ಪುಟ:ಕ್ರಾಂತಿ ಕಲ್ಯಾಣ.pdf/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಮಾನವನು ದಾನವನಾದಾಗ

೨೮೩

“ಮನೆಗೆ ಬಂದ ಮಹಾಲಕ್ಷ್ಮಿಯನ್ನು ಪ್ರಭುಗಳು ನಿರಾಕರಿಸಿ ಹೊರಗೆ ಕಳುಹಿಸಿದರು. ಮುಂಬರುವ ವಿಪತ್ತಿನ ಸೂಚನೆ ಇದು!” ಎಂದು.

ಅರಮನೆಯ ಆ ಭಾಗಕ್ಕೆ ಅಂದಿನಿಂದ ಜನರಲ್ಲಿ "ಹೊನ್ನಮ್ಮನ ಚಾವಡಿ” ಎಂಬ ಹೆಸರು ಪ್ರಚಾರಕ್ಕೆ ಬಂದಿತು.

* * *

ಮರಣದಂಡನೆಯ ಆಜ್ಞೆ ಕಾರ್ಯಗತವಾಗಲು ಒಂದು ದಿನ ಮಾತ್ರ ಉಳಿದಿತ್ತು. ನಗರದ ಈಶಾನ್ಯದಲ್ಲಿದ್ದ ಬರಮಪ್ಪನ ಗುಡ್ಡದಡಿಯಲ್ಲಿ ಎತ್ತರವಾದ ಶೂಲದ ಮರವೂ, ವೇದಿಕೆ ವಧಾಪೀಠಗಳೂ ಸಿದ್ಧವಾಗುತ್ತಿದ್ದವು. ಬಡಗಿ, ಲೋಹಕಾರ, ಚಂಗೂಲಿಗಳ ದೊಡ್ಡ ತಂಡ ಮೂರು ರಾತ್ರಿ ಮೂರು ಹಗಲು ಬಿಡುವಿಲ್ಲದೆ ಕೆಲಸಮಾಡಿ ವಧಾಸ್ಥಾನಕ್ಕೆ ಎದುರಾಗಿ ತುಸು ದೂರದಲ್ಲಿ ಧರ್ಮಾಧಿಕರಣದ ಆಹ್ವಾನ ಪಡೆದ ಪ್ರೇಕ್ಷಕರಿಗಾಗಿ ಅಟ್ಟಣೆಗಳನ್ನು ಕಟ್ಟುತ್ತಿದ್ದರು. ನಗರದ ಸಾಮಾನ್ಯ ಜನರು ಸಣ್ಣ ಗುಂಪುಗಳಾಗಿ ಬಂದು, ನಡೆಯುತ್ತಿದ್ದ ಸಿದ್ಧತೆಗಳನ್ನು ಮೌನವಾಗಿ ನಿಂತು ನೋಡಿ ಹಿಂದಿರುಗುತ್ತಿದ್ದರು. ನೂತನ ಮಹಾಸೇನಾನಿ ಮಾಧವ ದಂಡನಾಯಕನ ಸೈನ್ಯಪಡೆಗಳು ಆ ಪ್ರದೇಶದಲ್ಲಿ ಎಲ್ಲ ಕಡೆ ಶಾಂತಿ ರಕ್ಷಣೆಗಾಗಿ ಕಾವಲು ಕೊಡುತ್ತಿದ್ದುವು.

ಅಂದು ಪ್ರಾತಃಕಾಲ ಮಹಮನೆಯ ಆವರಣದಲ್ಲಿ ಗಂಭೀರ ಶಾಂತಿ ನೆಲೆಸಿತ್ತು. ಅನುಭವಮಂಟಪದ ಪ್ರಾರ್ಥನಾಸಭೆ ಮುಗಿದು, ಒದಗಿ ಬಂದಿದ್ದ ಆ ಕಠಿಣ ಪ್ರಸಂಗಕ್ಕಾಗಿ ಹೊಸದಾಗಿ ಸ್ವರಸಂಯೋಜನೆ ಮಾಡಿದ್ದ ಬಸವಣ್ಣನವರ ವಚನವೊಂದನ್ನು ಶರಣಶರಣೆಯರು ಭಕ್ತಿ ಉದ್ರೇಕಗಳ ತುಂಬುಕಂಠದಿಂದ ಭಾವಪೂರ್ಣವಾಗಿ ಹಾಡುತ್ತಿದ್ದರು :
“ನಾಳೆ ಬರುವುದು ನಮಗಿಂದೇ ಬರಲಿ.
ಇಂದು ಬಪ್ಪುದು ನಮಗೀಗಲೇ ಬರಲಿ,
ಇದಕಾರಂಜುವರು, ಇದಕಾರಳಕುವರು ?
“ಜಾತಸ್ಯ ಮರಣಂ ಧ್ರುವಂ' ಎಂಬುದಾಗಿ
ನಮ್ಮ ಕೂಡಲ ಸಂಗಮ ದೇವರು ಬರೆದ ಬರಹವ
ತಪ್ಪಿಸುವರೆ ಹರಿ ಬ್ರಹ್ಮಾದಿಗಳವಲ್ಲ.”
ವಚನ ಗೀತದ ಆ ನುಡಿಗಳು, ಉಕ್ಕಿ ಹರಿಯುವ ಕೈರ್ಯ ವಿರಕ್ತಿಗಳ ಹೆದ್ದೊರೆಯಂತೆ ಮಹಮನೆಯ ಎಲ್ಲ ಕಡೆ ಹರಿದು ಗಂಭೀರ ಶಾಂತಿಯನ್ನು ಸೃಷ್ಟಿಸಿದ್ದವು.