹೇಳಿ, ಆಸನದಿಂದೆದ್ದು ಎರಡು ಹೆಜ್ಜೆ ಮುಂದೆ ಹೋಗಿ, ಸಭಾಗೃಹದ ಮೊಗಶಾಲೆಯಲ್ಲಿ ತನ್ನ ಸಂಕೇತಕ್ಕಾಗಿ ಕಾಯುತ್ತಿದ್ದ ಪರಿಜನರನ್ನು ಕರೆದನು. ಕೂಡಲೆ ಅವರು ಸಾಲಾಗಿ ಒಳಗೆ ಬಂದು, ತಲೆಯ ಮೇಲೆ ಹೊತ್ತಿದ್ದ ಪೆಟ್ಟಿಗೆಗಳನ್ನು ಕೆಳಕ್ಕಿಳಿಸಿ, ಅವುಗಳಲ್ಲಿ ಅಡಕವಾಗಿಟ್ಟಿದ್ದ ನೂಲಿನ ಜಾಳಿಗೆಗಳನ್ನು ಒಂದೊಂದಾಗಿ ಹೊರಕ್ಕೆ ತೆಗೆದು ಬಾಯಿ ಬಿಚ್ಚಿ ಅವುಗಳಲ್ಲಿದ್ದ ಚಿನ್ನದ ನಾಣ್ಯಗಳನ್ನು ಬಿಜ್ಜಳನ ಮುಂದೆ ಸುರಿದರು. ಚಾಲುಕ್ಯ, ಹೊಯ್ಸಳ ಚೋಳ, ಪಾಂಡ್ಯ, ಸಿಂಧು, ಸೌರಾಷ್ಟ್ರ ಮಾಳವ, ಮಗಧ, ಅಯೋಧ್ಯ, ಬಂಗಾಳ, ರೋಮಕ, ಮೇಚ್ಚ, ಚೀನ, ಬ್ರಹ್ಮ, ಮಲಯ ದೇಶಗಳ ವಿವಿಧಾಕಾರದ, ವಿಭಿನ್ನ ತೂಕದ ಸ್ವರ್ಣಮುದ್ರೆಗಳು ಅವುಗಳಲ್ಲಿದ್ದವು.

ನೋಡುತ್ತಿದ್ದಂತೆ ಹಣದ ಗುಡ್ಡೆ ಬೆಳೆದು ರಾಶಿಯಾಯಿತು. ರಾಶಿ ಬೆಳೆದು ಬೆಟ್ಟವಾಯಿತು. ಝಣ ಝಣ ಶಬ್ದ ಕೇಳಿ ಓಡಿಬಂದ ರಾಜಭಟರು, ಪಸಾಯಿತರು, ಪ್ರತಿಹಾರಿ ಮಾಗಧರು, ಸಾಮಂತ ಸಾಮಾಜಿಕ ಹೆಗ್ಗಡೆಗಳೂ ಬಾಗಿಲು ಬೆಳ ಕಂಡಿಗಳಲ್ಲಿ ನಿಂತು, ತೆರೆದ ಕಣ್ಣುಗಳಿಂದ ಬೆಬ್ಬೆರಗಾಗಿ ಆ ಅಪೂರ್ವ ದೃಶ್ಯವನ್ನು ನೋಡುತ್ತಿದ್ದರು.

ಅಷ್ಟರಲ್ಲಿ ನಾರಣಕ್ರಮಿತನು ಅಲ್ಲಿಗೆ ಬಂದನು. ಹಣದ ರಾಶಿಯನ್ನು ಕಂಡು ಅವನು ಚಕಿತನಾಗಿ ಸನ್ಯಾಸಿಯ ಮುಖ ನೋಡಿದನು. ಸಳೆಮಿಂಚಿನ ಎರಡು ಬಳ್ಳಿಗಳು ಒಂದನ್ನೊಂದು ಸಂಧಿಸಿದಂತೆ ಆ ಇಬ್ಬರ ನೋಟಗಳು ಸಂಧಿಸಿ ಸ್ಪರ್ಧೆ ಆಕ್ರೋಶಗಳ ಕಿಡಿಗಳು ಹಾರಿದವು. ಕಾದಲು ಅಣಿಯಾದ ಕಾಳಿಂಗಗಳಂತೆ ಅವರು ಬುಸುಗುಟ್ಟಿದರು.

ಕ್ರಮಿತನು ಒಂದೇ ಹಾರಿಗೆ ಬಿಜ್ಜಳನ ಪಾರ್ಶ್ವವನ್ನು ಸೇರಿ ರಾಜಪುರೋಹಿತನ ವಜ್ರಖಚಿತವಾದ ಮಂತ್ರದಂಡವನ್ನು ಆಡಿಸುತ್ತ “ಆಜ್ಞೆಮಾಡಿರಿ, ಮಹಾಪ್ರಭು. ಈ ವಂಚಕನನ್ನು ಬಂಧಿಸಿ ಸೆರೆಯಲ್ಲಿಡುತ್ತೇನೆ. ಅವನಾರೆಂಬುದು ನನಗೆ ತಿಳಿದಿದೆ,” ಎಂಬ ಅಬ್ಬರಿಸಿದನು.