ಪುಟ:ಕ್ರಾಂತಿ ಕಲ್ಯಾಣ.pdf/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೨೮೬

ಕ್ರಾಂತಿ ಕಲ್ಯಾಣ


ಕೂಡಾ ನಿರ್ಭಾಗ್ಯಳಾದೆ!” -ಎಂದು ಬಿರುನುಡಿಯಾಡಿದನು.

“ನಾನು ನಿರ್ಭಾಗ್ಯಳಲ್ಲ. ಸರ್ವಾಧಿಕಾರಿ ಬಿಜ್ಜಳರಾಯರು ನನಗೆ ಕರುಣೆಯಿಂದ ದರ್ಶನ ಕೊಟ್ಟದ್ದು ನನ್ನ ಸೌಭಾಗ್ಯದ ಗುರುತು. ಈಗ ನನ್ನ ಸೌಭಾಗ್ಯ ದೌರ್ಭಾಗ್ಯ ಜೀವನ ಮರಣಗಳೂ ನಿಮ್ಮ ಕೈಯಲ್ಲಿವೆ.” -ಲಾವಣ್ಯವತಿ ನಮ್ರತೆಯಿಂದ ಬಿನ್ನವಿಸಿಕೊಂಡಳು.

ಬಿಜ್ಜಳನು ಕ್ಷಣಕಾಲ ಯೋಚಿಸಿ : “ನೀನು ನನ್ನಿಂದ ಅಪೇಕ್ಷಿಸುವುದೇನು?” ಎಂದು ಕೇಳಿದನು.
“ನನ್ನ ತಂದೆ, ಪತಿ, ಮಾವ-ಈ ಮೂವರ ಪ್ರಾಣಭಿಕ್ಷೆ.”
-ಎಂದು ಲಾವಣ್ಯವತಿ ಮೊಣಕಾಲೂರಿ ಕುಳಿತು ಸೆರಗೊಡ್ಡಿ ಬೇಡಿಕೊಂಡಳು. ಆಗ ಅವಳು ಕುಳಿತಿದ್ದ ರೀತಿ, ಚಾಚಿದ ಕೈಗಳ ಸುಂದರ ಹರವು, ಕಣ್ಣುಗಳ ಕರುಣಾ ದೃಷ್ಟಿ, ಚಿತ್ರಕಾರನ ಶ್ರೇಷ್ಟ ಕಲಾಕೃತಿಯಂತೆ ಕಂಡಿತು ಬಿಜ್ಜಳನಿಗೆ.

ಆ ಕರುಣಾವ್ಯಂಜನ ಸುಂದರ ಚಿತ್ರವನ್ನು ಕೆಲವು ಕ್ಷಣಗಳು ಅವನು ಎವೆಯಿಕ್ಕದೆ ನೋಡುತ್ತಿದ್ದು ಬಳಿಕ,

“ವರ್ಣಸಂಕರದ ಘೋರ ಅಪರಾಧಕ್ಕಾಗಿ ಅವರು ಮರಣದಂಡನೆಗೆ ಗುರಿಯಾಗಿದ್ದಾರೆ, ಲಾವಣ್ಯವತಿ. ಸಮಾಜಕ್ಕೆ ತಮ್ಮಿಂದಾಗಿರುವ ಅನ್ಯಾಯವನ್ನು ಸರಿಪಡಿಸಿ ಶಿಕ್ಷೆಯಿಂದ ಮುಕ್ತರಾಗಲು ಈಗಲೂ ಅವರಿಗೆ ಅವಕಾಶವಿದೆ. ಮೊಂಡುತನದಿಂದ ಅವರು ಈ ಮಾರ್ಗವನ್ನು ನಿರಾಕರಿಸಿದ್ದಾರೆ.”

-ಎಂದು ಗಂಭೀರವಾಗಿ ಹೇಳಿದನು.
“ಯಾವುದು ಆ ಮಾರ್ಗ?” -ಲಾವಣ್ಯವತಿ ಆತುರದಿಂದ ಪ್ರಶ್ನಿಸಿದಳು.

"ಅಷ್ಟೇನು ಕಠಿಣವಾದ ಮಾರ್ಗವಲ್ಲ ಅದು. ಶರಣ ಧರ್ಮವನ್ನು ಪರಿತ್ಯಜಿಸಿ, ನಿನ್ನ ಮತ್ತು ಶೀಲವಂತನ ಮದುವೆಯನ್ನು ರದ್ದುಪಡಿಸುವುದು. ಅದರಿಂದ ನಿನ್ನ ತಂದೆ ಮಂತ್ರಿಪದವಿ ಗೌರವಗಳನ್ನು ಪುನಃ ಪಡೆಯುವರು. ನೀನು ಈ ಅಧಃಪಾತದ ಅನಪೇಕ್ಷಿತ ವಿವಾಹ ಬಂಧನದಿಂದ ಮುಕ್ತಳಾಗುವೆ. ನಿನ್ನ ಇಚ್ಛೆಬಂದಂತೆ ಸ್ವತಂತ್ರ ಜೀವನ ನಡೆಸುವ ಅವಕಾಶವನ್ನು ಪುನಃ ಪಡೆಯುವೆ,” –ಬಿಜ್ಜಳನು ಉತ್ತರಕೊಟ್ಟನು.

ಆ ಅನೀತಿಯ ಸಲಹೆ ಕೇಳಿ ಲಾವಣ್ಯವತಿ ಬಿಚ್ಚಿದಳು. ತಟ್ಟನೆ ಎದ್ದುನಿಂತು ಬದಲಿಸಿದ ಕಂಠದಿಂದ, “ನನಗೆ ಸ್ವಾತಂತ್ರ್ಯ ಕೊಡಲು ಇಚ್ಛಿಸುವ ನೀವು ನನ್ನ ತಂದೆ, ಮಾವ, ಇವರಿಗೆ ಅದನ್ನು ನಿರಾಕರಿಸುತ್ತಿರುವುದೇಕೆ ? ಕಲ್ಪಿತ ಅವಾಸ್ತವ ಅಪರಾಧಗಳಿಗಾಗಿ ನನ್ನ ಪತಿಯನ್ನು ಬಂಧಿಸಿ ವಿಚಾರಣೆಯಿಲ್ಲದೆ ಮರಣದಂಡನೆ ವಿಧಿಸಿದ ಕಾರಣವೇನು? ದಯೆಮಾಡಿ ಉತ್ತರ ಕೊಡಬೇಕಾಗಿ ಬೇಡುತ್ತೇನೆ,” ಎಂದು ಬಿನ್ನವಿಸಿಕೊಂಡಳು.