ಪುಟ:ಕ್ರಾಂತಿ ಕಲ್ಯಾಣ.pdf/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೨೮೪

ಕ್ರಾಂತಿ ಕಲ್ಯಾಣ

ಸಭೆ ಮುಗಿದು ಶರಣೆಯರು ಹೊರಗೆ ಬರುತ್ತಿದ್ದಂತೆ, ಶೀಲವಂತನ ಬಂಧನವಾದಂದಿನ ದಿನದಿಂದ ಮಹಮನೆಯಲ್ಲಿ ಆಶ್ರಯ ಪಡೆದಿದ್ದ ಲಾವಣ್ಯವತಿ ನೀಲಲೋಚನೆಯ ಬಳಿ ಬಂದು, “ನಿನ್ನಿಂದ ನನಗೊಂದು ಸಹಾಯವಾಗಬೇಕಾಗಿದೆ, ಅಕ್ಕ” ಎಂದಳು.

“ಏನಾಗಬೇಕಾಗಿದೆ? ಸಂಕೋಚವಿಲ್ಲದೆ ಹೇಳು.”
“ನಾನು ಸರ್ವಾಧಿಕಾರಿ ಬಿಜ್ಜಳರಾಯರನ್ನು ನೋಡಬೇಕಾಗಿದೆ. ನೀನು ಪತ್ರ ಬರೆದು ಸಂದರ್ಶನಕ್ಕೆ ಏರ್ಪಡಿಸಬೇಕು.”

ನೀಲಲೋಚನೆ ಒಪ್ಪಿಕೊಂಡಳು. ಅವಳು ವಾಸಗೃಹವನ್ನು ಸೇರಿದ ಕೂಡಲೆ ಪತ್ರ ಸಿದ್ಧವಾಗಿ ಅವಸರದ ಭಟನಿಂದ ಬಿಜ್ಜಳನಿಗೆ ಕಳುಹಿಸಲ್ಪಟ್ಟಿತು. ನೀಲಲೋಚನೆ ಬರೆದಿದ್ದಳು :

“ತಂದೆ, ಪತಿ, ಮಾವ, ಈ ಮೂವರನ್ನೂ ಏಕ ಕಾಲದಲ್ಲಿ ಕಳೆದು ಕೊಳ್ಳಲಿರುವ ನಿರ್ಭಾಗ್ಯ ಹೆದ್ದೂಬ್ಬಳು ನಿಮ್ಮ ಸಂದರ್ಶನಕ್ಕೆ ಬರುವವಳಿದ್ದಾಳೆ. ಕರುಣೆಯಿಂದ ಅವಳ ಬೇಡಿಕೆಯನ್ನು ನಡೆಸಿಕೊಡಬೇಕಾಗಿ ಬೇಡುತ್ತೇನೆ.

ಇತಿ ನಿಮ್ಮ ಅಭಾಗಿನಿ ತಂಗಿ,
ನೀಲಲೋಚನೆ.”

ಪತ್ರವನ್ನು ಓದಿ ಬಿಜ್ಜಳನು ಸ್ವಲ್ಪ ಹೊತ್ತು ಯೋಚಿಸಿ, “ಇಂದು ಅಪರಾಹ್ನ ಎರಡನೆಯ ಜಾವದಲ್ಲಿ ಸಮುಖದ ಚಾವಡಿಗೆ ಬರುವಂತೆ ತಿಳಿಸು,” ಎಂದು ಅವಸರದ ಭಟನಿಗೆ ಹೇಳಿದನು.

ಅಂದು ಲಾವಣ್ಯವತಿ ಹೆಚ್ಚು ಹೊತ್ತು ಪೂಜೆಗೆ ಕುಳಿತಳು. ಅಂಗೈಯಲ್ಲಿ ಬೆಳಗುವ ಲಿಂಗಮೂರ್ತಿಯನ್ನು ಏಕಾಗ್ರತೆಯ ದೃಷ್ಟಿ ಕುಸುಮಗಳಿಂದ ಅರ್ಚಿಸಿ, “ಮರಣಕ್ಕಂಜದ ಶರಣರನ್ನು ಮಾನವ ಮಾತ್ರರ ದಂಡಾಜ್ಞೆಯಿಂದ ರಕ್ಷಿಸುವೆ ನೆಂಬುದು ಅವಿವೇಕ, ಚೆನ್ನಬಸವಣ್ಣನವರು, ಮಾಚಿದೇವರು, ಕಲ್ಯಾಣದ ಶ್ರೀಮಂತ ನಾಗರಿಕರು, ಐನೂರ್ವರು ಸ್ವಾಮಿಗಳ ಮಹಾಸಂಘ, ಇವರೆಲ್ಲರಿಂದ ಆಗದ ಕಾರ್ಯ ನನ್ನಿಂದಾಗುವುದೆಂಬುದು ಭ್ರಮಾತ್ಮಕ ಕಲ್ಪನೆ. ನನ್ನ ಕರ್ತವ್ಯವನ್ನು ನಾನು ಮಾಡುತ್ತೇನೆ. ಫಲಾಫಲಗಳು ನಿನಗೆ ಅರ್ಪಿತ” ಎಂದು ಬೇಡಿಕೊಂಡಳು.

ಅವಳು ಪೂಜೆಯಿಂದೆದ್ದು ಪ್ರಸಾದ ರೂಪವಾದ ಹಣ್ಣು ಹಾಲುಗಳನ್ನು ತೆಗೆದುಕೊಂಡು, ಹೊರಡಲು ಸಿದ್ಧಳಾಗಿ ನಾಗಲಾಂಬೆ ನೀಲಲೋಚನೆಯರ ಪಾದಗಳಿಗೆ ನಮಸ್ಕಾರ ಮಾಡಿದಾಗ, “ಸಂಗಡ ದಾಸಿಯೊಬ್ಬಳನ್ನು ಕರೆದುಕೊಂಡು ಹೋಗು,” ಎಂದಳು ನೀಲಲೋಚನೆ.