ಪುಟ:ಕ್ರಾಂತಿ ಕಲ್ಯಾಣ.pdf/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೨೮೨

ಕ್ರಾಂತಿ ಕಲ್ಯಾಣ

ಬಿಜ್ಜಳನು ಅಸಮಾಧಾನದಿಂದ ಕ್ರಮಿತನನ್ನು ದುರುದುರು ನೋಡಿ, ಸನ್ಯಾಸಿಯ ಕಡೆ ತಿರುಗಿ,

“ಈ ಹೊನ್ನರಾಶಿಯಿಂದ ಭೂಮಿ ಕಾಣಿ, ಪ್ರತಿಷ್ಠೆ ಗೌರವ, ದೇಶಕೋಶ, ಅಧಿಕಾರ ಮಂಡಲ, ಇವೆಲ್ಲವನ್ನೂ ಕೊಳ್ಳಬಹುದು. ಆದರೆ ಬಿಜ್ಜಳನನ್ನು ಕೊಳ್ಳಬಲ್ಲ ಸಂಪತ್ತು ಜಗತ್ತಿನಲ್ಲಿ ಇನ್ನೂ ಸೃಷ್ಟಿಯಾಗಿಲ್ಲ. ಬಿಜ್ಜಳನನ್ನು ಆಜ್ಞೆಮಾಡಬಲ್ಲ ಶಕ್ತಿ ಜಗತ್ತಿನಲ್ಲೆಲ್ಲಿಯೂ ಇರುವುದಿಲ್ಲ. ಇವನು ಭುಜಬಲ ಚಕ್ರವರ್ತಿ, ನಿಶ್ಯಂಕಮಲ್ಲ, ಶನಿವಾರಸಿದ್ದಿ ! ಇದನ್ನು ತಿಳಿಯಲಿ ನಿಮ್ಮ ಮಹಾಸಂಘ,”

-ಎಂದು ಹೇಳಿ ಕ್ರಮಿತನೊಡನೆ ಅಲ್ಲಿಂದ ನಿಷ್ಕಮಿಸಿದನು.

ಬಿಜ್ಜಳನು ಹೋದಕಡೆಯೇ ನಿರಾಶಯ ಸ್ತಬ್ಧದೃಷ್ಟಿಯಿಂದ ನೋಡುತ್ತ ಸನ್ಯಾಸಿ, ಕರ್ತವ್ಯಮೂಢನಂತೆ ಕೆಲವು ಕ್ಷಣಗಳು ನಿಂತನು. ಬಳಿಕ ಅವನು ಚೇತರಿಸಿಕೊಂಡಂತೆ ತಲೆಯಾಡಿಸಿ, ಹಣವನ್ನು ಜಾಳಿಗೆಗಳಿಗೆ ತುಂಬುವಂತೆ ತನ್ನ ಕಡೆಯವರಿಗೆ ಆಜ್ಞೆ ಮಾಡಿದನು.

ರಾಜಭಟ ಪಸಾಯಿತ ಹೆಗ್ಗಡೆಗಳು ಬಾಗಿಲು ಬೆಳಕಂಡಿಗಳಲ್ಲಿ ನಿಂತು ನೋಡುತ್ತಿದ್ದಂತೆ ಸನ್ಯಾಸಿಯ ಕಡೆಯವರು ಸ್ವರ್ಣ ಮುದ್ರೆಗಳನ್ನು ಜಾಳಿಗೆಗಳಿಗೆ ತುಂಬಿ ಪೆಟ್ಟಿಗೆಗಳಲ್ಲಿಟ್ಟು ತಲೆಯಮೇಲೆ ಹೊತ್ತು ಸಾಲಾಗಿ ಹೊರಗೆ ಹೋದರು.

ಕೊನೆಯಲ್ಲಿ ಸನ್ಯಾಸಿ, ಹೆಗ್ಗಡೆಗಳಲ್ಲಿ ಹಿರಿಯನನ್ನು ಕರೆದು, ಜಾಳಿಗೆಯೊಂದನ್ನು ಕೊಟ್ಟು “ಅರಮನೆಯ ಪರಿವಾರಕ್ಕೆ ಹಂಚಿರಿ,” ಎಂದು ಹೇಳಿದಾಗ ಹೆಗ್ಗಡೆ ನಿರಾಕರಿಸಿ, “ಈ ವಿಚಾರ ಪ್ರಭುಗಳಿಗೆ ತಿಳಿದರೆ ನನ್ನ ತಲೆ ಕೆಳಗುರುಳುತ್ತದೆ,” ಎಂದನು.

ಸ್ವರ್ಣಕಾರರು ಮುತ್ತುರತ್ನಗಳನ್ನು ತಟ್ಟೆಯಲ್ಲಿಟ್ಟು ಬಹಿರಂಗವಾಗಿ ಅಂಗಡಿ ಮುಂಗಟ್ಟುಗಳಲ್ಲಿ ಮಾರುತ್ತಿದ್ದ ಕಾಲ ಅದು. ಸರ್ವಾಲಂಕೃತೆಯಾದ ಹೆಣ್ಣು ನಡುರಾತ್ರಿಯಲ್ಲಿ ನಿರ್ಭಿತಿಯಿಂದ, ಏಕಾಕಿನಿಯಾಗಿ ನಗರದ ಬೀದಿಗಳಲ್ಲಿ ಸಂಚರಿಸುತಿದ್ದಳು ಆಗ. ನಾಗರಿಕರು ಮನೆ ಬಾಗಿಲುಗಳನ್ನು ತೆರೆದು ನಿರ್ಭಯವಾಗಿ ಮಲಗಿ ನಿದ್ರೆ ಮಾಡುತ್ತಿದ್ದರು. ರಾಜಮಾರ್ಗಗಳಲ್ಲಿ ಸಿಕ್ಕ ಹಣದ ಜಾಳಿಗೆ ಆಭರಣಗಳನ್ನು ಕಳೆದುಕೊಂಡವರು ಬಂದು ತೆಗೆದುಕೊಳ್ಳಲೆಂದು ಪಾರ್ಶ್ವದ ಮರಗಳಿಗೆ ತಗುಲಿ ಹಾಕುತ್ತಿದ್ದರು.

ಸನ್ಯಾಸಿಯೂ, ಹೊನ್ನು ತುಂಬಿದ ಪೆಟ್ಟಿಗೆಗಳನ್ನು ಹೊತ್ತ ಅವನ ಕಡೆಯವರೂ ಅರಮನೆಯ ಮಹಾದ್ವಾರವನ್ನು ದಾಟಿ ಹೋದಮೇಲೆ, ಹೆಗ್ಗಡೆ ಪಸಾಯಿತ ಪರಿವಾರದವರು ನಿಟ್ಟುಸಿರಿಟ್ಟು ಹೇಳಿದರು :